ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಚಾಮರಾಜನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ (ಸಿಮ್ಸ್) ಡೀನ್ ಮತ್ತು ನಿರ್ದೇಶಕ ಡಾ.ಜಿ.ಎಂ.ಸಂಜೀವ್ ವಿರುದ್ಧ ತನಿಖೆ ನಡೆಸಲು ಸಮಿತಿ ರಚಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶಿಸಿದೆ.
ಡೀನ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಕೋರಿ, ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಪತ್ರಬರೆದಿದ್ದರು.
ಇದಕ್ಕೆ ಸ್ಪಂದಿಸಿದ್ದ ಸಿ.ಎಂ, ಆರೋಪಗಳ ಬಗ್ಗೆ ಪರಿಶೀಲಿಸಿ ನಡೆಸಿ ವರದಿ ನೀಡುವಂತೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ ಅವರಿಗೆ ಸೂಚಿಸಿದ್ದರು.
ತಕ್ಷಣವೇ ಕ್ರಮ ತನಿಖೆಗೆ ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರಿಗೆ ಸೂಚಿಸಿದ್ದು, ಅವರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ರವಿ ಮತ್ತು ಮುಖ್ಯ ಆಡಳಿತಾಧಿಕಾರಿ ಕೆ.ಎ.ಉಮಾ ಅವರನ್ನೊಳಗೊಂಡ ತನಿಖಾ ಸಮಿತಿ ರಚಿಸಿದ್ದಾರೆ.
'ಸಮಿತಿಯು ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಸಿಮ್ಸ್ ಗೆ ತಕ್ಷಣವೇ ಭೇಟಿ ನೀಡಿ ಪರಿಶೀಲಿಸಿ, ಕೂಡಲೇ ವರದಿ ನೀಡಬೇಕು' ಎಂದು ನವೀನ್ ರಾಜ್ ಸಿಂಗ್ ಆದೇಶದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.