ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ದಸರಾ ಆಚರಣೆಗೂ ಮೊದಲು ಆರಂಭವಾಗುವ ಚಾಮುಂಡೇಶ್ವರಿ ದೊಡ್ಡ ಹಬ್ಬ ಬುಧವಾರ ಸಾವಿರಾರು ಭಕ್ತರ ಸಡಗರ ಸಂಭ್ರಮಗಳ ನಡುವೆ ಜರುಗಿತು.
ಮುಂಜಾನೆ ಆರಂಭವಾದ ಗ್ರಾಮ ದೇವತಾ ಪೂಜಾ ಕೈಂಕರ್ಯಗಳು ಸಂಜೆ ಬಾಳೆ ಕತ್ತರಿಸುವ ಮೂಲಕ ಸಮಾಪ್ತಿಯಾಯಿತು. ಸಾವಿರಾರು ಭಕ್ತರು ಎಳನೀರು, ವೀಳ್ಯದೆಲೆ ಶಿರದಲ್ಲಿ ಹೊತ್ತು ದೇವರ ಹರಕೆ ತೀರಿಸಿದರು. ನಂತರ ಅಷ್ಟ ದಿಕ್ಕುಗಳಲ್ಲೂ ನೆಲೆ ನಿಂತ ಸಪ್ತ ಮಾತೃಕೆಯರನ್ನು ಆರಾಧಿಸಿದರು.
ನಸುಕಿನಲ್ಲಿ ಚಾಮುಂಡೇಶ್ವರಿ ಆಮ್ಮನವರಿಗೆ ಬಗೆಬಗೆಯ ಹೂಹಾರಗಳ ಸಿಂಗಾರ ರಂಗೋಲಿ ಅಲಂಕಾರ ಮಾಡಿ, ತಳಿರು ತೋರಣಗಳಿಂದ ಇಳಿಬಿಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಆರತಿ ಬೆಳಗಿ, ಧೂಪ ಹಾಕಿ, ಹಣ್ಣುಕಾಯಿ ಸೇವೆ ಪೂರೈಸಿದರು. ಸಂಜೆ ತನಕ ಮಹಿಳೆಯರು ಮತ್ತು ಮಕ್ಕಳು ದೇವರ ದರ್ಶನ ಪಡೆದರು. ತೀರ್ಥ ಪ್ರಸಾದ ಸ್ವೀಕರಿಸಿದರು.
ಅಂಬಳೆ, ಚಂಗಚಹಳ್ಳಿ, ಹೆಗ್ಗಡೆಹುಂಡಿ ಹಾಗೂ ಕಂದಹಳ್ಳಿ ಗ್ರಾಮಗಳ ನಾಲ್ಕೂ ದಿಕ್ಕಿನಲ್ಲೂ ನೆಲೆ ನಿಂತ ದೇವತೆಗಳು ರಕ್ತ ಬಿಜಾಸುರನನ್ನು ಸಂಹರಿಸುತ್ತಾರೆ. ಚಾಮುಂಡಾಂಬೆ ಈ ಸಂಭ್ರಮದಲ್ಲಿ ಭಾಗವಹಿಸುತ್ತಾಳೆ. ಇದಕ್ಕೂ ಮೊದಲು ಗ್ರಾಮಸ್ಥರು ಸುವರ್ಣಾವತಿ ನದಿಯಲ್ಲಿ ಹೊಸ ನೀರು ತಂದು, ಖೇಲು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಂಗದ ಮಾರಮ್ಮ, ದೇವಳಮ್ಮ, ಗದ್ದೆಮಾರಮ್ಮರನ್ನು ಹಬ್ಬಕ್ಕೆ ಆಹ್ವಾನಿಸುತ್ತಾರೆ.
ಚಾಮುಂಡೇಶ್ವರಿ ಸಂಜೆ ಆಗಮಿಸುವಾಗ ಊರೊಟ್ಟಿನ ಜನರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬಿದಿರು, ಬಾಳೆ ನೆಟ್ಟು, ಹೆಬ್ಬರೆ ಬಾರಿಸುತ್ತ ಮಹಿಷಾಸುರನ ಸಂಹಾರಕ್ಕೆ ವೇದಿಕೆ ಸಿದ್ಧಪಡಿಸುತ್ತಾರೆ ಎಂದು ಗ್ರಾಮಸ್ಥರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.