ADVERTISEMENT

ಯಳಂದೂರು: ಚಾಮುಂಡೇಶ್ವರಿ ರಥೋತ್ಸವಕ್ಕೆ ಜನಸಾಗರ

ಕಾಲುವೆಯಲ್ಲಿ ತುಂಬಿ ಹರಿದ ನೀರು, ಹದಗೆಟ್ಟ ರಸ್ತೆಯ ನಡುವೆ ಭಕ್ತರಿಂದ ದರ್ಶನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:36 IST
Last Updated 17 ಅಕ್ಟೋಬರ್ 2024, 15:36 IST
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಕ್ತರ ಜಯಘೋಷಗಳ ನಡುವೆ ಚಾಮುಂಡೇಶ್ವರಿ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಕ್ತರ ಜಯಘೋಷಗಳ ನಡುವೆ ಚಾಮುಂಡೇಶ್ವರಿ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು   

ಯಳಂದೂರು: ತಾಲ್ಲೂಕಿನ ಐತಿಹಾಸಿಕ ಚಾಮುಂಡೇಶ್ವರಿ ರಥೋತ್ಸವ ಶುಕ್ರವಾರ ಅಪಾರ ಭಕ್ತರ ಸಂತಸ ಸಡಗರದ ನಡುವೆ ಜರುಗಿತು.

ಮುಂಜಾನೆ ಅಶ್ವಯುಜ ಶುದ್ಧ ಪೌರ್ಣಿಮೆ ರೇವತಿ ನಕ್ಷತ್ರದಲ್ಲಿ ದೇವಿಗೆ ವಿಶೇಷ ಮಂಗಳಾರತಿ ನೆರವೇರಿಸಲಾಯಿತು. ನಂತರ ಅಷ್ಟ ಮಾತೃಕೆಯರಿಗೆ ಪೂಜಾ ಕೈಂಕರ್ಯ ಪೂರೈಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮಹಿಳೆಯರು ಹೂ– ಹಣ್ಣು ಕಾಯಿ ಸಮರ್ಪಿಸಿ ಶ್ರದ್ಧಾ ಭಕ್ತಿಯಿಂದ ರಥ ಎಳೆದು ಸಂಭ್ರಮಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಮಧ್ಯಾಹ್ನ ಗುಡಿಯ ಮುಂದೆ ಧೂಪ– ದೀಪ ಬೆಳಗಿ ಹರಕೆ ತೀರಿಸಿದರು. ದೇವಿಯ ಬೆಳ್ಳಿ ದಂಡಕಗಳನ್ನು ಹೊತ್ತು ಜೈ ಚಾಮುಂಡಾಂಬೆ ಜಯಘೋಷ ಮೊಳಗಿಸಿದರು. ನಂತರ ಆಲಯದ ಸುತ್ತಲ ಮಂಗಳ ಮೂರ್ತಿಗಳಿಗೆ ಅರಿಶಿನ ಕುಂಕುಮ ಗಂಧ ಅರ್ಪಿಸಿ, ಹೂ ಹಾರಗಳಿಂದ ಸಿಂಗರಿಸಿ ತುಪ್ಪದ ದೀಪ ಬೆಳಗಿದರು.

ADVERTISEMENT

ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು. ತೇರಿನ ಉತ್ಸವದಲ್ಲಿ ಪಾಲ್ಗೊಂಡವರಿಗೆ ಕಜ್ಜಾಯ, ಲಾಡು ವಿತರಿಸಲಾಯಿತು.

ಕಂದಹಳ್ಳಿ ಮಾರ್ಗದಲ್ಲಿ ಹದಗೆಟ್ಟ ರಸ್ತೆ: ದೇವಿಯ ಉತ್ಸವಕ್ಕೆ ತೆರಳಿದ ಭಕ್ತರು ಕೆಸರಿನ ರಸ್ತೆಯಲ್ಲಿ ಸಾಗಿ ಗುಡಿ ಮುಟ್ಟಿದರು. ಹೊಲ, ಗದ್ದೆ, ಕಾಲುವೆಗಳಿಂದ ಹರಿಯುವ ನೀರು ಧುಮ್ಮಿಕ್ಕಿ ಹರಿದ ಪರಿಣಾಮ; ಮಹಿಳೆಯರು ಮತ್ತು ಮಕ್ಕಳು ಆಳ ನೀರಿನ ನಡುವೆ ಸಾಗಬೇಕಾಯಿತು. ಇದರಿಂದ ವಾಹನಗಳ ಸವಾರರು ತ್ರಾಸ ಅನುಭವಿಸಿದರು.

ಚಾಮುಂಡೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಅಂಬಳೆ ರಸ್ತೆ ಸುಸ್ಥಿಯಲ್ಲಿದೆ. ಆದರೆ, ಕಂದಹಳ್ಳಿ ಮಾರ್ಗದ ರಸ್ತೆ ಕಲ್ಲು ಮುಳ್ಳುಗಳಿಂದ ಆವೃತವಾಗಿದೆ. ಮಳೆಗಾಲದಲ್ಲಿ ನೀರು ತುಂಬಿ ಹರಿದು ಭಕ್ತರ ಸಂಚಾರಕ್ಕೆ ಕಂಟಕವಾಗಿದೆ. ಸಂಬಂಧಪಟಟ್ವರು ರಸ್ತೆ ದುರಸ್ತಿ ಮಾಡಬೇಕು ಎಂದು ಹೊನ್ನೂರು ನಾಗಮ್ಮ ಒತ್ತಾಯಿಸಿದರು.

ಮಹಿಳೆಯರು ಮತ್ತು ಮಕ್ಕಳು ಹರಿಯುವ ನೀರ ನಡುವೆ ಗ್ರಾಮಗಳತ್ತ ತೆರಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.