ಕೊಳ್ಳೇಗಾಲ/ಯಳಂದೂರು: ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲದಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮಹಿಳೆಯೊಬ್ಬರ ಅಂತ್ಯ ಸಂಸ್ಕಾರವನ್ನು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲೇ ಗುರುವಾರ ನೆರವೇರಿಸಿದ್ದಾರೆ.
ಗ್ರಾಮದ ಚಂದ್ರಮ್ಮ(48) ಎಂಬ ಮಹಿಳೆ ಬುಧವಾರ ರಾತ್ರಿ ನಿಧನರಾಗಿದ್ದರು.
ಮಾಂಬಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೊನ್ನುಹೊಳೆ ಕಾಲುವೆಯನ್ನು ದಾಟಿ ಹೋಗಬೇಕು. ಸುವರ್ಣಾವತಿ ಜಲಾಶಯದ ಹೊರಹರಿವು ಹೆಚ್ಚಾಗಿ ನದಿ ಉಕ್ಕೇರಿದೆ. ಸೇತುವೆ ಇಲ್ಲದೆ ಸ್ಮಶಾನಕ್ಕೆ ಹೋಗಲು ಸಾಧ್ಯವಿಲ್ಲದಂತಾಗಿದೆ.
ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಸೇತುವೆ ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಪಂಚಾಯಿತಿಯ ಕಚೇರಿ ಆವರಣದಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಪೊಲೀಸರು ಹಾಗೂ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ, ಪಟ್ಟು ಬಿಡದ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಿದ್ದಾರೆ.
ಉಪವಿಭಾಗಾಧಿಕಾರಿ, ಡಿವೈಎಸ್ ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಯಳಂದೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಳೆಹಾನಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ಪ್ರಕರಣ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.