ADVERTISEMENT

ಚಾಮರಾಜನಗರ: ಖಾತೆಗೆ ಹಣ, ವದಂತಿ ನಂಬಿ ಬ್ಯಾಂಕ್‌ಗಳಿಗೆ ಮುಗಿಬಿದ್ದ ಜನ

ಏ.9 ರೊಳಗೆ ಹಣ ಪಡೆಯದಿದ್ದರೆ ವಾಪಸ್‌ ಹೋಗುತ್ತದೆ ಎಂದು ಹರಡಿದ ವದಂತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 5:24 IST
Last Updated 8 ಏಪ್ರಿಲ್ 2020, 5:24 IST
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿರುವ ಎಸ್‌ಬಿಐ ಹೊರಗಡೆ ಗ್ರಾಹಕರಿಗೆ ಕುರ್ಚಿ ಹಾಕಲಾಗಿತ್ತು
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿರುವ ಎಸ್‌ಬಿಐ ಹೊರಗಡೆ ಗ್ರಾಹಕರಿಗೆ ಕುರ್ಚಿ ಹಾಕಲಾಗಿತ್ತು   

ಚಾಮರಾಜನಗರ: ಮಹಿಳೆಯರು ಹೊಂದಿರುವ ಜನಧನ್‌ ಖಾತೆಗೆ ₹500, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡ ರೈತರ ಖಾತೆಗೆ ₹2000 ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳ ಖಾತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಣವನ್ನು ಜಮೆ ಮಾಡಲು ಆರಂಭ ಮಾಡುತ್ತಿದ್ದಂತೆಯೇ, ಅದನ್ನು ಪಡೆಯಲು ಜನರು ಬ್ಯಾಂಕ್‌ಗಳಿಗೆ ಮುಗಿ ಬಿದ್ದರು.

ಜನಧನ್‌ ಖಾತೆಗೆ ಬಂದ ₹500 ಅನ್ನು ಇದೇ 9ರ ಒಳಗಾಗಿ ಪಡೆಯದಿದ್ದರೆ ಅದು ವಾಪಸ್‌ ಹೋಗುತ್ತದೆ ಎಂಬ ವದಂತಿ ಹರಡಿದ್ದರಿಂದ ಹೆಚ್ಚಿನ ಮಹಿಳೆಯರು ಮಂಗಳವಾರವೇ ಬ್ಯಾಂಕ್‌ಗಳಿಗೆ ಧಾವಿಸಿದರು.

ಇದರಿಂದಾಗಿ ಬ್ಯಾಂಕುಗಳ ಮುಂದೆ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಸಾಮಾಜಿಕ ಅಂತರ ನಿಯಮವೂ ಪಾಲನೆಯಾಗಲಿಲ್ಲ. ಜನರನ್ನು ನಿಯಂತ್ರಿಸಲು ಬ್ಯಾಂಕ್‌ ಸಿಬ್ಬಂದಿ ಹಾಗೂ ಪೊಲೀಸರು ಹರ ಸಾಹಸ ಪಡಬೇಕಾಯಿತು. ಪೊಲೀಸರು ಗದರಿದ ನಂತರವಷ್ಟೇ ಜನರು ಪರಸ್ಪರ ಅಂತರ ಕಾಯ್ದುಕೊಂಡರು. ಮಧ್ಯಾಹ್ನದವರೆಗೂ ಎಲ್ಲ ಬ್ಯಾಂಕುಗಳ ಮುಂದೆಯೂ ಗ್ರಾಹಕರ ಸರತಿ ಸಾಲು ಕಂಡು ಬಂತು.

ADVERTISEMENT

ಕೊರೊನಾ ವೈರಸ್‌ ಸೋಂಕು ತಡೆಗೆ ಹೇರಲಾಗಿರುವ ದಿಗ್ಬಂಧನದಿಂದ ಬಡವರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಕೇಂದ್ರ ಸರ್ಕಾರ, ಜನ ಧನ ಖಾತೆ ಹೊಂದಿರುವ ಎಲ್ಲ ಮಹಿಳೆಯರ ಖಾತೆಗೆ ಮೂರು ತಿಂಗಳು ತಲಾ ₹500, ಪ್ರಧಾನಿ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯ ಮೊದಲ ಕಂತನ್ನು ಏಪ್ರಿಲ್‌ ತಿಂಗಳಲ್ಲೇ ಕೊಡುವುದಾಗಿ ಹೇಳಿತ್ತು. ಇದರ ಜೊತೆಗೆ ರಾಜ್ಯ ಸರ್ಕಾರ ಕೂಡ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಹಣವನ್ನು ಎರಡು ತಿಂಗಳ ಮೊತ್ತವನ್ನು ಒಮ್ಮೆಗೆ ನೀಡುವುದಾಗಿ ಹೇಳಿತ್ತು.

ಮಹಿಳೆಯರ ಜನಧನ್‌ ಖಾತೆಗೆ ₹500 ಹಾಗೂ ಕೃಷಿ ಸಮ್ಮಾನ್‌ ಯೋಜನೆಯ ಮೊದಲ ಕಂತು ₹2000 ಅನ್ನು ಫಲಾನುಭವಿಗಳ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡಿದೆ.

ಇತ್ತೀಚೆಗೆ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೊರೊನಾ ಭೀತಿಯ ಕಾರಣಕ್ಕೆ ಸಾಮಾಜಿಕ ಅಂತರ ಕಾ‍ಪಾಡಿಕೊಳ್ಳಲು ಹಾಗೂ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸೂಚನೆಯನ್ನೂ ನೀಡಿದ್ದರು. ಆದರೆ, ಮಂಗಳವಾರ ಭಾರಿ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಎಲ್ಲ ಕಡೆಯೂ ಅದರ ಪಾಲನೆಯಾಗಲಿಲ್ಲ.

ಎಸ್‌ಬಿಐ, ಯೂನಿಯನ್‌ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ವಿಜಯಾ ಬ್ಯಾಂಕ್‌ (ಈಗ ಬ್ಯಾಂಕ್‌ ಆಫ್‌ ಬರೋಡಾ), ಸಿಂಡಿಕೇಟ್‌ ಬ್ಯಾಂಕ್‌ (ಈಗ ಕೆನರಾ ಬ್ಯಾಂಕ್‌) ಮುಂದೆ ಭಾರಿ ಜನರು ಸೇರಿದ್ದರು. ಭುವನೇಶ್ವರಿ ವೃತ್ತದ ಬಳಿ ಇರುವ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಒಂದು ಮೀಟರ್‌ ದೂರಕ್ಕೆ ಒಂದರಂತೆ ಕುರ್ಚಿಗಳನ್ನು ಇಡಲಾಗಿತ್ತು. ಇನ್ನೂ ಕೆಲವು ಬ್ಯಾಂಕುಗಳಲ್ಲಿ ಸಣ್ಣ ಶಾಮಿಯಾನ ಹಾಕಿದ್ದು ಕಂಡು ಬಂತು.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬಳಿ ಸುಮಾರು 500 ಮೀಟರ್‌ಗೂ ಹೆಚ್ಚು ಉದ್ದದ ಸರತಿ ಸಾಲು ಇತ್ತು. ರಥದ ಬೀದಿಯಲ್ಲಿರುವ ವಿಜಯಾ ಬ್ಯಾಂಕ್‌ನಲ್ಲೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದುದರಿಂದ ಗೊಂದಲದ ವಾತಾವರಣ ಉಂಟಾಯಿತು. ತಹಶೀಲ್ದಾರ್‌, ಪೊಲೀಸರು ಹಾಗೂ ಬ್ಯಾಂಕ್‌ ಅಧಿಕಾರಿಗಳು ಜನರನ್ನು ಮನವೊಲಿಸಿ ದೂರ ದೂರ ನಿಲ್ಲುವಂತೆ ಮಾಡಿದರು.

ವದಂತಿ ಸೃಷ್ಟಿಸಿದ ಆತಂಕ: ಜನಧನ ಖಾತೆಗೆ ಬಂದಿರುವ ಹಣವನ್ನು ಎರಡು ದಿನಗಳಲ್ಲಿ ತೆಗೆದುಕೊಳ್ಳದಿದ್ದರೆ, ಅದು ವಾಪಸ್‌ ಹೋಗುತ್ತದೆ ಎಂಬ ವದಂತಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹರಡಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ನಗರ ಮಾತ್ರವಲ್ಲದೇ ಸುತ್ತಮುತ್ತಲಿನ ಊರುಗಳ ಮಹಿಳೆಯರು ಕೂಡ ಬ್ಯಾಂಕ್‌ಗೆ ಬಂದಿದ್ದರು. ‘ಒಮ್ಮೆ ಖಾತೆಗೆ ಬಂದ ಹಣ ಯಾವುದೇ ಕಾರಣಕ್ಕೂ ವಾಪಸ್‌ ಹೋಗುವುದಿಲ್ಲ’ ಎಂದು ಬ್ಯಾಂಕ್‌ ಅಧಿಕಾರಿಗಳು ಪದೇ ಪದೇ ಹೇಳಬೇಕಾದ ಸನ್ನಿವೇಶ ನಿರ್ಮಾಣವಾಯಿತು.

ಖಾತೆ ಪರಿಶೀಲಿಸಲು ಬಂದರು: ಕೆಲವರು‌ ಖಾತೆಯಿಂದ ಹಣ ತೆಗೆಯಲು ಬಂದಿದ್ದರೆ, ಇನ್ನೂ ಕೆಲವರು ಹಣ ಜಮೆ ಆಗಿದೆಯೇ ಎಂ‌ಬುದನ್ನು ಪರಿಶೀಲಿಸಲು ಬಂದರು.

‘ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶ ಬಂದಿರಲಿಲ್ಲ. ಹಾಗಾಗಿ ಖಾತೆಗೆ ಹಣ ಬಂದಿದೆಯೇ ಎಂದು ನೋಡಲು ಬಂದೆ’ ಎಂದು ವಿಜಯಾ ಬ್ಯಾಂಕ್‌ ಮುಂದೆ ನಿಂತಿದ್ದ ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಗತ್ಯ‌ವಿದ್ದರಷ್ಟೇ ಬನ್ನಿ: ಮನವಿ
ಈ ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಅನಂತ ಪ್ರಸಾದ್‌ ಅವರು, ‘ಹಣ ವಾಪಸ್‌ ಹೋಗುತ್ತದೆ ಎಂದು ಯಾರೋ ಸುದ್ದಿ ಹರಡಿಸಿದ್ದಾರೆ. ಇದು ಸುಳ್ಳು. ಒಮ್ಮೆ ಖಾತೆಗೆ ಹಣ ಬಂದರೆ ಮತ್ತೆ ಅದು ವಾಪಸ್‌ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಫಲಾನುಭವಿಗಳಿಗೆ ಇದನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ’ ಎಂದು ಹೇಳಿದರು.

‘ದಿಗ್ಬಂಧನ ಜಾರಿಯಲ್ಲಿರುವುದರಿಂದಹಣದ ಅಗತ್ಯವಿದ್ದರಷ್ಟೇ ಬ್ಯಾಂಕ್‌ಗೆ ಬನ್ನಿ. ತುರ್ತಾಗಿ ಹಣ ಬೇಡದೆ ಇದ್ದರೆ, ನಿಧಾನವಾಗಿ ಪಡೆದುಕೊಳ್ಳಬಹುದು.ಹೆಚ್ಚು ಜನ ಸೇರಬಾರದು ಎಂಬ ನಿಯಮ ಇರುವುದರಿಂದ ಒಬ್ಬರೇ ಬನ್ನಿ. ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಬ್ಯಾಂಕ್‌ನಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ’ ಎಂದು ಗ್ರಾಹಕರಿಗೆ ಮನವಿ ಮಾಡುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

**
ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತಿದೆ. ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಟೋಕನ್‌ ನೀಡಿ, ಹಣ ತೆಗೆಯಲು ಅವಕಾಶ ಮಾಡಲಾಗಿದೆ. ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ.
-ಅನಂತ ಪ್ರಸಾದ್‌ ಬಿ. ಲೀಡ್‌ ಬ್ಯಾಂಕ್‌ ಮ್ಯಾನೇಜರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.