ADVERTISEMENT

ಕೆಡಿಪಿ ಸಭೆ: ಸ್ವಸ್ಥಾನದಲ್ಲಿರದ ವೈದ್ಯರ ವಿರುದ್ಧ ಕ್ರಮ ಜರುಗಿಸಿ

ಕೆಡಿಪಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ.ಮಹದೇವಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:58 IST
Last Updated 24 ಜೂನ್ 2024, 15:58 IST
ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ನೂತನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವೆ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ನೂತನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವೆ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.   

ಚಾಮರಾಜನಗರ: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ವೈದ್ಯರು ಸ್ವಸ್ಥಾನದಲ್ಲಿ ವಾಸ್ತವ್ಯ ಮಾಡದೆ ಮೈಸೂರು, ಬೆಂಗಳೂರಿನಿಂದ ಓಡಾಡುತ್ತಿರುವ ದೂರುಗಳಿವೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಿ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ.ಮಹದೇವಪ್ಪ ಡಿಎಚ್‌ಒಗೆ ಸೂಚನೆ ನೀಡಿದರು.

ಸೋಮವಾರ ಜಿಲ್ಲಾ ಪಂಚಾಯಿತಿಯ ನೂತನ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಮಧ್ಯಾಹ್ನದ ನಂತರ ವೈದ್ಯರೇ ಸಿಗುವುದಿಲ್ಲ; ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಪರಿಣಾಮ ಗ್ರಾಮೀಣ ಭಾಗದಿಂದ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ’ ಎಂದು ನಿರ್ದೇಶನ ನೀಡಿದರು.

ಆರೋಗ್ಯ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ ‘ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ಈಗಾಗಲೇ ಎಚ್ಚರಿಕೆ ನೀಡಿ ನೋಟಿಸ್‌ ನೀಡಲಾಗಿದೆ. ದಿನಕ್ಕೆ ಎರಡು ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಪೈಕಿ ಶೇ 70ರಷ್ಟು ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದು ಕಂಡುಬಂದಿದೆ. ವಾಸ್ತವ್ಯಕ್ಕೆ ಸೂಕ್ತವಾದ ವಸತಿ ನಿಲಯಗಳು ಇಲ್ಲದಿರುವುದರಿಂದ ವೈದ್ಯರು ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

‘ಪರಿಶಿಷ್ಟ ಜಾತಿ, ಪಂಗಡ ಹಾಗೂ ಬಡವರು ಹೆಚ್ಚಾಗಿರುವ ಜಿಲ್ಲೆಯಲ್ಲಿ ಜನರಿಗೆ ಸರ್ಕಾರಿ ಆರೋಗ್ಯ ಸೇವೆ ನಿರಾಕರಿಸುವುದು ಸರಿಯಲ್ಲ. ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಮೊಬೈಲ್‌ ಮೆಡಿಕಲ್‌ ಯುನಿಟ್‌ ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ’ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಸರ್ಕಾರದ ವಾಹನ ಗುಜರಿ ನೀತಿಯ ಪ್ರಕಾರ ಮೊಬೈಲ್ ಆಂಬುಲೆನ್ಸ್‌ಗಳು 15 ವರ್ಷ ಹಳೆಯದಾಗಿರುವ ಕಾರಣ ರಸ್ತೆಗಿಳಿಸುವಂತಿಲ್ಲ. ಹೊಸ ವಾಹನ ಮಂಜೂರಾತಿ ಮಾಡಬೇಕು, ಜಿಲ್ಲೆಯಲ್ಲಿ 211 ಎಎನ್‌ಎಂ ಹುದ್ದೆಗಳಿದ್ದರೂ 40 ಮಂದಿ ಮಾತ್ರ ನೇಮಕವಾಗಿದ್ದು, ಶೀಘ್ರ ನೇಮಕಾತಿ ಮಾಡಬೇಕು’ ಎಂದು ಮನವಿ ಮಾಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್‌.ಎಸ್‌.ಅಬಿದ್‌ ಮಾತನಾಡಿ, ‘ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 16ರಷ್ಟು ಹೆಚ್ಚು ಮಳೆಯಾಗಿದ್ದು ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿವೆ. 1.09 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 35,000 ಹೆಕ್ಟೇರ್‌ನಷ್ಟು ಬಿತ್ತನೆ ಪೂರ್ಣಗೊಂಡಿದೆ. ಮುಂಗಾರು ಪೂರ್ವ ಮಳೆ ಕೈಕೊಟ್ಟ ಪರಿಣಾಮ ಹತ್ತಿ ಹಾಗೂ ಸೂರ್ಯಕಾಂತಿ ಬೆಳೆ ಕ್ಷೇತ್ರ ಕುಸಿತವಾಗಿದೆ. ರೈತರು ಪರ್ಯಾಯವಾಗಿ ಕಡೆಲೆಕಾಯಿ, ಅರಿಶಿನ, ಮುಸುಕಿನ ಜೋಳ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಬಿತ್ತನೆಗೆ ಇನ್ನೂ ಒಂದೂವರೆ ತಿಂಗಳು ಸಮಯವಿದ್ದು, ಶೇ 90ರಷ್ಟು ಬಿತ್ತನೆ ಗುರಿ ಹೊಂದಲಾಗಿದೆ. ಬೀಜ, ರಸಗೊಬ್ಬರ ಕೊರತೆ ಇಲ್ಲ’ ಎಂದು ಮಾಹಿತಿ ನೀಡಿದರು.

ಸಚಿವ ಕೆ.ವೆಂಕಟೇಶ್ ಮಾತನಾಡಿ, ‘ಮಳೆಗಾಲ ಆರಂಭವಾದರೂ ಜಿಲ್ಲೆಯಲ್ಲಿ ಶೇ 30ರಷ್ಟು ಮಾತ್ರ ಬಿತ್ತನೆಯಾಗಿರುವುದು ಉತ್ತಮ ಬೆಳವಣಿಗೆಯಲ್ಲ. ಮುಂಗಾರು ಪೂರ್ವ ಬಿತ್ತನೆ ಅವಧಿ ಮುಗಿದಿರುವುದರಿಂದ ರೈತರು ಪರ್ಯಾಯವಾಗಿ ಯಾವ ಬೆಳೆ ಬೆಳೆಯಬೇಕು ಎಂಬ ಮಾಹಿತಿ ಕೊಡಬೇಕು. ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಬೇಕು’ ಎಂದು ಸೂಚಿಸಿದರು.

ಅಧಿಕಾರಿಗಳ ಮಾಹಿತಿಗೆ ಸಿಟ್ಟಿಗೆದ್ದ ಸಚಿವ ಮಹದೇವಪ್ಪ ‘ಕೃಷಿ ಪ್ರಧಾನ ಜಿಲ್ಲೆಯಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳ ಎಚ್ಚರವಹಿಸಬೇಕು. ನಿಯಮಿತವಾಗಿ ರೈತರ ಸಭೆ ನಡೆಸಬೇಕು, ಕಚೇರಿ ಬಿಟ್ಟು ರೈತರ ಹೊಲಗಳಿಗೆ ಭೇಟಿ ನೀಡಿ ಸಲಹೆ ನೀಡಬೇಕು, ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು’ ಎಂದು ಕಟ್ಟಪ್ಪಣೆ ಮಾಡಿದರು.

ಎಸ್‌ಸಿ ಎಸ್‌ಟಿ ವರ್ಗದವರ ಜಮೀನು ಖಾತೆ ಮಾಡಿಕೊಡಲು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಖಾತೆ ಮಾಡಿಕೊಡದಿದ್ದರೆ ಪರಿಶಿಷ್ಟ ರೈತರು ಫಸಲ್ ಭಿಮಾ ಯೋಜಡೆ ಪಡೆಯಲಾಗುವುದಿಲ್ಲ. ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿ ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 44,000 ಎಸ್‌ಸಿ ಹಾಗೂ 14,000 ಎಸ್‌ಟಿ ರೈತರಿದ್ದು ಕ್ರಮವಾಗಿ 14,000 ಹಾಗೂ 11,000 ಹೆಕ್ಟೇರ್ ಭೂಮಿ ಹೊಂದಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

‘ಜಿಲ್ಲೆ ಅತಿ ಹೆಚ್ಚು ವಿಸ್ತಾರವಾದ ಭೌಗೋಳಿಕ ಪ್ರದೇಶ ಹೊಂದಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಅತಿ ಅಗತ್ಯವಾಗಿದೆ. ಸರ್ಕಾರ 44 ಹೊಸ ಬಸ್‌ಗಳನ್ನು ಮಂಜೂರು ಮಾಡಿದೆ. ಹೆಚ್ಚುವರಿಯಾಗಿ 35 ಬಸ್‌ಗಳ ಅಗತ್ಯವಿದ್ದು, ನೀಡಿದರೆ ಅನುಕೂಲವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಸಚಿವರಿಗೆ ಮನವಿ ಮಾಡಿದರು.

‘ಜಿಲ್ಲೆಯ ಹಾಡಿಗಳಲ್ಲಿ 30,000ಕ್ಕೂ ಹೆಚ್ಚು ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬಗಳು ವಾಸಮಾಡುತ್ತಿದ್ದು, ಬಾಕಿ ವಿದ್ಯುತ್ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸ್ಥಗಿತಗೊಳಿಸುವಂತಿಲ್ಲ. ಹಾಡಿವಾಸಿಗಳಿಗೂ 58 ಯೂನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಬಾಕಿ ಇರುವ ₹ 3.5 ಕೋಟಿ ವಿದ್ಯುತ್ ಶುಲ್ಕವನ್ನು ಚೆಸ್ಕಾಂನಿಂದಲೇ ಪಾವತಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ’ ಎಂದು ಸಚಿವ ಕೆ.ವೆಂಕಟೇಶ್‌ ಹೇಳಿದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಆದಿವಾಸಿಗಳಿಗೆ ನ್ಯಾಯಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಅರಣ್ಯ ಕಾನೂನುಗಳು ಅಡ್ಡಿಯಾಗಿವೆ. ಸ್ವಂತ ಸೂರು ಕಟ್ಟಿಕೊಳ್ಳಲು, ಕುಡಿಯುವ ನೀರಿನ ಸೌಲಭ್ಯ ತಲುಪಿಸಲು ಪೈಪ್‌ಲೈನ್ ಹಾಕಲು ಬಿಡುತ್ತಿಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನಾಚಿಕೆಗೇಡು ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್‌, ‘ಕಾಡಂಚಿನ 16 ಹಾಡಿಗಳಲ್ಲಿ ಮೂಲಸೌಕರ್ಯ ನೀಡಲು ಆರ್‌ಡಿಪಿಆರ್‌ ಸಿದ್ಧವಾಗುತ್ತಿದೆ. ಗಲಭೆಪೀಡಿತ ಇಂಡಿಗನತ್ತ ಗ್ರಾಮಕ್ಕೆ ರಸ್ತೆ ಸೌಲಭ್ಯ ಕಲ್ಪಿಸಲು ರೆವಿನ್ಯೂ ಜಾಗ ಅಡ್ಡಿಯಾಗಿದ್ದು ಶೀಘ್ರ ಸಮಸ್ಯೆ ಬಗೆಹರಿಸಲು ಮುಂದಿನವಾರ ನೋಡೆಲ್ ಅಧಿಕಾರಿ ಜಿಲ್ಲೆಗೆ ಭೇಟಿನೀಡಲಿದ್ದಾರೆ. ಜಲಜೀವನ್ ಮಿಷನ್‌ ಯೋಜನೆಯಡಿ ನೀರಿನ ಸೌಲಭ್ಯ ನೀಡಲು ಕ್ರಿಯಾಯೋಜನೆ ತಯಾರಾಗುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ₹ 38 ಕೋಟಿ ವೆಚ್ಚದಲ್ಲಿ ಪವರ್ ಕಂಡಕ್ಟರ್ ಎಲೆಕ್ಟ್ರಿಫಿಕೇಷನ್ ಯೋಜನೆ ಸಿದ್ಧವಾಗಿದೆ’ ಎಂದು ಮಾಹಿತಿ ನೀಡಿದರು.

ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ತಮಿಳುನಾಡಿನಲ್ಲಿ ಸಮಸ್ಯೆ ಇಲ್ಲ; ಆದರೆ, ಕರ್ನಾಟಕದಲ್ಲಿ ಮಾತ್ರ ಸಮಸ್ಯೆ ಇದೆ. ಕಾಡಿನಲ್ಲಿ ಅರಣ್ಯ ಇಲಾಖೆ ನಡೆಸುವ ಕಾಮಗಾರಿಗಳಿಗೆ ಕಾನೂನುಗಳು ಅಡ್ಡಿಯಾಗುವುದಿಲ್ಲ, ಪಂಚಾಯಿತಿಗಳಿಂದ ಮಾಡುವ ಕಾಮಗಾರಿಗೆ ಮಾತ್ರ ಅಡ್ಡಿಯಾಗುತ್ತವೆಯೇ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಶ್ನಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಎಸ್‌ಪಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇದ್ದರು.

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಹಾಡಿಗಳಿಗೆ ನೀರಿನ ಪೈಪ್‌ಲೈನ್ ಅಳವಡಿಕೆಗೆ ಎರಡು ವರ್ಷಗಳಿಂದ ಸಾಧ್ಯವಾಗಿಲ್ಲ ಎಂದರೆ ದೊಡ್ಡ ವೈಫಲ್ಯವೇ ಸರಿ. ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಬೇಕು.
–ಎಚ್‌.ಸಿ.ಮಹದೇವಪ್ಪ ಸಚಿವ

ಡಯಾಲಿಸಿಸ್‌ಗೆ 250 ಕಿ.ಮೀ ಸಂಚರಿಸಬೇಕು!

‘ಜಿಲ್ಲೆಯಲ್ಲೇ ‌ಭೌಗೋಳಿಕವಾಗಿ ಅತಿ ವಿಸ್ತಾರವಾಗಿರುವ ಹನೂರು ತಾಲ್ಲೂಕು 170 ಕಿ.ಮೀ ವ್ಯಾಪ್ತಿ ಹೊಂದಿದೆ. ಕಾಡಂಚಿನ ಗ್ರಾಮಗಳು ಹೆಚ್ಚಾಗಿರುವ ತಾಲ್ಲೂಕುಗಳಲ್ಲಿ ಸೂಕ್ತ ಆರೋಗ್ಯ ಸೌಲಭ್ಯಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಸಮುದಾಯ ಆರೋಗ್ಯ ಕೇಂದ್ರವಾಗಿಲಿ ತಾಲ್ಲೂಕು ಆಸ್ಪತ್ರೆಯಾಗಲಿ ಇಲ್ಲ. ಹನೂರಿನಲ್ಲಿ ಕಿಡ್ನಿ ಸಮಸ್ಯೆ ಇರುವ ರೋಗಿಗಳು ಹೆಚ್ಚಾಗಿದ್ದು ಡಯಾಲಿಸಿಸ್‌ ಮಾಡಿಸಿಕೊಳ್ಳಲು ಕೊಳ್ಳೇಗಾಲ ಅಥವಾ ಚಾಮರಾನಗರ ಜಿಲ್ಲಾ ಕೇಂದ್ರಕ್ಕೆ ಹೋಗಬೇಕು. ಡಯಾಲಿಸಿಸ್‌ ರೋಗಿ 150 ರಿಂದ 250 ಕಿ.ಮೀ ಬಸ್‌ನಲ್ಲಿ ಸಂಚರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಶಾಸಕರು ಹನೂರಿನಲ್ಲಿ ತುರ್ತಾಗಿ ಡಯಾಲಿಸಿಸ್‌ ಕೇಂದ್ರ ತೆರೆಯಬೇಕು’ ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್‌ ಒತ್ತಾಯಿಸಿದರು.

‘ಬೆಳೆನಷ್ಟ; ಸರ್ಕಾರಕ್ಕೆ ವರದಿ’

‘ಭಾರಿ ಬಿರುಗಾಳಿ ಮಳೆಗೆ ಜಿಲ್ಲೆಯಲ್ಲಿ 1102 ಹೆಕ್ಟೇರ್‌ನಷ್ಟು ಬೆಳೆನಾಶವಾಗಿದ್ದು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 652 ಹೆಕ್ಟೇರ್ ಬೆಳೆ ನಾಶವಾಗಿದೆ. 1110 ಹೆಕ್ಟೇರ್‌ನಷ್ಟು ಬಾಳೆ ನಾಶವಾಗಿದ್ದು ಪರಿಹಾರಕ್ಕೆ ಅರ್ಜಿಸಲ್ಲಿಸಲು ಸರ್ಕಾರದ ಪೋರ್ಟಲ್ ಇನ್ನೂ ತೆರೆದಿಲ್ಲ. ಹಾಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಪರಿಹಾರ ಕೋರಿ ಬೆಳೆನಷ್ಟ ವರದಿ ಸಲ್ಲಿಸಲಾಗಿದೆ. ಪೋರ್ಟಲ್ ತೆರೆದ ಕೂಡಲೇ ನೇರವಾಗಿ ರೈತರ ಖಾತೆಗಳಿಗೆ ಪರಿಹಾರ ಜಮೆಯಾಗಲಿದೆ. ಬಾಳೆಯನ್ನು ಬೆಳೆವಿಮೆ ಪಟ್ಟಿಗೆ ಸೇರಿಸಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.