ಕೊಳ್ಳೇಗಾಲ: ‘ಹಿಂದುಳಿದ ಉಪ್ಪಾರ ಜನಾಂಗದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸೂಕ್ತ ಸಚಿವ ಸ್ಥಾನ ನೀಡಬೇಕು ಎಂದು ತಾಲ್ಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ರಮೇಶ್ ಒತ್ತಾಯಿಸಿದರು.
‘ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಲ್ಲಿ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿರುವ ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದರಿಂದ ಉಪ್ಪಾರ ಜನಾಂಗದವರಿಗೆ ತೀವ್ರ ಅಸಮಾಧಾನ ಉಂಟಾಗಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸೋಮಣ್ಣ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿರುವ ಅವರಿಗೆ ಸಚಿವ ಸ್ಥಾನ ನೀಡ ಬೇಕಿತ್ತು. ಮುಂದಿನ ದಿನಗಳಲ್ಲಿ ನೀಡದಿದ್ದರೆ, ಉಪ್ಪಾರ ಸಮಾಜದವರು ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್ ಮಾತನಾಡಿ, ‘ಒಂದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ನಿಂತು ಗೆಲುವು ಸಾಧಿಸಿದ್ದ ನಮ್ಮ ಪುಟ್ಟರಂಗಶೆಟ್ಟಿ ನಿಜವಾದ ಅಹಿಂದ ನಾಯಕರು. ಪ್ರಬಲ ನಾಯಕರಾದ ಸೋಮಣ್ಣ, ಬೆಂಕಿ ಮಹದೇವು, ಮಲ್ಲಿಕಾರ್ಜುನಪ್ಪ ಸೇರಿದಂತೆ ಇತರರನ್ನು ಸೋಲಿಸಿದವರು. ಇಂತಹ ನಾಯಕರಿಗೆ ಕಾಂಗ್ರೆಸ್ ಪಕ್ಷದವರು ಅನ್ಯಾಯ ಮಾಡಿದೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಗೆಲುವು ಸಾಧಿಸಲು ಉಪ್ಪಾರ ಜನಾಂಗದವರು ಮತ ಹಾಕಿದ್ದಾರೆ. ಆದ್ದರಿಂದ ಕೂಡಲೇ ಸಚಿವ ಸಂಪುಟದಲ್ಲಿ ಪುಟ್ಟರಂಗಶೆಟ್ಟಿ ಅವರನ್ನು ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಮಟ್ಟದಲ್ಲಿ ಕರಪತ್ರ ಹಂಚಿ ಕಾಂಗ್ರೆಸ್ ವಿರುದ್ಧವಾಗಿ ನಿಲ್ಲುವಂತೆ ಜನರಿಗೆ ಕರೆ ನೀಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಭಗೀರಥ ಉಪ್ಪಾರ ಉಪಾಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ, ನಿರ್ದೇಶಕ ದೊಡ್ಡಿಂದುವಾಡಿ ರಾಚಪ್ಪಾಜಿ, ಉತ್ತಂಬಳ್ಳಿ ಗುರುಮಲ್ಲು, ಮಾದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.