ADVERTISEMENT

ಚಾಮರಾಜನಗರ: ಎಚ್ಚರ! ಬಲಿಗೆ ಬಾಯ್ತೆರೆದಿವೆ ಮ್ಯಾನ್‌ಹೋಲ್‌ಗಳು

ಪ್ರಮುಖ ರಸ್ತೆಗಳಲ್ಲಿವೆ ಮುಚ್ಚಳ ರಹಿತ ಮ್ಯಾನ್‌ಹೋಲ್‌ಗಳು, ಕಳಪೆ ಗುಣಮಟ್ಟದ ಮುಚ್ಚಳಗಳಿಂದ ಅಪಾಯ, ಗಮನಿಸದ ಅಧಿಕಾರಿಗಳು

ಸೂರ್ಯನಾರಾಯಣ ವಿ.
Published 23 ಸೆಪ್ಟೆಂಬರ್ 2019, 10:13 IST
Last Updated 23 ಸೆಪ್ಟೆಂಬರ್ 2019, 10:13 IST
ಸಂಪಿಗೆ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನ ಸ್ಥಿತಿ
ಸಂಪಿಗೆ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನ ಸ್ಥಿತಿ   

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರದ ಪ್ರಮುಖ ರಸ್ತೆಗಳಾದ ಬಿ.ರಾಚಯ್ಯ ಜೋಡಿ ರಸ್ತೆ, ನ್ಯಾಯಾಲಯ ರಸ್ತೆ, ಸಂಪಿಗೆ ರಸ್ತೆ, ದೊಡ್ಡ ಅಂಗಡಿ ಬೀದಿಗಳಲ್ಲಿ ಸಂಚರಿಸುವಾಗ ವಾಹನ ಸವಾರರ ಮೈಯೆಲ್ಲಾ ಕಣ್ಣಾಗಿರಬೇಕು. ಯಾಕೆಂದರೆ, ಈ ರಸ್ತೆಗಳಲ್ಲಿ ಮ್ಯಾನ್‌ಹೋಲ್‌ಗಳು ಬಲಿಗಾಗಿ ಕಾಯುತ್ತಿವೆ.

ಬಾಯ್ತೆರೆದುಕೊಂಡಿರುವ ಮ್ಯಾನ್‌ ಹೋಲ್‌ಗಳು ರಸ್ತೆಯ ಮಧ್ಯದಲ್ಲೇ ಇವೆ. ಹಾಗಾಗಿ, ಹೊಸದಾಗಿ ಅಭಿವೃದ್ಧಿ ಪಡಿಸಿರುವ ಕಾಂಕ್ರೀಟ್‌ ರಸ್ತೆ, ವಿಶಾಲವಾಗಿದೆ ಎಂದು ಸವಾರರು ಕೊಂಚ ಮೈಮರೆತರೂ ಅಪಾಯ ಕಟ್ಟಿಟ್ಟಬುತ್ತಿ.

ಕೆಲವು ಕಡೆಗಳಲ್ಲಿ ಅಪಾಯದ ಮುನ್ಸೂಚನೆ ನೀಡುವುದಕ್ಕಾಗಿ ಸ್ಥಳೀಯರೇ ಕಲ್ಲು, ಇಟ್ಟಿಗೆಳನ್ನಿಟ್ಟಿ‌ದ್ದಾರೆ. ಇದೇ ರಸ್ತೆಗಳಲ್ಲಿ ಸಂಚರಿಸುವ ಅಧಿಕಾರಿಗಳು ಅಪಾಯಕಾರಿ ಮ್ಯಾನ್‌ಹೋಲ್‌ಗಳನ್ನು ಕಂಡರೂ ಕಾಣದಂತೆ ಸಾಗುತ್ತಿದ್ದಾರೆ.

ADVERTISEMENT

2012ರಲ್ಲಿ ನಗರದಲ್ಲಿ ಆರಂಭವಾದ ಕಾಮಗಾರಿ ಆರು ವರ್ಷಗಳ ನಂತರ ಕಳೆದ ವರ್ಷದ ಆಗಸ್ಟ್‌ ವೇಳೆಗೆ ಮುಕ್ತಾಯವಾಗಿತ್ತು.ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಮೇಲ್ವಿಚಾ ರಣೆಯಲ್ಲಿ ಈ ಯೋಜನೆಯನ್ನು ಅನು‌ಷ್ಠಾನಕ್ಕೆ ತರಲಾಗಿತ್ತು. ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 3,500 ಮ್ಯಾನ್ ಹೋಲ್‌ಗಳನ್ನು ನಿರ್ಮಿಸಲಾಗಿದೆ. ಒಳಚರಂಡಿ ನಿರ್ಮಾಣಕ್ಕೆ ಗುತ್ತಿಗೆ ಪಡೆದಿರುವ ಸಂಸ್ಥೆಯು ಮ್ಯಾನ್‌ ಹೋಲ್‌ಗಳಿಗೆ ಉತ್ತಮ ಗುಣಮಟ್ಟದ ಮುಚ್ಚಳವನ್ನೇ ಹಾಕಿದೆ. ಆದರೆ, ಕಾಮಗಾರಿ ಪೂರ್ಣಗೊಂಡ ನಂತರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆಗಳು ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕೆಲಸಗಳಿಂದಾಗಿ ಮ್ಯಾನ್‌ಹೋಲ್‌ ಮುಚ್ಚಳಗಳು ಪದೇ ಪದೇ ಹಾಳಾಗುತ್ತಿವೆ.

ಎಲ್ಲೆಲ್ಲಿ: ಬಿ.ರಾಚಯ್ಯ ಜೋಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿತ್ತು. ನ್ಯಾಯಾಲಯ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಪಡಿಸಿದೆ (ಅರ್ಧ ಕಾಮಗಾರಿಯಷ್ಟೇ ಪೂರ್ಣಗೊಂಡಿದೆ). ದೊಡ್ಡ ಅಂಗಡಿ ಬೀದಿಯನ್ನು ನಗರಸಭೆ ಅಭಿವೃದ್ಧಿ ಪಡಿಸಿದೆ.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಡಿವೈಎಸ್‌ಪಿ ಕಚೇರಿ ಪಕ್ಕದ ಮ್ಯಾನ್‌ಹೋಲ್‌ನ ಮುಚ್ಚಳವನ್ನು ಸರಿಯಾಗಿ ಕೂರಿಸಿಲ್ಲ. ರಕ್ಷಣೆಗೆ ಬ್ಯಾರಿಕೇಡ್‌ ಇಡಲಾಗಿದೆ. ಕಾರ್ಪೊರೇಷನ್‌ ಬ್ಯಾಂಕ್‌ ಎದುರುಗಡೆಯ ಮ್ಯಾನ್‌ಹೋಲ್‌ ಅನ್ನು ಬ್ಯಾರಿಕೇಡ್‌ನಿಂದ ಮುಚ್ಚಲಾಗಿದೆ. ಭಾರತ್‌ ಪೆಟ್ರೋಲಿಯಂ ಪೆಟ್ರೋಲ್‌ ಬಂಕ್‌ ಬಳಿ ಅರ್ಧಂಬರ್ದ ಮುಚ್ಚಲಾಗಿದೆ. ರಾಮಸಮುದ್ರದ ಬಳಿ ಮ್ಯಾನ್‌ಹೋಲ್‌ಗೆ ಹಳೆಯ ಸಿಮೆಂಟ್‌ ಪೈಪ್‌ ಇಟ್ಟು ಅದರ ಮೇಲೆ ಕೆಂಪು ಬಟ್ಟೆಯನ್ನು ಹೊದೆಸಲಾಗಿದೆ. ಈ ರಸ್ತೆಯಲ್ಲಿ ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆ ಇಲ್ಲ. ಎದುರುಗಡೆಯಿಂದ ಬರುವ ವಾಹನಗಳ ಬೆಳಕು ಬೀಳುವುದರಿಂದ, ಸವಾರರ ವಾಹನದ ಬಲ್ಬ್‌ ಉರಿಯುತ್ತಿದ್ದರೂ ರಸ್ತೆ ಸರಿಯಾಗಿ ಕಾಣುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಾದ ಸ್ಥಿತಿ ಇದೆ.

ನ್ಯಾಯಾಲಯದ ರಸ್ತೆಯಲ್ಲಿ ವಿಎಚ್‌ಪಿ ಶಾಲೆಯ ಬಳಿ ಎರಡು ಮ್ಯಾನ್‌ಹೋಲ್‌ಗಳ ಮುಚ್ಚಳಗಳು ಹಾಳಾಗಿವೆ, ಮರದ ರೆಂಬೆ, ಕಲ್ಲುಗಳನ್ನು ಸ್ಥಳೀಯರೇ ಇಟ್ಟಿದ್ದಾರೆ.

ನ್ಯಾಯಾಲಯ ಬಳಿ ಚಪ್ಪಡಿ ಕಲ್ಲನ್ನು ಹಾಕಿ ಅರ್ಧಮುಚ್ಚಲಾಗಿದೆ. ನ್ಯಾಯಾಧೀಶರು, ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ.

‘ಮುಚ್ಚಳಗಳನ್ನು ರಸ್ತೆಗೆ ಸಮನಾಗಿ ಅಳವಡಿಸಬೇಕು. ಆದರೆ, ಕೆಲವು ಕಡೆಗಳಲ್ಲಿ ಇವು ರಸ್ತೆಗಿಂತಲೂ ಎತ್ತರದಲ್ಲಿವೆ. ಇದರಿಂದಲೂ ಅಪಾಯ ಎದುರಾಗುತ್ತದೆ’ ಎಂದು ಹೇಳುತ್ತಾರೆ ಚಾಲಕರು.

‘ಒಳಚರಂಡಿ ಗುತ್ತಿಗೆ ಪಡೆದ ಸಂಸ್ಥೆಯವರು ಕೆಲವು ಕಡೆಗಳಲ್ಲಿ ಎರೆಡೆರಡು ಬಾರಿ ಮುಚ್ಚಳಗಳನ್ನು ಹಾಕಿದ್ದಾರೆ. ನಗರದಲ್ಲಿ ರಸ್ತೆ ಅಭಿವೃದ್ಧಿ ಮಾಡಿದ ಸಂದರ್ಭದಲ್ಲಿ ಇವು ಮತ್ತೆ ಹಾಳಾಗಿವೆ. ಅದನ್ನು ರಸ್ತೆ ಅಭಿವೃದ್ಧಿ ಪಡಿಸಿದಸಂಸ್ಥೆಗಳೇ ಅಳವಡಿಸಬೇಕು’ ಎಂದುಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ. ರಮೇಶ್‌ ತಿಳಿಸಿದರು.

‘ಪ್ರಮುಖ ರಸ್ತೆಗಳಲ್ಲಿ ಪದೇ ಪದೇ ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಲು ಕಳಪೆ ಗುಣಮಟ್ಟವೇ ಕಾರಣ. ಈ ರಸ್ತೆಗಳಲ್ಲಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ಇವು ಬೇಗ ಹಾಳಾಗುತ್ತವೆ. ತುಮ ಕೂರಿನಿಂದಲೇ ಮುಚ್ಚಳಗಳನ್ನು ತರಲು ನಾವು ಸೂಚಿಸಿದ್ದೇವೆ’ ಎಂದು ಅವರು ಹೇಳಿದರು.

‘ಇನ್ನೂ ಹಸ್ತಾಂತರ ಆಗಿಲ್ಲ’

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಕೆಯುಐಡಿಎಫ್‌ಸಿ) ನಗರಸಭೆ ಇನ್ನೂ ಒಳಚರಂಡಿ ನಿರ್ವಹಣೆ ಜವಾಬ್ದಾರಿಯನ್ನು ಹಸ್ತಾಂತರ ಮಾಡಿಲ್ಲ. ನಮ್ಮ ಸುಪರ್ದಿಗೆ ಬಂದ ನಂತರ ಅವುಗಳ ನಿರ್ವಹಣೆ ಹೊಣೆ ನಮ್ಮದಾಗುತ್ತದೆ’ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸುತ್ತೋಲೆ: ‘ಹೊಸದಾಗಿ ರಸ್ತೆ ನಿರ್ಮಾಣದಸಂದರ್ಭದಲ್ಲಿಬದಲಾಗುವ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಅಲ್ಲದೆ, ಮ್ಯಾನ್‌ಹೋಲ್‌ ಮುಚ್ಚಳ ತೆರೆದುಕೊಂಡರೆ ಅವರೇಸರಿಪಡಿಸಬೇಕು. ಈ ಬಗ್ಗೆ ನಗರಸಭೆಯಿಂದ ಹಾಗೂ ಜಿಲ್ಲಾಧಿಕಾರಿಗಳಿಂದಗುತ್ತಿಗೆದಾರರಿಗೆ ಮನವರಿಕೆ ಮಾಡಲಾಗಿದೆ.ರಸ್ತೆ ನಿರ್ಮಾಣದ ವೇಳೆ ಮುಚ್ಚಳ ಹಾಳಾದರೆ ಗುತ್ತಿಗೆದಾರರೇ ಸರಿಪಡಿಸಬೇಕು ಎನ್ನುವ ಸುತ್ತೋಲೆಯನ್ನೂ ಕೂಡ ಜಿಲ್ಲಾಡಳಿತದಿಂದ ಹೊರಡಿಸಲಾಗಿದೆ’ ಎಂದು ಅವರು ಹೇಳಿದರು.

ಡಿಸೆಂಬರ್‌ನಲ್ಲಿ ಹಸ್ತಾಂತರ: ‘ಗುತ್ತಿಗೆ ನಿಯಮದ ಪ್ರಕಾರ ಒಳಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಒಂದು ವರ್ಷದ ಗುತ್ತಿಗೆದಾರ ಕಂಪನಿಯೇ ಒಳಚರಂಡಿಯ ನಿರ್ವಹಣೆ ಮಾಡಬೇಕು. ಈ ವರ್ಷದ ಡಿಸೆಂಬರ್‌ಗೆ ಅವಧಿ ಪೂರ್ಣಗೊಳ್ಳಲಿದ್ದು, ನಂತರ ನಗರಸಭೆಗೆ ಹಸ್ತಾಂತರ ನಡೆಯಲಿದೆ’ ಎಂದು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ. ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

***

‘ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು, ತಕ್ಷಣವೇ ಮ್ಯಾನ್‌ಹೋಲ್‌ಗಳನ್ನು ಮುಚ್ಚಿಸಲು ಕ್ರಮವಹಿಸುತ್ತೇನೆ’

– ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

ಜನ ಏನಂತಾರೆ?

ಶಾಸಕರು ಗಮನಿಸಬೇಕು

ಒಳಚರಂಡಿ ಕಾಮಗಾರಿ, ಮ್ಯಾನ್‌ಹೋಲ್‌ ಸಮಸ್ಯೆ ಇತರೇ ಯಾವುದೇ ಸ್ಥಳೀಯ ಸಮಸ್ಯೆಗಳನ್ನು ಸರಿಪಡಿಸುವಂತೆ ನಗರಸಭೆಯ ಅಧಿಕಾರಿಗಳಿಗೆ, ಸಂಬಂಧಪಟ್ಟ ಗುತ್ತಿಗೆದಾರರರಿಗೆಸ್ಥಳೀಯ ಶಾಸಕರು ತಾಕೀತು ಮಾಡಬೇಕು. ಶಾಸಕರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಗುಣಮಟ್ಟದ ರಸ್ತೆ ಮಾಡಿದ ಬಳಿಕ ಮ್ಯಾನ್‌ಹೋಲ್‌ಗಳಿಗೂ ಗುಣಮಟ್ಟದ ಮುಚ್ಚಳ ಹಾಕಬೇಕಲ್ಲವೇ? ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

– ಕೆ.ಸಿ. ಕೇಶವಮೂರ್ತಿ, ಬುದ್ಧನಗರ

ಅಪಘಾತಕ್ಕೀಡಾಗುವುದು ನಿಶ್ಚಿತ

ಮುಖ್ಯರಸ್ತೆಗಳಲ್ಲೇ ಮ್ಯಾನ್‌ಹೋಲ್‌ಗಳು ಬಾಯ್ತೆರೆದರೆ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ರಸ್ತೆ ಸರಿ ಇದೆ ಎನ್ನುವ ಜ್ಞಾನದಲ್ಲಿ ವಾಹನ ಚಲಾಯಿಸುತ್ತೇವೆ. ಮುಚ್ಚಳ ಇಲ್ಲದ ಮ್ಯಾನ್‌ಹೋಲ್‌ಗಳನ್ನು ಕಂಡಾಗ ಗಲಿಬಿಲಿಗೊಳ್ಳುತ್ತೇವೆ. ಹಳ್ಳ ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸುತ್ತವೆ.

– ಪಿ. ಸಿದ್ದಪ್ಪಾಜಿ, ವಾಹನ ಸವಾರರು

ಬಡಾವಣೆಗಳಲ್ಲೂ ಸಮಸ್ಯೆ

ಬಿ.ರಾಚಯ್ಯ ಜೋಡಿರಸ್ತೆ, ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲಿ ಇರುವಂತೆ ಪ್ರಮುಖ ಬಡಾವಣೆಗಳ ರಸ್ತೆಗಳ ನಡುವೆ ಇರುವಂತಹ ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿವೆ. ಅನೇಕ ಕಡೆ ರಾತ್ರಿಯಲ್ಲಿ ತಳ್ಳುಗಾಡಿಗಳನ್ನು ತೆಗೆದುಕೊಂಡು ಹೋಗಲೂ ಸಾಧ್ಯವಾಗುವುದಿಲ್ಲ. ಬೀದಿಗಳಲ್ಲಿ ವಿದ್ಯುತ್‌ ಇಲ್ಲದ ವೇಳೆ ತೆರೆದ ಮ್ಯಾನ್‌ಹೋಲ್‌ಗಳಿಂದ ಅನೇಕ ಬಾರಿ ತೊಂದರೆಗೆ ಸಿಲುಕಿದ್ದೇವೆ

–ರಾಜಣ್ಣ (ಚುರುಮುರಿ ವ್ಯಾಪಾರಿ), ಶಂಕರಪುರ ಬಡಾವಣೆ

ದುರಸ್ತಿಗೆ ಕ್ರಮ ವಹಿಸಲಿ

ರಸ್ತೆ ಅಭಿವೃದ್ಧಿಯಾಗಿ ಒಂದೂವರೆ ವರ್ಷವೂ ಆಗಿಲ್ಲ. ಆಗಲೇ ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿವೆ. ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಪ್ರತಿ ದಿನ ನೋಡುತ್ತಿದ್ದೇನೆ. ಹೊಸ ಮುಚ್ಚಳಗಳನ್ನು ಹಾಕಲು ಹಾಗೂ ಹಾಳಾಗಿರುವ ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಮಾಡಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು

– ಮಹೇಶ್‌, ಎಳನೀರು ವ್ಯಾಪಾರಿ

ಅಭಿಪ್ರಾಯ ಸಂಗ್ರಹ: ರವಿ.ಎನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.