ಚಾಮರಾಜನಗರ: ಜಿಲ್ಲೆಯಲ್ಲಿ ಮೇವಿನ ಕೊರತೆ ಕಂಡು ಬಂದಲ್ಲಿ ಗೋಶಾಲೆ ಸ್ಥಾಪನೆ ಹಾಗೂ ರೈತರಿಗೆ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವು ಸಿಗದೆ ಯಾವುದೇ ಜಾನುವಾರುಗಳು ಮೃತಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಮಂಗಳವಾರ ಹೇಳಿದ್ದಾರೆ.
ಬರ ಪರಿಸ್ಥಿತಿ ಕಾರಣಕ್ಕೆ ಉಂಟಾಗಿರುವ ಮೇವಿನ ಕೊರತೆ ಹಾಗೂ ಕುಡಿಯುವ ನೀರಿನ ಕೊರತೆ ಬಗೆಹರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
‘ಜಿಲ್ಲೆಯಾದ್ಯಂತ 31,943 ಮೇವಿನ ಕಿಟ್‍ಗಳನ್ನು 14,045 ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯ ರೈತರ ಜಾನುವಾರುಗಳಿಗೆ ಮೇವಿನ ಸಮಸ್ಯೆಗಳಿಗೆ ಸ್ಪಂದಿಸಿ ರಾಜ್ಯದಲ್ಲಿಯೇ ಅತಿ ಹೆಚ್ಚು ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವನ್ನು ಒದಗಿಸಲಾಗುತ್ತಿದೆ. ಹನೂರು ತಾಲ್ಲೂಕಿನಲ್ಲಿ ಈಗಾಗಲೇ 17 ಗೋಶಾಲೆಗಳನ್ನು ತೆರೆದು 9,546 ದೊಡ್ಡ ಜಾನುವಾರುಗಳಿಗೆ ಮೇವು ಒದಗಿಸಿ ಆಶ್ರಯ ಕಲ್ಪಿಸಲಾಗಿದೆ. ಹನೂರಿನಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅವಶ್ಯವಿದ್ದ 1 ಕಡೆ ಮೇವು ಬ್ಯಾಂಕ್ ತೆರೆದು 947 ರೈತರಿಗೆ 115 ಟನ್, ಚಾಮರಾಜನಗರ ತಾಲ್ಲೂಕಿನಲ್ಲಿ 228 ರೈತರಿಗೆ 51.92 ಟನ್ ಸೇರಿದಂತೆ 1,175 ರೈತರಿಗೆ ಒಟ್ಟು 166.74 ಟನ್‌ಗಳಷ್ಟು ಮೇವು ಬ್ಯಾಂಕ್ ನಿಧಿಯಿಂದ ವಿತರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಅವಶ್ಯವಿರುವ ಕಡೆ ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಿ ರೈತರ ಜಾನುವಾರುಗಳಿಗೆ ಮೇವು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾನುವಾರುಗಳಿಗೆ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ತೊಟ್ಟಿಯನ್ನು ಸ್ವಚ್ಛ ಗೊಳಿಸಲಾಗುತ್ತಿದೆ. ಅವಶ್ಯವಿರುವ ಕಡೆ ದುರಸ್ತಿಯನ್ನು ಗ್ರಾಮ ಪಂಚಾಯಿತಿಯಿಂದ ಮಾಡಿಸಲಾಗುತ್ತಿದೆ. ಅಲ್ಲದೇ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲಗಳು ಯಾವುದೂ ಇಲ್ಲದಿದ್ದಲ್ಲಿ ಟ್ಯಾಂಕರ್ ಮೂಲಕ ತೊಟ್ಟಿಗೆ ನೀರು ತುಂಬಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದರು.
‘ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿಗೆ ಮಾರ್ಚ್ 5 ರಿಂದ ಮೇ 4ರವರೆಗೆ (ಚಾಮರಾಜನಗರ-71, ಹನೂರು-57, ಗುಂಡ್ಲುಪೇಟೆ-26, ಕೊಳ್ಳೇಗಾಲ-13) ಸೇರಿದಂತೆ ಒಟ್ಟು 168 ಕುಡಿಯುವ ನೀರಿನ ಸಮಸ್ಯೆಗಳ ಕುರಿತು ದೂರುಗಳನ್ನು ಸ್ವೀಕರಿಸಲಾಗಿದ್ದು, ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಂದ ವರದಿಯಾಗುವ ಸುದ್ದಿಗಳನ್ನೂ ಸಾರ್ವಜನಿಕರ ದೂರುಗಳೆಂದೇ ಭಾವಿಸಲಾಗಿದೆ. 168 ದೂರುಗಳಲ್ಲಿ 159 ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ 24 ಗಂಟೆಯೊಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ’ ಎಂದು ಶಿಲ್ಪಾ ನಾಗ್ ಹೇಳಿದ್ದಾರೆ.
‘ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಚಾಮರಾಜನಗರ ನಗರಸಭೆಯ 10 ವಾರ್ಡ್‍ಗಳಲ್ಲಿ 86 ಟ್ಯಾಂಕರ್ ಗುಂಡ್ಲುಪೇಟೆ ಪುರಸಭೆಯ 10 ವಾರ್ಡ್‍ಗಳಲ್ಲಿ 376 ಟ್ಯಾಂಕರ್ ನೀರನ್ನು ಹಾಗೂ ಹನೂರು ಪಟ್ಟಣ ಪಂಚಾಯಿತಿಯಲ್ಲಿ 6 ವಾರ್ಡ್‍ಗಳಲ್ಲಿ 9 ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ‘ಗ್ರಾಮೀಣ ಭಾಗದಲ್ಲಿ ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕುಡಿಯುವ ನೀರನ್ನು 157 ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗಿದೆ. ಅದರಲ್ಲೂ ಹೆಚ್ಚಾಗಿ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೊಕ್ಕೆಬೊರೆ ಇಂಡಿಗನತ್ತ ಮಂದಾರೆ ಗ್ರಾಮಗಳಿಗೆ ಸರಬರಾಜು ಮಾಡಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ನೇನೇಕಟ್ಟೆ ಪಂಜನಹಳ್ಳಿ ಗ್ರಾಮಗಳಿಗೆ ತುರ್ತು ಸಂದರ್ಭದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುಡಿಯುವ ನೀರಿಗೆ ಸಂಬಂಧ ಚಾಮರಾಜನಗರ ತಾಲ್ಲೂಕಿನಲ್ಲಿ ಐದು ಕೊಳ್ಳೇಗಾಲ 11 ಗುಂಡ್ಲುಪೇಟೆ 21 ಹಾಗೂ ಹನೂರು ತಾಲೂಕಿನಲ್ಲಿ 41 ಹೊಸ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಅಲ್ಲದೇ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಒಂದು ಮತ್ತು ಹನೂರು ತಾಲ್ಲೂಕಿನಲ್ಲಿ ಹಾಳಾಗಿದ್ದ 22 ಕೊಳವೆ ಬಾವಿಗಳನ್ನು ಸರಿಪಡಿಸಲಾಗಿದೆ’ ಎಂದು ಶಿಲ್ಪಾನಾಗ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.