ADVERTISEMENT

ಚಾಮರಾಜನಗರ ಆಕ್ಸಿಜನ್ ದುರಂತ: ವೇತನವೂ ಇಲ್ಲ; ನೌಕರಿಗೂ ಕುತ್ತು!

ಆಕ್ಸಿಜನ್ ದುರಂತ ಸಂತ್ರಸ್ತರ ಗಾಯದ ಮೇಲೆ ಬರೆ; ಸಿಮ್ಸ್‌ನಲ್ಲಿ ನೌಕರಿ ಮಾಡಲು ಸೂಚನೆ

ಬಾಲಚಂದ್ರ ಎಚ್.
Published 26 ಜೂನ್ 2024, 1:20 IST
Last Updated 26 ಜೂನ್ 2024, 1:20 IST
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು   

ಚಾಮರಾಜನಗರ: ‘ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ, ಕೊಟ್ಟ ಮಾತಿನಂತೆ ಸರ್ಕಾರಿ ಉದ್ಯೋಗ ಕೊಡಲಿ. ಇಲ್ಲವಾದರೆ, ಆತ್ಮಹತ್ಯೆಗೆ ಅನುಮತಿ ನೀಡಲಿ. ವೇತನವೂ ಇಲ್ಲದೆ, ಉದ್ಯೋಗ ಭದ್ರತೆಯೂ ಇಲ್ಲದೆ ಬದುಕುವುದಾದರೂ ಹೇಗೆ ?

–ಮೂರು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರ ಪ್ರಶ್ನೆ ಇದು.

2021, ಮೇ 2ರಂದು ಮೃತಪಟ್ಟ 24 ಮಂದಿಯ ಕುಟುಂಬದ ಸದಸ್ಯರು ಇಂದಿಗೂ ಸೂಕ್ತ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ, ಸರ್ಕಾರಿ ಉದ್ಯೋಗಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ಹೋರಾಡುತ್ತಿದ್ದಾರೆ.

ADVERTISEMENT

ಹುಸಿಯಾದ ಭರವಸೆ ?

2022ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಗಾಗಿ ಗುಂಡ್ಲುಪೇಟೆಗೆ ಬಂದಾಗ, ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದರು.

ಅದಾದ 8 ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು, ಉದ್ಯೋಗ, ಪರಿಹಾರದ ನಿರೀಕ್ಷೆಯಲ್ಲಿದ್ದ ಸಂತ್ರಸ್ತರಿಗೆ ಅಲ್ಪಾವಧಿಯಲ್ಲೇ ಭ್ರಮನಿರಸನವಾಗಿತ್ತು. ಸಂತ್ರಸ್ತರ ಹೋರಾಟ ತೀವ್ರಗೊಳ್ಳುತ್ತಲೇ ಕೆಲವರಿಗೆ ತಾತ್ಕಾಲಿಕ ಉದ್ಯೋಗ ನೀಡಲಾಗಿತ್ತು.

ಕೆಲವರು, ‘ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಬೇಕು’ ಎಂದು ಗುತ್ತಿಗೆ ನೌಕರಿ ತಿರಸ್ಕರಿಸಿದ್ದರು. ಅನಿವಾರ್ಯತೆಗೆ ಸಿಲುಕಿದ್ದ 10ಕ್ಕೂ ಹೆಚ್ಚು ಮಂದಿ, ಇದೇ ಫೆಬ್ರುವರಿಯಿಂದ ಸರ್ಕಾರಿ ಕಚೇರಿಗಳಲ್ಲಿ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರಾಗಿ ಸೇರಿಕೊಂಡರು.

ಆದರೆ, ಫೆಬ್ರುವರಿ ಹೊರುತುಪಡಿಸಿ ಉಳಿದ ತಿಂಗಳ ವೇತನ ಯಾರಿಗೂ ಸಿಕ್ಕಿಲ್ಲ. ಈಗ ಸಾಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಸಿಮ್ಸ್‌ಗೆ ವರ್ಗಾವಣೆ:

ಇದರೊಂದಿಗೆ, ‌ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲ್ಲೂಕು ಕಚೇರಿ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಇದೀಗ ಸಿಮ್ಸ್‌ನಲ್ಲಿ (ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆ) ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.

‘ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ಪೋಷಕರ ಜವಾಬ್ದಾರಿ ಹೊತ್ತುಕೊಂಡಿದ್ದು ಏಕಾಏಕಿ ಸಿಮ್ಸ್‌ನಲ್ಲಿ ಕೆಲಸ ಮಾಡಿ ಎಂದರೆ ಹೇಗೆ? ಮಕ್ಕಳನ್ನು, ಅವಲಂಬಿತರನ್ನು ನೋಡಿಕೊಳ್ಳುವವರು ಯಾರು? ಎಂಬುದು ಸಂತ್ರಸ್ತರ ಪ್ರಶ್ನೆ.

‘ಕಾಯಂ ನೌಕರಿ ಕೊಡುವವರೆಗೂ ಈಗಿನ ಸ್ಥಳದಲ್ಲೇ ಕರ್ತವ್ಯ ಮಾಡಲು ಅವಕಾಶ ಕೊಡಿ. ಸಿಮ್ಸ್‌ನಲ್ಲಿ ಮಾತ್ರ ಬೇಡ, ಮನೆಯವರನ್ನು ಕಳೆದುಕೊಂಡ ಆಸ್ಪತ್ರೆಯ ಪರಿಸರದಲ್ಲಿ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುತ್ತಾರೆ ಅವರು.

ನಮಗೆ ಕೊಟ್ಟ ಮಾತಿನಂತೆ ಸರ್ಕಾರಿ ಉದ್ಯೋಗ ಕೊಟ್ಟು ಜೀವನಕ್ಕೊಂದು ದಾರಿ ಮಾಡಲಿ.

–ಜ್ಯೋತಿ ಸಂತ್ರಸ್ತೆ

ಪತಿ ತೀರಿಹೋದ ಬಳಿಕ ಎಲ್ಲರೂ ದೂರವಾದರು. ತವರು ಮನೆಯಲ್ಲಿದ್ದೇನೆ. ಕಾಯಂ ನೌಕರಿ ಕೊಟ್ಟರೆ ನೆಮ್ಮದಿ.

–ಸವಿತಾ ಸಂತ್ರಸ್ತೆ

ಮೂವರು ಹೆಣ್ಣುಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ದಯವಿಟ್ಟು ಬದುಕನ್ನು ಕಿತ್ತುಕೊಳ್ಳಬೇಡಿ.

–ಸುಶೀಲಾ ಸಂತ್ರಸ್ತೆ

ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಕಾಯಂ ನೌಕರಿ ನೀಡುವವರೆಗೂ ಈಗಿನ ಸ್ಥಳದಲ್ಲೇ ಮುಂದುವರಿಸಬೇಕು.

–ಎಂ.ಮಹೇಶ್‌ ನಗರಸಭೆ ಸದಸ್ಯ

ಸಂತ್ರಸ್ತರಿಗೆ ಸಿಮ್ಸ್‌ನಲ್ಲಿ ಕೆಲಸ ನೀಡುವಂತೆ ಸರ್ಕಾರ ಆದೇಶಿಸಿದೆ. ಅವರಿಗೆ ಕಾಯಂ ನೌಕರಿ ನೀಡುವಂತೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ. ಜುಲೈ 1ರಂದು ಸಭೆ ನಡೆಸಲಾಗುವುದು.

–ಶಿಲ್ಪಾ ನಾಗ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.