ADVERTISEMENT

ಚಾಮರಾಜನಗರ: ಆಮ್ಲಜನಕ ದುರಂತ; ನ್ಯಾಯಕ್ಕಾಗಿ ಮತ್ತೆ ಮೊರೆ ಇಟ್ಟ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 4:32 IST
Last Updated 6 ಜೂನ್ 2023, 4:32 IST
ಚಾಮರಾಜನಗರದಲ್ಲಿ ಸೋಮವಾರ ಎಸ್‌ಡಿಪಿಐ ಹಮ್ಮಿಕೊಂಡಿದ್ದ ಸಭೆಯಲ್ಲಿ ಆಮ್ಲಜನಕ ದುರಂತದ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು 
ಚಾಮರಾಜನಗರದಲ್ಲಿ ಸೋಮವಾರ ಎಸ್‌ಡಿಪಿಐ ಹಮ್ಮಿಕೊಂಡಿದ್ದ ಸಭೆಯಲ್ಲಿ ಆಮ್ಲಜನಕ ದುರಂತದ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು    

ಚಾಮರಾಜನಗರ: ‘ಈಗಾಗಲೇ ಎರಡು ವರ್ಷ ಕಾದಿದ್ದೇವೆ. ಇನ್ನೂ ಎಷ್ಟು ವರ್ಷ ಕಾಯಬೇಕು? ಹೆಣ್ಣೊಬ್ಬಳಿಗೇ‌‌ ಬದುಕುವುದು ಕಷ್ಟ. ನನಗೆ ಮಗನೂ ಇದ್ದಾನೆ. ಅವನನ್ನು ಶಾಲೆಗೆ ಸೇರಿಸಬೇಕು. ನನಗೊಂದು ಮನೆ, ಒಂದು ಕೆಲಸ‌ ಮತ್ತು ಮಗನಿಗೆ ಶಿಕ್ಷಣ ಸಿಗಬೇಕು. ಆದಷ್ಟು ಬೇಗ ಈ ಮೂರನ್ನು ಮಾಡಿಸಿಕೊಡಿ…’

2021ರ ಮೇ 2ರ ರಾತ್ರಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲದೆ ಗಂಡನನ್ನು‌ ಕಳೆದುಕೊಂಡ ಯಳಂದೂರು ತಾಲ್ಲೂಕಿನ ಕೆಸ್ತೂರಿನ ನಾಗರತ್ನ ಅವರ ನೋವಿನ ಆಗ್ರಹ ಇದು.

ನಾಗರತ್ನ ಮಾತ್ರವಲ್ಲ, ಆ ದುರ್ಘಟನೆಯಲ್ಲಿ ಪತಿ, ಮಗ, ತಾಯಿ, ಅಣ್ಣ, ತಮ್ಮಂದಿರನ್ನು ಕಳೆದುಕೊಂಡ ಹಲವರು ಅಲ್ಲಿದ್ದರು. ಎಲ್ಲರೂ ತಮಗಾದ ಅನ್ಯಾಯವನ್ನು ದುಃಖಿಸುತ್ತಲೇ ವಿವರಿಸಿದರು. 

ADVERTISEMENT

ದುರ್ಘಟನೆ ಸಂಭವಿಸಿದ ಬಳಿಕ ಸಂತ್ರಸ್ತರ ಪರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿರುವ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಸೋಮವಾರ ನಗರದಲ್ಲಿ ಆಮ್ಲಜನಕ ದುರಂತದ ಸಂತ್ರಸ್ತರ ಕುಟುಂಬದವರ ಸಭೆ ಕರೆದಿತ್ತು. 25ಕ್ಕೂ ಹೆಚ್ಚು ಕುಟುಂಬದವರು ಸಭೆಗೆ ಬಂದಿದ್ದರು. 

ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್‌ ಮಜಿದ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂತ್ರಸ್ತರು, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು. 

ಕೆಸ್ತೂರಿನ ನಾಗರತ್ನ ಮಾತನಾಡಿ, ‘ಕೋವಿಡ್‌ ಸಂದರ್ಭದಲ್ಲಿ ತಂದೆ ಅಥವಾ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಪ್ರತಿ ತಿಂಗಳು ₹2000 ಕೊಡುತ್ತದೆ. ನನ್ನ ಮಗನಿಗೆ ಅದು ಸಿಕ್ಕಿಲ್ಲ. ನನಗೆ ಪಿಯುಸಿಯಾಗಿದೆ. ಕೆಲಸ ಕೇಳಲು ಹೋದರೆ ಕಂಪ್ಯೂಟರ್‌ ಆಗಿದೆಯಾ ಎಂದು ಕೇಳುತ್ತಾರೆ. ಗಂಡನ ಮನೆಯಲ್ಲಿ ವ್ಯವಸ್ಥೆ ಇಲ್ಲ. ತಾಯಿಯ ಮನೆಯಲ್ಲೂ ತಂದೆ ತಾಯಿ ಇಬ್ಬರಿಗೂ ವಯಸ್ಸಾಗಿದೆ. ಜೀವನ ತುಂಬಾ ಕಷ್ಟವಾಗಿದೆ. ಸರ್ಕಾರ ನಮಗೆ ಸಹಾಯ ಮಾಡಿಲ್ಲ. ಹೊಸ ಸರ್ಕಾರ ಬಂದಿದೆ. ಈಗಲಾದರೂ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು. 

ಪತಿಯನ್ನು ಕಳೆದುಕೊಂಡಿರುವ ಬಿಸಲವಾಡಿ ಗ್ರಾಮದ ಜ್ಯೋತಿ ಮಾತನಾಡಿ, ‘ಕಾಂಗ್ರೆಸ್‌ನವರು ನೀಡಿದ ₹1 ಲಕ್ಷ ಪರಿಹಾರ ಬಿಟ್ಟು ಬೇರೆ ಯಾವುದೇ ಪರಿಹಾರ ನಮಗೆ ಬಂದಿಲ್ಲ. ನನ್ನ ಪತಿಯ ಪರೀಕ್ಷಾ ವರದಿಯಲ್ಲಿ ಕೋವಿಡ್‌ ಎಂದಿಲ್ಲ. ಹಾಗಾಗಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ. ಕೋರ್ಟ್‌ ಸೂಚನೆಯಿಂದ ನೀಡಿದ ಪರಿಹಾರವೂ ನನಗೆ ಸಿಕ್ಕಿಲ್ಲ’ ಎಂದು ಅಲವತ್ತುಕೊಂಡರು. 

ಮಗನನ್ನು ಕಳೆದುಕೊಂಡ ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿಯ ಜಯಮ್ಮ ಮತ್ತು ಮರಿಸ್ವಾಮಿ ದಂಪತಿ ಕೂಡ ಸರ್ಕಾರ, ಅಧಿಕಾರಿಗಳಿಂದ ನಮಗೆ ಅನ್ಯಾಯವಾಗಿದೆ ಎಂದು ದುಃಖಿಸಿದರು. 

‘ಈ ಪ್ರಕರಣದಲ್ಲಿ ವೈಜ್ಞಾನಿಕವಾಗಿ ತನಿಖೆ ನಡೆಯಬೇಕು. ಅದು ಆಗುತ್ತಿಲ್ಲ. ತನಿಖೆಗೆ ನೇಮಕವಾಗಿದ್ದ ನಿವೃತ್ತ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರಾದಾಗ, ಮೇ 2ರಂದು ಏನೇನು ಆಯಿತು ಎಂಬುದನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸಿದ್ದೇನೆ. ಆದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಘಟನೆಯಲ್ಲಿ ಮೃತಪಟ್ಟಿದ್ದ ಚಾಮರಾಜನಗರ ಗೀತಾಲಕ್ಷ್ಮಿ ಎಂಬುವವರ ಮಗ ರಮೇಶ್‌ ಬಾಬು ಹೇಳಿದರು. 

ನಿಮ್ಮೊಂದಿಗೆ ಇರುತ್ತೇವೆ: ಎಲ್ಲರ ಕಷ್ಟಗಳನ್ನು ಆಲಿಸಿದ ನಂತರ ಮಾತನಾಡಿದ ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್‌ ಮಜಿದ್‌, ‘ನಿಮಗೆ ನ್ಯಾಯ ಸಿಗುವವರೆಗೆ ನಿಮ್ಮೊಂದಿಗೆ ನಾವಿದ್ದೇವೆ. ಅದು ನಮ್ಮ ಬದ್ಧತೆ. ಹಿಂದಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಮರೆಮಾಚುವ ಪ್ರಯತ್ನ ಮಾಡಿತ್ತು. ಅಂದಿನ ಆರೋಗ್ಯ ಸಚಿವರೇ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಪರಿಹಾರ ನೀಡುವುದು ಮಾತ್ರವಲ್ಲ, ಘಟನೆಗೆ ಕಾರಣದವರಲ್ಲಿ ಒಬ್ಬರನ್ನೂ ಅಮಾನತು ಮಾಡಿಲ್ಲ. ಇದು ನಮಗೂ ಬೇಸರ ತಂದಿದೆ’ ಎಂದರು. 

‘ರಾಜ್ಯದಲ್ಲಿ ಹೊಸ ಕಾಂಗ್ರೆಸ್‌ ಸರ್ಕಾರ ಬಂದಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಸಂತ್ರಸ್ತರ ಪರವಾಗಿ ಮಾತನಾಡಿದ್ದರು. ಕಾಂಗ್ರೆಸ್‌ ಸರ್ಕಾರ ಬಂದರೆ ಪರಿಹಾರ, ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು. ಈಗಿನ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಕೂಡ ಮತ್ತೆ ತನಿಖೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ, ನಿಮಗೆ ನ್ಯಾಯ ಸಿಗುವ ನಿರೀಕ್ಷೆ. ಭರವಸೆ ಕಳೆದುಕೊಳ್ಳಬೇಡಿ’ ಎಂದರು. 

‘ನಾವು ನಿಮ್ಮ ಪರವಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಕೇಳೋಣ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಅಗತ್ಯ ಬಿದ್ದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಲಾಗುವುದು’ ಎಂದರು. 

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್, ಪ್ರಧಾನ ಕಾರ್ಯದರ್ಶಿ ಮಹೇಶ್ ಎಂ., ಜಿಲ್ಲಾ ಖಜಾಂಚಿ ನಯಾಜ್ ಉಲ್ಲಾ, ನಗರಸಭಾ ಸದಸ್ಯರಾದ ಕಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಮುಖಂಡ ಇಸ್ರಾರ್ ಪಾಷ ಇದ್ದರು. 

ಮೂರು ಬೇಡಿಕೆ ತಕ್ಷಣ ಈಡೇರಿಸಲು ಆಗ್ರಹ

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್‌ ಮಜೀದ್‌ ‘ಹಿಂದಿನ ಬಿಜೆಪಿ ಸರ್ಕಾರ ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ಅನ್ಯಾಯಮಾಡಿದೆ. ಕಾಂಗ್ರೆಸ್‌ ಸರ್ಕಾರ ಆ ರೀತಿ ಮಾಡಬಾರದು. ಹೊಸದಾಗಿ ತನಿಖೆ ಮಾಡುವುದಕ್ಕಾಗಿ ಆರೋಗ್ಯ ಸಚಿವರು ಹೇಳಿದ್ದಾರೆ. ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ ತನಿಖೆ ಪ್ರಕ್ರಿಯೆ ವಿಳಂಬವಾಗುತ್ತದೆ. ಹಾಗಾಗಿ ತನಿಖೆ ನಡೆಯುತ್ತಿರಲಿ. ಅದಕ್ಕೂ ಮೊದಲು ಸಂತ್ರಸ್ತರ ಸಹಾಯಕ್ಕೆ ಸರ್ಕಾರ ಧಾವಿಸಬೇಕು’ ಎಂದರು. 

‘ಈ ಪ್ರಕರಣದಲ್ಲಿ ನಾವು ಆರಂಭದಿಂದಲೂ ಸಂತ್ರಸ್ತರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮದು ಪ್ರಮುಖ ಮೂರು ಬೇಡಿಕೆ ಇಟ್ಟಿದ್ದೆವು. ಮೃತಪಟ್ಟ ಎಲ್ಲ 37 ಮಂದಿಯ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ರಾಜ್ಯ ಸರ್ಕಾರ ತಕ್ಷಣವೇ ಕುಟುಂಬಗಳಿಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಅಬ್ದುಲ್ ಮಜಿದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.