ಚಾಮರಾಜನಗರ: ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಹೆಸರು ಕೇಳಿ ಬಂದಿದ್ದ ವಿಧಾನಸಭಾ ಉಪಾಧ್ಯಕ್ಷ ಹುದ್ದೆಗೆ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ನಾಮಪತ್ರ ಸಲ್ಲಿಸಿದ್ದಾರೆ.
ಗುರುವಾರ ಉಪಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಲಮಾಣಿ ಅವರು ಆಯ್ಕೆಯಾಗುವುದು ಖಚಿತವಾಗಿದೆ.
ಉಪ್ಪಾರ ಸಮುದಾಯದ ಏಕೈಕ ಶಾಸಕರಾಗಿದ್ದ ಸಿ.ಪುಟ್ಟರಂಗಶೆಟ್ಟಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದಾಗ ಪುಟ್ಟರಂಗಶೆಟ್ಟಿ ಅವರೂ ಹೋಗಿದ್ದರು. ಸಚಿವರ ಪಟ್ಟಿಯಲ್ಲಿ ಪುಟ್ಟರಂಗಶೆಟ್ಟಿ ಹೆಸರು ಇತ್ತು. ಕೊನೆ ಕ್ಷಣದಲ್ಲಿ ಹೆಸರನ್ನು ಕೈಬಿಡಲಾಗಿತ್ತು.
ಹಿಂದುಳಿದ ಸಮುದಾಯದರಾದ ಪುಟ್ಟರಂಗಶೆಟ್ಟಿಯವರಿಗೆ ಸ್ಥಾನಮಾನ ನೀಡಬೇಕು ಎಂಬ ಉದ್ದೇಶದಿಂದ ಅವರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿತ್ತು.
ಆದರೆ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಪುಟ್ಟರಂಗಶೆಟ್ಟಿಯವರಿಗೆ ಉಪಸಭಾಧ್ಯಕ್ಷರಾಗಲು ಇಷ್ಟವಿರಲಿಲ್ಲ. ಬಹಿರಂಗವಾಗಿಯೇ ‘ನಾನು ಆ ಸ್ಥಾನವನ್ನು ಒಪ್ಪುವುದಿಲ್ಲ. ಆ ಹುದ್ದೆಯಲ್ಲಿದ್ದರೆ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಪ ತರಿಸಿತ್ತು. ‘ಸದ್ಯ ಈ ಹುದ್ದೆಯನ್ನು ಒಪ್ಪಿಕೊಳ್ಳಲೇ ಬೇಕು. ನಂತರ ಸಚಿವ ಸಂಪುಟಕ್ಕೆ ಸೇರಿಸೋಣ’ ಎಂದು ಅವರು ಖಂಡ ತುಂಡವಾಗಿ ಹೇಳಿದ್ದರು. ಆ ಬಳಿಕ ಉಪಸಭಾಧ್ಯಕ್ಷ ಸ್ಥಾನ ಅಲಂಕರಿಸಲು ಪುಟ್ಟರಂಗಶೆಟ್ಟಿ ಒಪ್ಪಿದ್ದರು. ನಗರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ಅವರು, ‘ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಅವರ ತೀರ್ಮಾನದ ವಿರುದ್ಧ ನಾನು ಹೋಗಲಾರೆ. ಹಾಗಾಗಿ, ಉಪಸಭಾಧ್ಯಕ್ಷನಾಗಲು ಒಪ್ಪಿಕೊಂಡಿದ್ದೇನೆ’ ಎಂದು ಹೇಳಿದ್ದರು.
ದಿಢೀರ್ ಬದಲಾವಣೆ: ಉಪಸಭಾಧ್ಯಕ್ಷ ಜವಾಬ್ದಾರಿ ವಹಿಸಲು ಮಾನಸಿಕವಾಗಿ ಪುಟ್ಟರಂಗಶೆಟ್ಟಿ ಸಿದ್ಧರಾಗಿದ್ದರು. ಗುರುವಾರ ನಡೆಯುವ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಬೇಕಿತ್ತು. ಕಾಂಗ್ರೆಸ್ ಪಕ್ಷ ಕೊನೆ ಕ್ಷಣದಲ್ಲಿ ರುದ್ರಪ್ಪ ಲಮಾಣಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ಲಮಾಣಿ ಅವರು ಬಂಜಾರ ಸಮುದಾಯದ ಶಾಸಕರಾಗಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಸಚಿವ ಸ್ಥಾನ ಅವರ ಕೈತಪ್ಪಿತ್ತು. ಹಿಂದುಳಿದ ಬಂಜಾರ ಸಮುದಾಯಕ್ಕೂ ಸರ್ಕಾರದಲ್ಲಿ ಪ್ರಾತಿನಿಧ್ಯ ಕೊಡುವ ಉದ್ದೇಶದಿಂದ ಕಾಂಗ್ರೆಸ್ ಅವರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಹುದ್ದೆ ಇಷ್ಟ ಇಲ್ಲದಿದ್ದರೂ, ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಪುಟ್ಟರಂಗಶೆಟ್ಟಿ ಒಪ್ಪಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಪಕ್ಷವು ಪುಟ್ಟರಂಗಶೆಟ್ಟಿ ಹೆಸರು ಕೈಬಿಟ್ಟಿದೆ ಎನ್ನಲಾಗಿದೆ.
ಉಪಸಭಾಧ್ಯಕ್ಷನಾದರೆ ಜಿ.ಪಂ. ತಾ.ಪಂ. ಚುನಾವಣೆ ಎದುರಿಸಲು ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿದ್ದೆ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರ ಶಾಸಕ
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಉಪಸಭಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪರಿಗಣಿಸದಿರುವ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುಟ್ಟರಂಗಶೆಟ್ಟಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಹುದ್ದೆ ನನಗೆ ಬೇಡ ಎಂದು ಮತ್ತೆ ಮನವಿ ಮಾಡಿದ್ದೆ. ಬುಧವಾರ ಸಂಜೆ 5 ಗಂಟೆಗೆ ಅವರು ಒಪ್ಪಿಕೊಂಡರು. ಆ ಬಳಿಕ ರುದ್ರಪ್ಪ ಲಮಾಣಿ ಅವರು ನಾಮಪತ್ರ ಸಲ್ಲಿಸಿದರು’ ಎಂದು ಹೇಳಿದರು. ‘ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.