ಚಾಮರಾಜನಗರ: ವಿದ್ಯಾರ್ಥಿಗಳು ವ್ಯಾಸಂಗ ಸಮಯದಲ್ಲಿ ಗುರಿ ಸಾಧನೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಭಿವ್ಯಕ್ತಿ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಜಿಲ್ಲೆಯು 25 ವರ್ಷ ದಾಟಿ ಮುಂದೆ ಸಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾಗಿದೆ. ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸಲು ಮೂಲ ಸೌಕರ್ಯಗಳು ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸೌಲಭ್ಯಗಳಿಗೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಗುರಿ ಸಾಧನೆಗೆ ಹೆಚ್ಚಿನ ಪರಿಶ್ರಮ ವಹಿಸಬೇಕು’ ಎಂದರು.
‘ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜು, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಐಟಿಐ ಡಿಪ್ಲೊಮಾ ಕಾಲೇಜು ಸ್ಥಾಪನೆಯಾಗಿದೆ. ಶೈಕ್ಷಣಿಕ ವರ್ಷದಿಂದ ಕಾನೂನು ಕಾಲೇಜು ಸ್ಥಾಪನೆ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಗಮನಹರಿಸಿ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿತವಾಗಬೇಕು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ಕಾಲೇಜಿನ ದಿನಗಳಲ್ಲಿ ಯಾವುದೇ ಗೊಂದಲಗಳಿಗೆ ತಲೆ ಹಾಕದೆ ನಿಮ್ಮ ಭವಿಷ್ಯದತ್ತ ಗಮನಹರಿಸಬೇಕು. ಈಗ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದವರಿಗೆ ಮಾತ್ರ ಸರ್ಕಾರಿ ಕೆಲಸ ಲಭಿಸಲು ಸಾಧ್ಯ. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಬದನಗುಪ್ಪೆ ಕೈಗಾರಿಕಾ ವಲಯದಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು’ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಜಿಲ್ಲೆಗಳಲ್ಲಿ ಚಾಮರಾಜನಗರವೂ ಒಂದಾಗಿದೆ. ಜಿಲ್ಲೆಯಲ್ಲಿ ಎಲ್ಲ ವಿಭಾಗದ ಕಾಲೇಜುಗಳು ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನ ನೀಡಿದಾಗ ಮಾತ್ರ ವಿವಿಗಳಿಗೆ ಗೌರವ ದೊರಕಿದಂತಾಗುತ್ತದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಗುರಿಗಳನ್ನು ಹೊಂದಬೇಕು. ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಬೇಕು’ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ (ಮೈಸೂರು ವಿಭಾಗ) ವಿಶ್ರಾಂತ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿದರು.
ನಗರಸಭಾ ಸದಸ್ಯ ಮಹೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಗುರುಲಿಂಗಯ್ಯ, ಭೋಗಾಪುರ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೋಡೆಲ್ ಅಧಿಕಾರಿ ಡಾ.ಪಿ.ದೇವರಾಜು, ಕಾಲೇಜಿನ ಪ್ರಾಂಶುಪಾಲರಾದ ಎಸ್.ಚಂದ್ರಮ್ಮ, ಪ್ರಾದೇಶಿಕ ಜಂಟಿ ಸಹಾಯಕ ನಿರ್ದೇಶಕ ನಾಗೇಂದ್ರ ಪ್ರಸಾದ್, ಪ್ರಾಧ್ಯಾಪಕರಾದ ಶಿವಸ್ವಾಮಿ, ಸಾಂಸ್ಕೃತಿಕ ವೇದಿಕೆ ಸಂಚಾಲಕ ನಾಗೇಂದ್ರಪ್ರಸಾದ್, ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.