ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನ ವಿದ್ಯಾನಗರದ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರಕ್ಕೆ ಅಥ್ಲೆಟಿಕ್ಸ್, ಶೂಟಿಂಗ್, ಈಜು ಕ್ರೀಡೆಗಳಲ್ಲಿ ಪ್ರತಿಭಾನ್ವಿತರಾಗಿರುವ ಕ್ರೀಡಾ ಪಟುಗಳನ್ನು ಆಯ್ಕೆ ಮಾಡುವ ಸಲುವಾಗಿ ಶುಕ್ರವಾರ (ಜೂನ್ 9) ಹಾಗೂ ಶನಿವಾರ (ಜೂನ್ 10) ಬೆಂಗಳೂರಿನ ವಿದ್ಯಾನಗರದಲ್ಲಿರುವ ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ಕ್ರೀಡಾ ಶಾಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕ್ರೀಡಾ ಪಟುಗಳು ದಿನಾಂಕ ಜೂನ್ 1ಕ್ಕೆ 12 ವರ್ಷ ದಾಟಿರಬೇಕು. 23 ವರ್ಷದೊಳಗಿರಬೇಕು. ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಎರಡು ವರ್ಷ ಸಡಿಲಿಕೆ ಇದೆ. ತಜ್ಞರ ಸಮಿತಿ ಶಿಫಾರಸಿನ ಅನ್ವಯ ಗರಿಷ್ಠ ವಯೋಮಿತಿಯನ್ನು ಸಾಮರ್ಥ್ಯದ ಆಧಾರದ ಮೇಲೆ ನಿಗದಿಪಡಿಸಲಾಗುವುದು. ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವವಿವರದ ಅರ್ಜಿಯನ್ನು ಆಯ್ಕೆಯ ಸಂದರ್ಭದಲ್ಲಿ ಸಲ್ಲಿಸಬೇಕು. ಕರ್ನಾಟಕದಲ್ಲಿ ಜನಿಸಿದ ಹಾಗೂ ವಾಸಿಸುತ್ತಿರುವವರಿಗೆ ಆದ್ಯತೆ ನೀಡಲಾಗುವುದು.
ಆಧಾರ್ ಕಾರ್ಡ್ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಕನಿಷ್ಠ ಪಕ್ಷ ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ (ರಾಜ್ಯ ಅಥ್ಲೆಟಿಕ್ಸ್, ಶೂಟಿಂಗ್ ಹಾಗೂ ಈಜು ಸಂಸ್ಥೆ, ರಾಜ್ಯ ಶಾಲಾ ಕ್ರೀಡಾಕೂಟ, ವಿಶ್ವವಿದ್ಯಾನಿಲಯ ಸಂಘಟಿಸುವ ಕ್ರೀಡಾಕೂಟ) ಪದಕ ಪಡೆದಿರಬೇಕು. ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟ (ಅಥ್ಲೆಟಿಕ್ಸ್, ಶೂಟಿಂಗ್, ಈಜು ಫೆಡೆರೇಷನ್, ಶಾಲಾ ರಾಷ್ಟ್ರೀಯ ಫೆಡರೇಷನ್ ಹಾಗೂ ಅಖಿಲ ಭಾರತ ವಿಶ್ವವಿದ್ಯಾನಿಲಯ ಸಂಘಟಿಸುವ ಕ್ರೀಡಾಕೂಟ) ಭಾಗವಹಿಸಿ ಪದಕ ಪಡೆದವರಿಗೆ ಪ್ರಾಶಸ್ತ್ಯ ನೀಡಲಾಗುವುದು.
ಕಳೆದ ಹಾಗೂ ಪ್ರಸ್ತುತ ಸಾಲಿನ ಕ್ರೀಡಾ ಕೂಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಆಯ್ಕೆ ಪ್ರಕ್ರಿಯೆ ದಿನದಂದು ಸಂಘಟಿಸಲಾಗುವ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಜನ್ಮ ದಿನಾಂಕದ ದಾಖಲಾತಿಗಾಗಿ ಜನನ ಪ್ರಮಾಣ ಪತ್ರ ಅಥವಾ ಶೈಕ್ಷಣಿಕ ಶಾಲಾಮುಖ್ಯಸ್ಥರಿಂದ ಧೃಡಿಕರಿಸಲ್ಪಟ್ಟ ಹಾಗೂ10ನೇ ತರಗತಿ ತೇರ್ಗಡೆಗೊಂಡಿರುವ ಅಂಕಪಟ್ಟಿಯ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಆಯ್ಕೆಯ ಸಮಯದಲ್ಲಿ ಲಘು ಭೋಜನ ಮಾತ್ರ ನೀಡಲಾಗುತ್ತದೆ. ಆಯ್ಕೆ ಟ್ರಯಲ್‌ಗಳಲ್ಲಿ ಫೆಡೆರೇಶನ್‌ನಿಂದ ಅನುಮೋದಿಸಲಾದ ಮತ್ತು ಪ್ರಮಾಣೀಕೃತ ಕ್ರೀಡಾ ಸಾಮಗ್ರಿಗಳನ್ನು ಬಳಸಲಾಗುವುದು. ಶೂಟಿಂಗ್‌ಗಾಗಿ ಅಥ್ಲೀಟ್‌ಗಳು ಸ್ವಂತ ಸಲಕರಣೆಗಳನ್ನು ಕೊಂಡೊಯ್ಯಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.