ADVERTISEMENT

ಚಾಮುಲ್‌: ‘ನಂದಿನಿ’ ಮಾರುಕಟ್ಟೆ ವಿಸ್ತಾರ

ಅಸ್ಸಾಂ ರೈಫಲ್ಸ್‌, ಭೂತಾನ್‌, ಈಶಾನ್ಯ ರಾಜ್ಯಗಳಿಗೆ ಪೂರೈಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 17:03 IST
Last Updated 24 ಜೂನ್ 2021, 17:03 IST
ಚಾಮುಲ್‌
ಚಾಮುಲ್‌   

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟವು (ಚಾಮುಲ್‌) ‘ನಂದಿನಿ’ಯ ವಿವಿಧ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದು, ಇಲ್ಲಿ ತಯಾರಾಗುವ ನಂದಿನಿ ಹಾಲು, ನೆರೆಯ ರಾಜ್ಯಗಳಲ್ಲದೇ, ಭಾರತೀಯ ಸೇನೆ, ಭೂತಾನ್‌, ಈಶಾನ್ಯ ರಾಜ್ಯಗಳಿಗೂ ತಲುಪುತ್ತಿದೆ.

‘ನಂದಿನಿ ಗುಡ್‌ಲೈಫ್‌ ಹಾಲು ಈ ಹಿಂದೆಯೂ ಭೂತಾನ್‌ಗೆ ಹೋಗುತ್ತಿತ್ತು. ಕೋವಿಡ್‌ ಹಾವಳಿ ಆರಂಭಗೊಂಡ ನಂತರ ಅದು ಸ್ಥಗಿತಗೊಂಡಿತ್ತು. ಅದೀಗ ಮತ್ತೆ ಪುನರಾರಂಭವಾಗಿದೆ’ ಎಂದು ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ರಾಜಶೇಖರಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್‌ಗೆ ತಿಂಗಳಿಗೆ 4.5 ಲಕ್ಷದಿಂದ 5 ಲಕ್ಷ ಲೀಟರ್‌ ಗುಡ್‌ಲೈಫ್‌ ಹಾಲು ಪೂರೈಸಲಾಗುತ್ತಿದೆ. ಭೂತಾನ್‌ಗೆ ತಿಂಗಳಿಗೆ 1.5 ಲಕ್ಷ ಲೀಟರ್‌ ಹಾಲು ಹೋಗುತ್ತದೆ. ಮೇಘಾಲಯ, ಮಿಜೊರಾಂ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳು, ಕೇರಳ ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಗೆ ಪ್ರತಿ ದಿನ 60 ಸಾವಿರ ಲೀಟರ್‌ ಪೂರೈಕೆ ಮಾಡಲಾಗುತ್ತಿದೆ. ಇತ್ತೀಚೆಗೆ ತಮಿಳುನಾಡಿನ ಊಟಿ ಭಾಗದಲ್ಲೂ ನಂದಿನಿ ಹಾಲು ಲಭ್ಯವಾಗುತ್ತಿದ್ದು, ದಿನಕ್ಕೆ 1,000 ಲೀಟರ್‌ ಮಾರಾಟವಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

2.75 ಲಕ್ಷ ಲೀಟರ್ ಹಾಲು ಉತ್ಪಾದನೆ: ಸದ್ಯ ಜಿಲ್ಲೆಯಲ್ಲಿ ಪ್ರತಿ ದಿನ 2.75 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 1.2 ಲಕ್ಷ ಲೀಟರ್‌ ಗುಡ್‌ಲೈಫ್‌ ಹಾಲು ತಯಾರಿಸಲಾಗುತ್ತಿದೆ. 40 ಸಾವಿರ ಲೀಟರ್‌ ಹಾಲನ್ನು ಮದರ್‌ ಡೇರಿಗೆ ಪೂರೈಸಲಾಗುತ್ತಿದೆ. 33 ಸಾವಿರ ಲೀಟರ್‌ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತಿದೆ. ಏಳು ಸಾವಿರ ಲೀಟರ್‌ಗಳಷ್ಟು ಮೊಸರು ತಯಾರಿಸಲಾಗುತ್ತಿದೆ. ಇದರ ಜೊತೆಗೆ 100 ಟನ್‌ಗಳಷ್ಟು ತುಪ್ಪ ತಯಾರಿಸಲಾಗುತ್ತಿದೆ. ಬೆಣ್ಣೆ, ಪೇಡಾ ಕೂಡ ಕುದೇರಿನಲ್ಲಿರುವ ಘಟಕದಲ್ಲಿ ತಯಾರಾಗುತ್ತದೆ.

* ಚಾಮರಾಜನಗರದ ರೈತರು ಉತ್ಪಾದಿಸಿದ ಹಾಲು ಈಗ ಈಶಾನ್ಯ ರಾಜ್ಯಗಳ ತೀರಾ ಒಳಪ್ರದೇಶಗಳಲ್ಲೂ ಲಭ್ಯವಾಗುತ್ತಿದೆ. ಮಾರುಕಟ್ಟೆ ವಿಸ್ತರಣೆಯಲ್ಲಿ ಪುಟ್ಟ ಹೆಜ್ಜೆಯನ್ನು ಇಡುತ್ತಿದ್ದೇವೆ.

-ರಾಜಶೇಖರಮೂರ್ತಿ, ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.