ADVERTISEMENT

ಗುಂಡ್ಲುಪೇಟೆ | ಬಾಲ್ಯ ವಿವಾಹ ಮಕ್ಕಳ ಭವಿಷ್ಯಕ್ಕೆ ಕಂಟಕ

ತರಬೇತಿ ಶಿಬಿರದಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:24 IST
Last Updated 19 ಅಕ್ಟೋಬರ್ 2024, 13:24 IST
ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಕುರಿತು ಒಂದು ದಿನದ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಷ ಭಾಗವಹಿಸಿದ್ದರು
ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಕುರಿತು ಒಂದು ದಿನದ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಷ ಭಾಗವಹಿಸಿದ್ದರು   

ಗುಂಡ್ಲುಪೇಟೆ: ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದ್ದು, ತಡೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ತಹಶೀಲ್ದಾರ್ ಟಿ.ರಮೇಶ್ ಬಾಬು ಮನವಿ ಮಾಡಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಕುರಿತು ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದಕ್ಕಾಗಿಯೇ ಭಾರತ ಸರಕಾರವು 2012 ರಲ್ಲಿ ಪೋಕ್ಸೊ ಕಾಯ್ದೆ ಜಾರಿಗೆ ತಂದಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಇದೆ. ಮಕ್ಕಳು ಇಂತಹ ಕಾಯ್ದೆ ಬಗ್ಗೆ ಅರಿತು ತಮ್ಮ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದರು.

ADVERTISEMENT

ಬಾಲ್ಯವಿವಾಹವು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿದೆ. ಎಳೆಯ ಪ್ರಾಯದಲ್ಲಿಯೇ ಮಕ್ಕಳನ್ನು ಮದುವೆಗೆ ಒಪ್ಪಿಸುವುದು ಕೂಡಾ ಶಿಕ್ಷಾರ್ಹ ಅಪರಾಧ. ಇಂತಹ ಘಟನೆ ನಡೆಯುತ್ತಿದೆ ಎಂದು ಗೊತ್ತಾದ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಇಂತಹ ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಕೈ ಜೋಡಿಸಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಷ ಮಾತನಾಡಿ, ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಜವಾಬ್ದಾರಿಯಾಗಿದೆ. ತಮ್ಮ ಗ್ರಾಮಗಳಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಕದ್ದು ಮುಚ್ಚಿ ಬಾಲ್ಯ ವಿವಾಹ ನಡೆಯುತ್ತಿದ್ದರೆ ಉಚಿತ ದೂ.ಸಂ-1098 ಕರೆ ಮಾಡಿ ಮಾಹಿತಿ ತಿಳಿಸಬೇಕು. ಕರೆ ಮಾಡಿದವರ ಹೆಸರು ವಿಳಾಸ ಗೌಪ್ಯವಾಗಿರುತ್ತದೆ. ಇದರಿಂದ ಬಾಲ್ಯ ವಿವಾಹವನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ. ರಾಘವೇಂದ್ರ ಭಟ್, ಆರ್‌ಎಲ್‍ಎಚ್‍ಪಿ ಸಂಸ್ಥೆ ಯೋಜನಾ ವ್ಯವಸ್ಥಾಪಕಿ ಪ್ರತಿಮಾ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲ್ಲೂಕಿನ ಎಲ್ಲಾ ಆಶಾ ಕಾರ್ಯಕರ್ತರು ಮತ್ತು ಗುಂಡ್ಲುಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.