ADVERTISEMENT

ಚಾಮರಾಜನಗರ | ಮಗು ಅಪಹರಣ: ಮಂಡ್ಯದ ಮಹಿಳೆ ಸೆರೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:06 IST
Last Updated 19 ನವೆಂಬರ್ 2024, 16:06 IST
   

ಚಾಮರಾಜನಗರ: ರಾಜ್ಯ, ಹೊರ ರಾಜ್ಯಗಳಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ತಿಳಿಸಿದರು.

ಮಂಗಳವಾರ ಕಚೇರಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ, ತಮಿಳುನಾಡಿನ ತೆಂಕಾಶಿ ಜಿಲ್ಲೆಯ ಶಂಕರ್‌ ಕೋಯಿಲ್‌ನ ಕೊಡಂಗುಸ್ವಾಮಿ (58), ಕೇರಳದ ಪಾಲಕ್ಕಡ್ ಜಿಲ್ಲೆಯ ಜೇಸುದಾಸ್‌ (39), ಕೊಯಮತ್ತೂರಿನ ಪೊಳ್ಳಾಚಿಯ ಇಂದಿರರಾಜ್‌ (35), ಹಾಸನ ತಾಲ್ಲೂಕಿನ ಪ್ರಸ್ತತ ಕೇರಳದಲ್ಲಿ ವಾಸವಿರುವ ಅಜಿತ್ (23) ಬಂಧಿತರು. ಆರೋಪಿಗಳಿಂದ 41.69 ಲಕ್ಷ ಮೌಲ್ಯದ 504 ಗ್ರಾಂ ಚಿನ್ನಾಭರಣ, 3 ಕೆ.ಜಿ ಬೆಳ್ಳಿ, ₹ 4,400 ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣದ ವಿವರ: ಅ.18ರಂದು ಹನೂರು ಪಟ್ಟಣದ ಆಶ್ರಯ ಬಡಾವಣೆ ನಿವಾಸಿ ಶಬೀರ್ ಅಹಮದ್ ಮನೆಯಲ್ಲಿ ಇಲ್ಲದಿರುವಾಗ ₹ 11 ಲಕ್ಷ ಮೌಲ್ಯದ ಚಿನ್ನಾಭರಣ, ₹ 20,000 ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಆರೋಪಿಗಳ ಪತ್ತೆಗಾಗಿ ಹನೂರು ಸಿಪಿಐ ಎಂ.ಶಿವಮಾದಯ್ಯ ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ್ ಪ್ರಸಾದ್ ಅವರನ್ನೊಳಗೊಂಡ 2 ತಂಡ ರಚಿಸಲಾಗಿತ್ತು. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಗೆ ತೆರಳಿದ ತಂಡ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಮಹದೇಶ್ವರ ಬೆಟ್ಟದಲ್ಲಿ ಉಳಿದುಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಎಸ್‌ಪಿ ತಿಳಿಸಿದರು.

13 ಪ್ರಕರಣಗಳಲ್ಲಿ ಭಾಗಿ: ಆರೋಪಿಗಳು ಹನೂರು, ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಳ ಪಟ್ಟಣ, ಚಾಮರಾಜನಗರ, ಗುಂಡ್ಲುಪೇಟೆ, ಬೇಗೂರು ಸೇರಿದಂತೆ ಜಿಲ್ಲೆಯಲ್ಲಿ 13 ಕಳವು ಪ್ರಕರಣಗಳು ಹಾಗೂ ಕೋಲಾರದಲ್ಲಿ ನಡೆದ ಬೈಕ್‌ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಬಯಲಿಗೆ ಬಂದಿದೆ. ಕೇರಳ, ತಮಿಳುನಾಡಿನಲ್ಲೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.