ADVERTISEMENT

ಚಾಮರಾಜನಗರ: ಮಕ್ಕಳ ವಾಹನ ಚಾಲನೆ, ಪೋಷಕರಿಗೆ ದಂಡ !

ಅಪ್ರಾಪ್ತರು ಅಪಘಾತ ಮಾಡಿದರೆ ವಾಹನ ಮಾಲೀಕರ ಮೇಲೆ ಪ್ರಕರಣ; ದಂಡ, ಜೈಲು ಶಿಕ್ಷೆ

ಬಾಲಚಂದ್ರ ಎಚ್.
Published 5 ಅಕ್ಟೋಬರ್ 2024, 6:52 IST
Last Updated 5 ಅಕ್ಟೋಬರ್ 2024, 6:52 IST
   

ಚಾಮರಾಜನಗರ: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬೈಕ್ ಹಾಗೂ ಕಾರು ಚಲಾಯಿಸಲು ಕೊಡುವ ಪೋಷಕರು ದುಬಾರಿ ದಂಡ ತೆರುವುದರ ಜೊತೆಗೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು ಎಚ್ಚರ.

ಸ್ನೇಹಿತರ ಮನೆಗೆ ಹೋಗಲು, ಶಾಲಾ ಕಾಲೇಜುಗಳಿಗೆ ತೆರಳಲು ಅಥವಾ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿ ತರಲು ಮಕ್ಕಳಿಗೆ ವಾಹನ ಕೊಟ್ಟು ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಯನ್ನು ಬೈಕ್‌ ಮಾಲೀಕರೇ ಹೊರಬೇಕು. ಅಂದರೆ, ಮಕ್ಕಳಿಗೆ ವಾಹನ ಕೊಟ್ಟ ತಪ್ಪಿಗೆ ಪೋಷಕರು ಶಿಕ್ಷೆ ಅನುಭವಿಸಬೇಕು.

ಅಪ್ರಾಪ್ತರು ಅಪಘಾತ ಮಾಡಿದರೆ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಾಗುತ್ತದೆ. ಅಪಘಾತದಲ್ಲಿ ಜೀವಹಾನಿ ಸಂಭವಿಸಿದರೆ ಜೈಲುಶಿಕ್ಷೆ ಅನುಭವಿಸುವುದರ ಜತೆಗೆ ದೊಡ್ಡ ಮೊತ್ತದ ಪರಿಹಾರವನ್ನು ಮೃತರ ಕುಟುಂಬಕ್ಕೆ ಪಾವತಿಸಬೇಕಾಗಿ ಬರುತ್ತದೆ.

ADVERTISEMENT

ಅಪಘಾತ ಮಾಡದಿದ್ದರೂ ಚಾಲನೆಯ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಮೋಟಾರು ವಾಹನ ಕಾಯ್ದೆಯ ಪ್ರಕಾರ ಗರಿಷ್ಠ ₹ 25,000ದವರೆಗೂ ಪೋಷಕರು ದಂಡ ಪಾವತಿಸಬೇಕು ಎನ್ನುತ್ತಾರೆ ಪೊಲೀಸರು.

ಅಪ್ರಾಪ್ತರಿಂದ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದೆ. ಮಕ್ಕಳು ವಾಹನ ಚಲಾಯಿಸುವುದು ಕಂಡುಬಂದರೆ ಪೊಲೀಸರು ಹಿಡಿದು ದಂಡ ವಿಧಿಸುತ್ತಿದ್ದಾರೆ.

2024ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೂ ಜಿಲ್ಲೆಯಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದ ಸಂಬಂಧ 23 ಪ್ರಕರಣಗಳನ್ನು ದಾಖಲಿಸಲಾಗಿದ್ದು ಬರೋಬ್ಬರಿ ₹ 3,29,100 ದಂಡ ವಿಧಿಲಾಗಿದೆ. ದಂಡ ಪಾವತಿಸಲು ವಿಫಲರಾದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ ಸಂಚಾರ ಠಾಣೆಯಲ್ಲಿ 2, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ 1, ಹನೂರು ಠಾಣೆಯಲ್ಲಿ 6, ಮಾಂಬಳ್ಳಿ ಠಾಣೆಯಲ್ಲಿ 1, ಚಾಮರಾಜನಗರ ನಗರ ಠಾಣೆಯಲ್ಲಿ 1, ಸಂತೇಮರಹಳ್ಳಿ ಹಾಗೂ ಬೇಗೂರು ಠಾಣೆಯಲ್ಲಿ ತಲಾ ಒಂದು, ಗುಂಡ್ಲುಪೇಟೆ ಠಾಣೆಯಲ್ಲಿ 5 ಹಾಗೂ ಯಳಂದೂರು ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಸ್ವರೂಪ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯ ಆಧಾರದಲ್ಲಿ ದಂಡ ವಿಧಿಸಲಾಗುತ್ತಿದೆ.

18 ವರ್ಷ ತುಂಬದ ಮಕ್ಕಳಿಗೆ ಪೋಷಕರು ಎಂತಹ ಸಂದರ್ಭದಲ್ಲೂ ವಾಹನಗಳನ್ನು ಚಲಾಯಿಸಲು ನೀಡಬಾರದು. ಇದರಿಂದ ಮಕ್ಕಳ ಜೀವಕ್ಕೂ ಅಪಾಯ, ಸಾರ್ವಜನಿಕರ ಜೀವಕ್ಕೂ ಕಂಟಕವಾಗುವ ಸಾಧ್ಯತೆಗಳು ಹೆಚ್ಚು. ಮಕ್ಕಳು ವಯಸ್ಕರಾದ ಬಳಿಕ ಚಾಲನಾ ಪರವಾನಗಿ ಪಡೆದ ನಂತರವೇ ವಾಹನ ಓಡಿಸಬೇಕು. ಅಪ್ರಾಪ್ತರು ಅಪಘಾತ ಮಾಡಿದರೆ  ವಾಹನ ಮಾಲೀಕರ ವಿರುದ್ದ ಪ್ರಕರಣ ದಾಖಲಾಗಲಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ.

‘ವೀಲಿಂಗ್ ವಿರುದ್ಧ ಕ್ರಮ’

ಜಿಲ್ಲೆಯ ಪ್ರಮುಖ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡುವವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ವೀಲಿಂಗ್ ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತರುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಸತ್ತಿ ಹಾಗೂ ಕೊಳ್ಳೇಗಾಲ ರಸ್ತೆಯಲ್ಲಿ ಹೆಚ್ಚಾಗಿ ವೀಲಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು ತೀವ್ರ ನಿಗಾ ಇರಿಸಲಾಗಿದೆ. 2024 ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಚಾಮರಾಜನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎರಡು ಹಾಗೂ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು 10850 ದಂಡ ವಿಧಿಸಲಾಗಿದೆ ಎಂದು ಎಸ್‌ಪಿ ಬಿ.ಟಿ.ಕವಿತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.