ಚಾಮರಾಜನಗರ: ನಗರದ ಮಾರುಕಟ್ಟೆಗೆ ನೇರಳೆ ಹಣ್ಣು ಕಾಲಿಟ್ಟಿದೆ. ತಳ್ಳುಗಾಡಿಗಳಲ್ಲಿ ರಾಶಿ ಹಾಕಿರುವ ಹುಳಿ ಸಿಹಿ ಮಿಶ್ರಿತ ನೇರಳೆ ಹಣ್ಣು ಗ್ರಾಹಕರನ್ನು ಅದರಲ್ಲೂ ಯುವಜನರನ್ನು ಹೆಚ್ಚು ಆಕರ್ಷಿಸುತ್ತಿದೆ.
ಬೆಲೆಯೂ ದುಬಾರಿಯಾಗಿದೆ. ವ್ಯಾಪಾರಿಗಳು ಕೆಜಿಗೆ ₹200ವರೆಗೂ ಹೇಳುತ್ತಿದ್ದಾರೆ. ನೇರಳೆ ಹಣ್ಣಿನ ರುಚಿ ಸವಿಯುವುದಕ್ಕಾಗಿ ಜನರು ಕಾಲು ಕೆಜಿ, ಅರ್ಧ ಕೆಜಿಯಂತೆ ಖರೀದಿಸುತ್ತಿದ್ದಾರೆ.
ವರ್ಷಕ್ಕೆ ಎರಡು ಮೂರು ತಿಂಗಳಷ್ಟೇ ಲಭ್ಯವಾಗುವ ನೇರಳೆ ಹಣ್ಣು ಮೇನಿಂದ ಜುಲೈ ತಿಂಗಳವರೆಗೂ ಮಾರುಕಟ್ಟೆಯಲ್ಲಿರುತ್ತದೆ. ಈ ಬಾರಿ ಬರುವಾಗ ಕೊಂಚ ತಡವಾಗಿದೆ.
‘ಸೀಸನ್ ಈಗಷ್ಟೇ ಆರಂಭವಾಗಿರುವುದರಿಂದ ಬೆಲೆ ಜಾಸ್ತಿ ಇದೆ. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬಂದಾಗ ಬೆಲೆ ಇಳಿಯಲಿದೆ’ ಎಂದು ಹೇಳುತ್ತಾರೆ ವ್ಯಾಪಾರಿಗಳು.
ಬೀನ್ಸ್, ಕ್ಯಾಪ್ಸಿಕಂ ತುಟ್ಟಿ:
ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ಕೆಲವು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.
ಹಾಪ್‌ಕಾಮ್ಸ್‌ನಲ್ಲಿ ಬೀನ್ಸ್, ದಪ್ಪಮೆಣಸಿನಕಾಯಿ, ಗೆಟ್ಟೆಕೋಸುಗಳ ಧಾರಣೆ ಕೆಜಿಗೆ₹20ರಷ್ಟು ಹೆಚ್ಚಾಗಿದೆ. ಕಳೆದ ವಾರ ಈ ಮೂರೂ ತರಕಾರಿಗಳ ಬೆಲೆ ಕ್ರಮವಾಗಿ ₹40, ₹60 ಮತ್ತು ₹40 ಇತ್ತು.
ಕೆಲವು ವಾರಗಳಿಂದ ದುಬಾರಿಯಾಗಿದ್ದ ಶುಂಠಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಕೆಜಿಗೆ ₹160ರಿಂದ ₹200ರೆವೆಗೂ ಬೆಲೆ ಇದೆ.
ಟೊಮೆಟೊ (₹20), ಕ್ಯಾರೆಟ್ (₹40), ಆಲೂಗಡ್ಡೆ (₹30) ಈರುಳ್ಳಿ (₹20) ಸೇರಿದಂತೆ ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಹಣ್ಣುಗಳ ಮಾರುಕಟ್ಟೆಯಲ್ಲಿ ದಾಳಿಂಬೆ ಬೆಲೆಯಲ್ಲಿ ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ ₹180 ಇತ್ತು. ಈವಾರ ₹160ಕ್ಕೆ ಇಳಿದಿದೆ.
ಸೇಬು (₹180), ಕಿತ್ತಳೆ (₹160) ಮತ್ತು ದ್ರಾಕ್ಷಿ (₹120) ದುಬಾರಿ ಬೆಲೆ ಮುಂದುವರಿದಿದೆ. ಮಾವಿನ ಹಣ್ಣುಗಳಿಗೆ ಈ ವಾರವೂ ಬೇಡಿಕೆ ಇದೆ. ಧಾರಣೆಯಲ್ಲಿ ಬದಲಾವಣೆಯಾಗಿಲ್ಲ.
ಕನಕಾಂಬರ ಅಗ್ಗ
ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ ಬಿಟ್ಟು ಉಳಿದ ಹೂವುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕನಕಾಂಬರಕ್ಕೆ ಬೇಡಿಕೆ ಕಡಿಮೆಯಾಗಿದ್ದು ಕೆಜಿಗೆ ₹600ರಂತೆ ಮಾರಾಟವಾಗುತ್ತಿದೆ. ಮಲ್ಲಿಗೆ ಸೇವಂತಿಗೆಗೆ ಬೇಡಿಕೆ ಇದ್ದು ಕೆಜಿಗೆ ಕ್ರಮವಾಗಿ ₹280 ಮತ್ತು ₹120ರಿಂದ ₹160ರವರೆಗೆ ಇದೆ. ಮಾಂಸ ಮಾರುಕಟ್ಟೆಯಲ್ಲಿ ಚಿಕನ್ ಮಟನ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.