ADVERTISEMENT

ಚಾಮರಾಜನಗರ | ವಿಡಿಯೊ ಸೃಷ್ಟಿಸಿದ ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 8:31 IST
Last Updated 2 ಸೆಪ್ಟೆಂಬರ್ 2023, 8:31 IST
ಕೊಲೆ (ಪ್ರಾತಿನಿಧಿಕ ಚಿತ್ರ)
ಕೊಲೆ (ಪ್ರಾತಿನಿಧಿಕ ಚಿತ್ರ)   

ಚಾಮರಾಜನಗರ: ನಗರದ ಗುಂಡ್ಲುಪೇಟೆ ರಸ್ತೆಯ ಹುದಾ ಪಬ್ಲಿಕ್ ಶಾಲೆಯ ಬಳಿ ಬುಧವಾರ ರಾತ್ರಿ ತೀವ್ರ ಗಾಯಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ತಾಲ್ಲೂಕಿನ ದಡದಹಳ್ಳಿ ಗ್ರಾಮದ ನಿವಾಸಿ ರಮೇಶ್ ಎಂಬುವವರ ಸಾವಿನ ಬಗ್ಗೆ ವ್ಯಾಪಕ ಅನುಮಾನ ವ್ಯಕ್ತವಾಗಿದೆ.

ನಗರದ ಸಂಚಾರ ಠಾಣೆಯಲ್ಲಿ ಗುರುವಾರ ಮಧ್ಯಾಹ್ನ ಅಪಘಾತ ಪ್ರಕರಣ ದಾಖಲಾಗಿದೆ. ರಮೇಶ್ ಪತ್ನಿ ಪ್ರತಿಮಾ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮೇಶ್ ಅವರ ಮರ್ಮಾಂಗದ ಭಾಗದಲ್ಲಿ ತೀವ್ರವಾಗಿ ಗಾಯವಾಗಿತ್ತು. ಅವರು ನರಳಾಡುತ್ತಿರುವ ವಿಡಿಯೊ ತುಣುಕೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಇದು ಅಪಘಾತವಲ್ಲ, ಮರ್ಮಾಂಗ ಕತ್ತರಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪಗಳನ್ನು ವಿಡಿಯೊ ನೋಡಿದವರು ಮಾಡುತ್ತಿದ್ದಾರೆ.

ADVERTISEMENT

ಘಟನೆ ವಿವರ

ರಮೇಶ್ (44) ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 7.30ಕ್ಕೆ ಹುದಾ ಪಬ್ಲಿಕ್ ಸ್ಕೂಲ್ ಕಾಂಪೌಂಡ್ ಹತ್ತಿರ ಇರುವ ಸಲೀಂ ಗ್ಯಾರೇಜ್ ರಸ್ತೆಯಲ್ಲಿ ಬಿದ್ದಿದ್ದ ಅವರನ್ನು ಯಡಬೆಟ್ಟದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮರ್ಮಾಂಗದ ಭಾಗಕ್ಕೆ ತೀವ್ರ ಗಾಯವಾಗಿದ್ದರಿಂದ ರಸ್ತಸ್ರಾವವಾಗಿತ್ತು. ಹೆಚ್ಚುವರಿ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದರು.

ರಮೇಶ್ ಪತ್ನಿ ಪ್ರತಿಮಾ ನೀಡಿದ ದೂರಿನಲ್ಲಿ ‘ಗುಂಡ್ಲುಪೇಟೆ ರಸ್ತೆಯ ಹುದಾ ಪಬ್ಲಿಕ್ ಸ್ಕೂಲ್ ಕಾಂಪೌಂಡ್ ಬಳಿಯಿರುವ ಸಲೀಂ ಗ್ಯಾರೇಜ್ ಹತ್ತಿರ ನಿಂತಿದ್ದಾಗ ಲಾರಿಯೊಂದು ಅತಿ ವೇಗದಿಂದ ಬಂದು ಡಿಕ್ಕಿ ಹೊಡೆದಿದೆ ಎಂಬುದಾಗಿ ಮಾಹಿತಿ ಸಿಕ್ಕಿದೆ’ ಎಂದು ತಿಳಿಸಿದ್ದಾರೆ.

ಅನುಮಾನ

‘ಲಾರಿ ಅಪಘಾತವಾಗಿದ್ದರೆ ಅಥವಾ ದೇಹದ ಮೇಲೆ ಹರಿದು ಹೋಗಿದ್ದರೆ, ದೇಹ ನಜ್ಜುಗುಜ್ಜಾಗ ಬೇಕಿತ್ತು. ಆದರೆ ಮರ್ಮಾಂಗದ ಭಾಗ ಬಿಟ್ಟು ಬೇರೆಲ್ಲೂ ಗಾಯವಾಗಿಲ್ಲ ಎಂದು ದಲಿತ ಸಮುದಾಯದ ಮುಖಂಡರು ಖಾಸಗಿಯಾಗಿ ಹೇಳುತ್ತಾರೆ. ಬಹಿರಂಗ ವಾಗಿ ಈ ಬಗ್ಗೆ ಮಾತನಾಡುತ್ತಿಲ್ಲ. ಪೊಲೀಸರು ಸ್ವಯಂ ಪ್ರೇರಿತರಾಗಿ ತನಿಖೆ ನಡೆಸಬೇಕು ಎಂಬುದು ಅವರ ಆಗ್ರಹ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ‘ಗುರುವಾರ ಮಧ್ಯಾಹ್ನ ಅಪಘಾತ ಪ್ರಕರಣ ದಾಖಲಾಗಿದೆ. ಪ್ರಕರಣದ ವಿಚಾರವಾಗಿ ಬೇರೆ ದೂರು ಅಥವಾ ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.