ಚಾಮರಾಜನಗರ: ಚಾಮರಾಜನಗರ ಹಾಲು ಒಕ್ಕೂಟದ (ಚಾಮುಲ್) ಒಂಬತ್ತು ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿದ್ದರೂ, ಬಿಜೆಪಿಯು ಅಧ್ಯಕ್ಷ ಸ್ಥಾನ ಗಳಿಸುವುದರಲ್ಲಿ ಯಶಸ್ವಿಯಾಗಿದೆ.
ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೂ, ಎರಡನೇ ಬಾರಿಗೆ ಚಾಮುಲ್‌ನ ಅಧಿಕಾರ ಹಿಡಿಯುವ ಕಾಂಗ್ರೆಸ್‌ನ ಯತ್ನ ವಿಫಲವಾಗಿದೆ.
ಅಚ್ಚರಿಯ ಬೆಳವಣಿಗೆ: ಇದೇ 14ರಂದು ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಚಾಮರಾಜನಗರ ತಾಲ್ಲೂಕಿನಿಂದ ಸ್ಪರ್ಧಿಸಿದ್ದ ಎಚ್.ಎಸ್.ಬಸವರಾಜು ಹಾಗೂ ಯಳಂದೂರಿನಿಂದ ಸ್ಪರ್ಧಿಸಿದ್ದ ವೈ.ಸಿ.ನಾಗೇಂದ್ರ ಅವರು ಮಾತ್ರ ಗೆದ್ದಿದ್ದರು. ಬಿಜೆಪಿ ಮುಖಂಡರಾಗಿದ್ದರೂ, ಗುಂಡ್ಲುಪೇಟೆ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಎಂ.ಪಿ.ಸುನೀಲ್ ಅವರು ಗೆದ್ದಿದ್ದರು.
15 ಸದಸ್ಯ ಬಲದ ಚಾಮುಲ್ ನಿರ್ದೇಶಕರ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನಕ್ಕೇರಲು ಏಳು ಮತಗಳು ಅಗತ್ಯ ವಿದೆ. ಸುನೀಲ್ ಅವರು ಸೇರಿದರೂ ಬಿಜೆಪಿಗೆ ಮೂರು ನಿರ್ದೇಶಕರ ಬೆಂಬಲ ಮಾತ್ರ ಇತ್ತು. ಉಳಿದ ನಾಲ್ಕು ಮತಗಳಿಗೆ ಸರ್ಕಾರದ ನಾಮನಿರ್ದೇಶಿತ ಸದಸ್ಯ, ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಇಬ್ಬರು ನಿರ್ದೇಶಕರು ಹಾಗೂ ಮತದಾನದ ಹಕ್ಕು ಹೊಂದಿದ್ದ ಮೂವರು ಅಧಿಕಾರಿಗಳನ್ನು (ಕೆಎಂಎಫ್ ಪ್ರತಿನಿಧಿ, ಸಹಕಾರ ಇಲಾಖೆಯ ಉಪ ರಿಜಿಸ್ಟ್ರಾರ್ ಹಾಗೂ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ) ಅವಲಂಬಿಸ ಬೇಕಾಗಿತ್ತು.
ವರಿಷ್ಠರ ಮಧ್ಯಪ‍್ರವೇಶ:ಎಚ್.ಎಸ್.ಬಸವರಾಜು ಹಾಗೂ ಎಂ.ಪಿ.ಸುನೀಲ್ ಅವರು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ವೈ.ಸಿ.ನಾಗೇಂದ್ರ ಅವರೂ ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಸಿದ್ದರಿಂದ ಬಿಜೆಪಿ ಜಿಲ್ಲಾ ವರಿಷ್ಠರಿಗೆ ಅಂತಿಮ ನಿರ್ಣ ಯಕ್ಕೆ ಬರುವುದು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ರಾಜ್ಯ ವರಿಷ್ಠರ ಗಮನಕ್ಕೆ ತಂದಿದ್ದರು.
ಚಾಮುಲ್ ಆಡಳಿತ ಚುಕ್ಕಾಣಿ ಯನ್ನು ಹಿಡಿಯಲೇಬೇಕು ಎಂದು ಪಣತೊಟ್ಟಿದ್ದ ವರಿಷ್ಠರು, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು, ಪಕ್ಷದ ಜಿಲ್ಲಾ ಉಸ್ತುವಾರಿ ಎಂ. ರಾಜೇಂದ್ರ, ಮುಖಂಡ ಸಿದ್ದರಾಜು ಹಾಗೂ ಚಾಮುಲ್‌ನ ಮೂವರು ನಿರ್ದೇಶಕ ರೊಂದಿಗೆ ಬೆಂಗಳೂರಿನಲ್ಲಿ ಚರ್ಚಿಸಿ, ರಾಜ್ಯದ ಮುಖಂಡರೊಬ್ಬರು ಜಿಲ್ಲೆಗೆ ಬಂದು ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ರಾಜ್ಯ ಪ್ರಧಾನ ಕಾರ್ಯ ದರ್ಶಿ ಎನ್.ರವಿಕುಮಾರ್, ಜಿಲ್ಲಾ ಉಸ್ತುವಾರಿ ಹಾಗೂ ಉಪಾಧ್ಯಕ್ಷ ಎಂ.ರಾಜೇಂದ್ರ ಹಾಗೂ ಮುಖಂಡ ಸಿದ್ದರಾಜು ಅವರು ಈ ಚುನಾವಣೆಗಾಗಿಯೇ ಜಿಲ್ಲೆಗೆ ಬಂದಿದ್ದರು.
ಪ್ರಬಲ ಆಕಾಂಕ್ಷಿಯಾಗಿದ್ದ ಎಚ್.ಎಸ್. ಬಸವರಾಜು ಅವರೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಎಂ.ಪಿ.ಸುನೀಲ್ ಅವರು ತಮಗೇ ಟಿಕೆಟ್ ಕೊಡಬೇಕು ಎಂದು ಕೊನೆ ಕ್ಷಣದವರೆಗೂ ಪಟ್ಟು ಹಿಡಿದಿದ್ದರು ಎಂದು ಮೂಲಗಳು ತಿಳಿಸಿವೆ.ಆದರೆ, ಬುಧವಾರ ಬೆಳಿಗ್ಗೆ ಕೊನೆ ಕ್ಷಣದಲ್ಲಿ ವೈ.ಸಿ.ನಾಗೇಂದ್ರ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು.
ನಾಗೇಂದ್ರ ಅವರ ಹೆಸರು ಘೋಷಿಸುತ್ತಿದ್ದಂತೆಯೇ, ಎಚ್.ಎಸ್.ಬಸವರಾಜು ಅವರ ಬೆಂಬಲಿಗರು ಹಾಗೂ ಚಾಮರಾಜನಗರ ತಾಲ್ಲೂಕಿನ ಮುಖಂಡರು ಆಕ್ಷೇಪವನ್ನೂ ವ್ಯಕ್ತಪಡಿಸಿ ದರು. ಆದರೆ, ನಂತರ ವರಿಷ್ಠರು ಬಸವರಾಜು ಹಾಗೂ ಸುನೀಲ್ ಇಬ್ಬರ ಮನ ಒಲಿಸುವಲ್ಲಿ ಯಶಸ್ವಿಯಾದರು.
ನಾಮಪತ್ರ ಸಲ್ಲಿಸುವ ವೇಳೆ ವೈ.ಸಿ.ನಾಗೇಂದ್ರ ಅವರ ಹೆಸರನ್ನು ಬಸವ ರಾಜು ಅವರು ಸೂಚಿಸಿದರೆ, ಎಂ.ಪಿ. ಸುನೀಲ್ ಅವರು ಅನುಮೋದಿಸಿದ್ದರು.
ಅಂತಿಮವಾಗಿ ನಾಗೇಂದ್ರ ಅವರು ಬಹುಮತಕ್ಕೆ ಬೇಕಿದ್ದ ಏಳು ಮತಗಳನ್ನು ಪಡೆದು ಜಯಶೀಲರಾದರು.
‘ನುಡಿದಂತೆ ನಡೆಯಿರಿ’
ಫಲಿತಾಂಶ ಹೊರಬಿದ್ದ ನಂತರ ರವಿಕುಮಾರ್ ಅವರು ಬಸವರಾಜು ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು. ‘ಈ ಗೆಲುವಿಗೆ ನೀವೇ ಕಾರಣ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜು, ‘ನಾನು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ನೀವೂ ನಡೆದುಕೊಳ್ಳಬೇಕು’ ಎಂದರು. ಸ್ಥಳದಲ್ಲೇ ಇದ್ದ ಮುಖಂಡರೊಬ್ಬರು ‘ಆ ರೀತಿ ಮಾತನಾಡಬಾರದು’ ಎಂದು ಹೇಳಿದ್ದಕ್ಕೆ ಕೋಪಗೊಂಡ ಬಸವರಾಜು, ‘ಸುಮ್ಮನೆ ಇರಿ. ನಾನು ಏನೂ ನಿರೀಕ್ಷೆ ಇಟ್ಟುಕೊಂಡು ಬಂದಿಲ್ಲ. ಸ್ವಲ್ಪ ವ್ಯತ್ಯಾಸವಾಗಿದ್ದರೂ ಫಲಿತಾಂಶ ಬದಲಾಗುತ್ತಿತ್ತು. ಭರವಸೆ ನೀಡಿದಂತೆ ನಡೆದುಕೊಳ್ಳಿ’ ಎಂದು ಹೇಳಿದರು.
ಪುಟ್ಟರಂಗಶೆಟ್ಟಿಗೆ ಹಿನ್ನಡೆ
ಕಾಂಗ್ರೆಸ್ ಬೆಂಬಲಿತ ನಾಲ್ಕು ನಿರ್ದೇಶಕರ ಪೈಕಿ ಶೀಲಾ ಪುಟ್ಟರಂಗಶೆಟ್ಟಿ ಅವರು ಮಾತ್ರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಉಳಿದವರು ಯಾರೂ ಪ್ರಯತ್ನಿಸಿರಲಿಲ್ಲ.
ನಿರ್ದೇಶಕರ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದಿಂದ ಮಗಳನ್ನು ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ಮಗಳು ಆಯ್ಕೆಯಾಗುವಂತೆ ಮಾಡಲು ಇನ್ನಿಲ್ಲದಂತೆ ಕಸರತ್ತು ನಡೆಸಿದರೂ, ಯಶಸ್ಸು ಸಿಕ್ಕಿಲ್ಲ. ಚಾಮುಲ್ ಅಧಿಕಾರ ಕೈತಪ್ಪಿ ಪಕ್ಷದ ಜೊತೆಗೆ ವೈಯಕ್ತಿಕವಾಗಿ ಅವರಿಗೂ ಹಿನ್ನಡೆಯಾಗಿದೆ.
ಗೆಲ್ಲುವ ವಿಶ್ವಾಸವನ್ನು ಹೊಂದಿದ್ದ ಪುಟ್ಟರಂಗಶೆಟ್ಟಿ ಅವರು ಬೆಳಿಗ್ಗೆಯಿಂದಲೇ ಚುನಾವಣೆ ನಡೆಯಲಿದ್ದ ಕುದೇರಿನ ಚಾಮುಲ್ ಕಚೇರಿಗೆ ಬಂದಿದ್ದರು. ಕೊನೆ ಕ್ಷಣದವರೆಗೂ ಗೆಲುವಿಗೆ ಅವರು ಪ್ರಯತ್ನ ಮಾಡಿದರು. ಮಗಳಿಗೆ ಆರು ಮತಗಳು ಬಿದ್ದು, ಸೋತಿರುವುದು ತಿಳಿಯುತ್ತಲೇ ಶಾಸಕರು ಅಲ್ಲಿಂದ ಹೊರಟರು. ಅವರ ಹಿಂದೆಯೇ ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಹಾಗೂ ಪದಾಧಿಕಾರಿಗಳು ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.