ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ರಸ್ತೆ, ಚರಂಡಿ, ಬೀದಿ ದೀಪ, ತ್ಯಾಜ್ಯ ವಿಲೇವಾರಿ ಸೇರಿದಂತೆ ಮೂಲಸೌಕರ್ಯಗಳ ನಿರ್ವಹಣೆ, ಅಭಿವೃದ್ಧಿಗೆ ಒತ್ತು ನೀಡುವ, ₹63.02 ಕೋಟಿ ಮೊತ್ತದ ಬಜೆಟ್ ಅನ್ನು ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ ಅವರು ಗುರುವಾರ ಮಂಡಿಸಿದರು.
2021–22ನೇ ಸಾಲಿಗೆ ನಿಗದಿ ಮಾಡಲಾಗಿರುವ₹63.02 ಕೋಟಿ ಬಜೆಟ್ ಮೊತ್ತದಪೈಕಿ ₹62.30 ಕೋಟಿ ಅಂದಾಜು ವೆಚ್ಚವಾಗಲಿದ್ದು, ₹71.52 ಲಕ್ಷ ಉಳಿತಾಯವಾಗಲಿದೆ.
2021–22ನೇ ಸಾಲಿಗೆ ಸ್ವಂತ ಸಂಪನ್ಮೂಲಗಳಿಂದ ₹11.36 ಕೋಟಿ ಆದಾಯವನ್ನುನಗರಸಭೆ ನಿರೀಕ್ಷಿಸುತ್ತಿದೆ. ಸರ್ಕಾರದಿಂದ ₹29.10 ಕೋಟಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇಟ್ಟುಕೊಂಡಿದೆ.
ಮೂಲಸೌಕರ್ಯಗಳಿಗೆ ಹಣ ಹಂಚಿಕೆ: ಬಜೆಟ್‌ನಲ್ಲಿ ದೊಡ್ಡ ಪಾಲು ಅಧಿಕಾರಿಗಳ, ಸಿಬ್ಬಂದಿ ವೇತನ ಭತ್ಯೆ, ವಿದ್ಯುತ್ ಶುಲ್ಕ ಹಾಗೂ ನಿರ್ವಹಣಾ ವೆಚ್ಚಕ್ಕೆ ಮೀಸಲಿಡಲಾಗಿದೆ. ಉಳಿದ ಮೊತ್ತದಲ್ಲಿ ನಗರದ ಮೂಲಸೌಕರ್ಯಗಳ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಗಮನ ಹರಿಸಲಾಗಿದೆ.
ರಸ್ತೆ, ಕಾಲುದಾರಿ, ಚರಂಡಿ ಮತ್ತು ಒಳಚರಂಡಿ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಕ್ಕೆ ₹14.71 ಕೋಟಿ ಹಂಚಿಕೆ ಮಾಡಲಾಗಿದೆ. ನೀರು ಸರಬರಾಜು, ಒಳಚರಂಡಿಗಳ ಕಾಮಗಾರಿಗಳ ನಿರ್ವಹಣೆ, ಯಂತ್ರೋಪಕರಣಗಳ ಖರೀದಿ ಮತ್ತು ದುರಸ್ತಿ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸಾಮಗ್ರಿಗಳ ಖರೀದಿ ಮತ್ತು ಪೈಪ್‌ಲೈನ್ ಹಾಗೂ ಸಣ್ಣ ನೀರು ಸರಬರಾಜು ಯೋಜನೆಗೆ ₹5.32 ಕೋಟಿ, ಚೆಲುವ ಚಾಮರಾಜನಗರ ಯೋಜನೆ ಅಡಿಯಲ್ಲಿ ಪ್ರಮುಖ ವೃತ್ತಗಳ ಅಭಿವೃದ್ಧಿಗೆ ₹75 ಲಕ್ಷ, ಬೀದಿ ದೀಪಗಳ ಅಳವಡಿಕೆ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ₹1.35 ಕೋಟಿ, ಸ್ವಚ್ಛ ಭಾರತ ಅಭಿಯಾನದಡಿ ಕಾಮಗಾರಿಗಳಿಗಾಗಿ ಹಾಗೂ ಸಹಾಯಧನಕ್ಕೆ ₹71.50 ಲಕ್ಷ, ಶೌಚಾಲಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ₹60 ಲಕ್ಷ,, ಪ್ರಯಾಣಿಕರ ಬಸ್ ತಂಗುದಾಣಗಳ ನಿರ್ಮಾಣಕ್ಕೆ ₹30 ಲಕ್ಷ, ಉದ್ಯಾನ ಮತ್ತು ಸ್ಮಶಾನಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹94 ಲಕ್ಷ ಹಂಚಿಕೆ ಮಾಡಲಾಗಿದೆ.
ಪೌರ ಕಾರ್ಮಿಕರ ಗೃಹಭಾಗ್ಯಕ್ಕೆ ₹75 ಲಕ್ಷ: ನಗರಸಭೆಯಲ್ಲಿ ಹೊಸದಾಗಿ ಕಾಯಂಗೊಂಡ 10 ಮಂದಿ ಪೌರಕಾರ್ಮಿಕರಿಗೆ ನಿವೇಶನ ನೀಡಿ, ಮನೆ ನಿರ್ಮಿಸಲು ₹75 ಲಕ್ಷ ಮೊತ್ತವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಮುಖ್ಯ ರಸ್ತೆಗಳಿಗೆ ಬೀದಿ ದೀಪ: ಎಲ್‌ಐಸಿ ವೃತ್ತದಿಂದ ಸತ್ತಿರಸ್ತೆಯ ನಗರಸಭೆಯ ಗಡಿಯವರೆಗೆ ಹಾಗೂ ಸಂತೇಮರಹಳ್ಳಿ ವೃತ್ತದಿಂದ ನರಸೀಪುರ ರಸ್ತೆಯ ದ್ವಿಭಜಕ ರಸ್ತೆಯವರೆಗೆ 7.5 ಕಿ.ಮೀಗೆ ಹೊಸದಾಗಿ ವೃತ್ತಾಕಾರದ ವಿದ್ಯುತ್ ಕಂಬಗಳನ್ನು ಅಳವಡಿಸಿ, ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು ₹1.08 ಕೋಟಿ ಮೊತ್ತವನ್ನು ನಿಗದಿ ಪಡಿಸಲಾಗಿದೆ.
ಸ್ವಚ್ಛ ಭಾರತ ಯೋಜನೆಗೆ ಬಲ: ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಜೆಸಿಬಿ, ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರ, ತ್ಯಾಜ್ಯ ಸ್ಕ್ರೀನಿಂಗ್ ಯಂತ್ರ, ಬೇಲಿಂಗ್ ಯಂತ್ರ, ವೇಬ್ರಿಡ್ಜ್ ಯಂತ್ರಗಳನ್ನು ನಗರಸಭೆ ಈ ವರ್ಷ ಖರೀದಿಸಲಿದೆ.
ತ್ಯಾಜ್ಯ ನಿರ್ವಹಣೆಗಾಗಿ ನಿರ್ಮಿಸಲಾಗಿರುವ ಎರಡು ಘಟಕಗಳನ್ನು ಉನ್ನತೀಕರಿಸಲು ₹25 ಲಕ್ಷ ಹಂಚಿಕೆ ಮಾಡಲಾಗಿದೆ.
ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ, ಬಾಕಿ ಇರುವ ಏಳು ಸಮುದಾಯ/ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಹಾಗೂ 500 ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸಹಾಯಧನ ಒದಗಿಸಲು ನಗರಸಭೆ ಉದ್ದೇಶಿಸಿದೆ.
ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಅಭಿವೃದ್ಧಿ ಕಾಮಗಾರಿ ಹಾಗೂ ಒಳಚರಂಡಿ ಸಂಪರ್ಕ ಇಲ್ಲದಿರುವ ಕಡೆಗಳಲ್ಲಿ ಪೈಪ್‌ಲೈನ್ ಅಳವಡಿಸಿ ಒಳಚರಂಡಿ ಸಂಪರ್ಕ ಕಲ್ಪಿಸುವುದಕ್ಕಾಗಿ ₹46 ಲಕ್ಷ ಕಾಯ್ದಿರಿಸಲಾಗಿದೆ.
₹9 ಕೋಟಿಗೆ ಪ್ರಸ್ತಾವ:ಬಿ.ರಾಚಯ್ಯ ಜೋಡಿ ರಸ್ತೆಯ ಭುವನೇಶ್ವರಿ ವೃತ್ತದಿಂದ ರಾಮಸಮುದ್ರ ಪಂಪ್‌ಹೌಸ್‌ವರೆಗೆ ಉಳಿಕೆ ಚರಂಡಿ ಕಾಮಗಾರಿ, ಕಾಲುದಾರಿ ಅಭಿವೃದ್ಧಿ ಮತ್ತು ಅಲಂಕಾರಿಕಾ ಬೀದಿ ದೀಪಗಳ ಅಳವಡಿಕೆಗಾಗಿ ₹9 ಕೋಟಿ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ನಗರಸಭೆ ನಿರ್ಧರಿಸಿದೆ.
ವಸತಿ ರಹಿತರಿಗೆ ಮನೆ: ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಉತ್ತುವಳ್ಳಿ ಗ್ರಾಮದ ಸರ್ವೆ ನಂ.117ರಲ್ಲಿ 9 ಎಕರೆ 30 ಗುಂಟೆ ಜಾಗದಲ್ಲಿ ವಸತಿ ಸಂಕೀರ್ಣದ ಮಾದರಿಯಲ್ಲಿ 792 ಕುಟುಂಬಗಳಿಗೆ ಮನೆ ನಿರ್ಮಿಸುವ ಸಂಬಂಧ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ನಗರಸಭೆ ಪ‍್ರಸ್ತಾವ ಸಲ್ಲಿಸಿದೆ.
ಕಾರ್ಯನಿರತ ಪ್ರತ್ರಕರ್ತರ ವೈದ್ಯಕೀಯ ಚಿಕಿತ್ಸೆಗಾಗಿ ₹10 ಲಕ್ಷ ಮೀಸಲಿಡಲಾಗಿದೆ.
ನಗರಸಭೆ ಉಪಾಧ್ಯಕ್ಷೆ ಸುಧಾ, ಆಯುಕ್ತ ಎಂ.ರಾಜಣ್ಣ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ನೀರು ಸರಬರಾಜಿಗೆ ಪ್ರತ್ಯೇಕ ಪೈಪ್‌ಲೈನ್
ನಗರಕ್ಕೆ ಮಂಗಲ ನೀರು ಶುದ್ಧೀಕರಣ ಘಟಕದಿಂದ ನೀರು ಸರಬರಾಜಾಗುವ ಪೈಪ್‌ಲೈನ್‌ನಲ್ಲಿ ಮಾರ್ಗ ಮಧ್ಯದ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಇದರಿಂದಾಗಿ ನಗರಕ್ಕೆ ಬರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.
ಇದನ್ನು ತಪ್ಪಿಸುವುದಕ್ಕಾಗಿ ಘಟಕದಿಂದ ಮಾರ್ಗ ಮಧ್ಯದ ಹಳ್ಳಿಗಳಿಗೆ ಪ್ರತ್ಯೇಕ ಪೈಪ್‌ಲೈನ್ ಅಳವಡಿಸುವ ಯೋಜನೆ ಜಾರಿಯಲ್ಲಿದ್ದು, ಈಗಾಗಲೇ 4.5 ಕಿ.ಮೀ ಪೈಪ್‌ಲೈನ್ ಅಳವಡಿಕೆ ಮುಗಿದಿದೆ. ಉಳಿದ ಕಾಮಗಾರಿಯನ್ನು ₹ 67 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲು ನಗರಸಭೆ ತೀರ್ಮಾನಿಸಿದೆ.
ಆದಾಯದ ಮೂಲಗಳು
2021–22ನೇ ಸಾಲಿನಲ್ಲಿ ನಗರಸಭೆಯು ವಿವಿಧ ಮೂಲಗಳಿಂದ ₹ 11.36 ಕೋಟಿ ಆದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದೆ.
ಆಸ್ತಿ ತೆರಿಗೆ ಮೂಲಕ ₹ 3.92 ಕೋಟಿ, ಆಸ್ತಿ ತೆರಿಗೆ ದಂಡದಿಂದ ₹ 1.25 ಕೋಟಿ, ನೀರು ಸರಬರಾಜು ಮತ್ತು ಒಳಚರಂಡಿ ಶುಲ್ಕದಿಂದ ₹ 1.35 ಕೋಟಿ, ಆಸ್ತಿ ತೆರಿಗೆಯೊಂದಿಗೆ ವಸೂಲು ಮಾಡಲಾಗುವ ಕರಗಳು ಹಾಗೂ ನೌಕರರ ವೇತನದ ಇಎಸ್‌ಐ ಮತ್ತು ಪಿ.ಎಫ್ ಮೊತ್ತ ₹ 1.20 ಕೋಟಿ, ಮಳಿಗೆಗಳ ಬಾಡಿಗೆ ಹಾಗೂ ವಿದ್ಯುತ್ ಶುಲ್ಕ ಮತ್ತು ತರಕಾರಿ ಮಾರುಕಟ್ಟೆಗಳ ಶುಲ್ಕಗಳಿಂದ ₹ 80 ಲಕ್ಷ, ಕಟ್ಟಡ ಪರವಾನಿಗೆ ನೀಡುವುದರಿಂದ ₹ 75 ಲಕ್ಷ, ಅಭಿವೃದ್ಧಿ ಮೇಲ್ವಿಚಾರಣಾ ಶುಲ್ಕ, ಘನತ್ಯಾಜ್ಯ ವಸ್ತು ನಿರ್ವಹಣಾ ತೆರಿಗೆಯಿಂದಾಗಿ ₹ 65 ಲಕ್ಷ ಮೊತ್ತ ಸಂಗ್ರಹವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.