ADVERTISEMENT

ಕೊಳ್ಳೇಗಾಲ: ಕ್ರಿಸ್‌ಮಸ್‌ ಸಿದ್ಧತೆ ಜೋರು

ಅವಿನ್ ಪ್ರಕಾಶ್
Published 21 ಡಿಸೆಂಬರ್ 2023, 7:57 IST
Last Updated 21 ಡಿಸೆಂಬರ್ 2023, 7:57 IST
ಕೊಳ್ಳೇಗಾಲದ ಮಳಿಗೆಯೊಂದರಲ್ಲಿ ನಕ್ಷತ್ರ ಗೂಡು ದೀಪಗಳನ್ನು ಮಾರಾಟಕ್ಕೆ ಇಟ್ಟಿರುವುದು
ಕೊಳ್ಳೇಗಾಲದ ಮಳಿಗೆಯೊಂದರಲ್ಲಿ ನಕ್ಷತ್ರ ಗೂಡು ದೀಪಗಳನ್ನು ಮಾರಾಟಕ್ಕೆ ಇಟ್ಟಿರುವುದು   

ಕೊಳ್ಳೇಗಾಲ: ಕ್ರಿಶ್ಚಿಯನ್ನರ ಪ್ರಮುಖ ಹಬ್ಬ ಕ್ರಿಸ್‌ಮಸ್‌. ಜಿಲ್ಲೆಯಾದ್ಯಂತ ಸಂಭ್ರಮ ಸಡಗರದ ಕ್ರಿಸ್‍ಮಸ್ ಹಬ್ಬದ ಆಚರಣೆಗೆ ತಯಾರಾಗುತ್ತಿದ್ದಾರೆ. 

ಡಿಸೆಂಬರ್‌ ತಿಂಗಳು ಬಂತೆಂದರೆ ಕ್ರಿಶ್ಚಿಯನ್ನರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಎರಡು ವಾರಗಳಿಂದಲೇ ನಿಧಾನವಾಗಿ ಸಿದ್ಧತೆ ಆರಂಭವಾಗುತ್ತದೆ.

ಏಸು ಕ್ರಿಸ್ತನ ಜನ್ಮ ದಿನಾಚರಣೆಗೆ (ಡಿ.25) ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಕೇಕ್‌ ತಯಾರಿ, ಸ್ನೇಹಿತರಿಗೆ ವಿತರಣೆಯಲ್ಲಿ ತೊಡಗಿದ್ದಾರೆ. ಹಬ್ಬದ ನಿಮಿತ್ತ ಮನೆ, ಮನೆಗಳಲ್ಲಿ ಕ್ರಿಸ್‌ ಮಸ್‌ ಟ್ರೀ ಹಾಕಿ ವಿದ್ಯುದೀಪಗಳಿಂದ ಸಿಂಗರಿಸಲಾಗಿದೆ. ಮನೆಯ ಒಳಗೆ, ಹೊರಗೆ ದೀಪಗಳ ಅಲಂಕಾರ, ಮನೆಯ ಮುಂದೆ ಗೋದಲಿಗಳನ್ನು  ನಿರ್ಮಾಣ ಮಾಡುತ್ತಿದ್ದಾರೆ.

ADVERTISEMENT

ಚರ್ಚ್‌ಗಳು ಹಾಗೂ ಮನೆಗಳಿಗೆ  ಸುಣ್ಣ ಬಣ್ಣ ಕಂಡು, ವಿಶೇಷ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ನಕ್ಷತ್ರ ದೀಪಗಳು ಮನೆಗಳಲ್ಲಿ ಬೆಳಗುತ್ತಿವೆ.

ಕ್ಯಾರೋಲ್ ಗೀತೆಗಳು: ಪ್ರತಿ ವರ್ಷ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕ್ಯಾರೋಲ್‌ (ಭಜನೆ ಅಥವಾ ಸೌಹಾರ್ದತೆಯ ಸಂದೇಶ ಸಾರುವ  ಕ್ರಿಸ್‌ಮಸ್ ಹಾಡುಗಳು) ಗೀತೆಗಳನ್ನು ಹಾಡುವ ಸಂಪ್ರದಾಯ ಸಮುದಾಯದಲ್ಲಿದೆ.

ಹಬ್ಬಕ್ಕಿಂತ ಮೊದಲೇ ಆರಂಭವಾಗುವ ಈ ಸಂಪ್ರದಾಯದಲ್ಲಿ ಯುವಕ, ಯುವತಿಯರ ಗುಂಪುಗಳು ರಾತ್ರಿ ತಮ್ಮ ಪ್ರದೇಶದ ಮನೆ ಮನೆಗಳಿಗೆ ತೆರಳಿ ಕ್ಯಾರೋಲ್‍ಗಳನ್ನು ಹಾಡುತ್ತಾರೆ. ನಗರದಲ್ಲಿ ಎಲ್ಲ ಚರ್ಚ್‌ನವರು ಮನೆ ಮನೆಗೆ ತೆರಳಿ ಗೀತೆಗಳನ್ನು ಹಾಡಲು ಆರಂಭಿಸಿದ್ದಾರೆ. 

‘ಏಸು ಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದಾನೆ, ಈ ಮನೆಯಲ್ಲಿ ಜೀವಿಸುತ್ತಾನೆ’ ಎಂದು ಸಾರುತ್ತಾ ಜನರಲ್ಲಿ ಪವಿತ್ರ ಭಾವನೆ ಮೂಡಿಸುವುದು ಈ ಭಜನೆಯ ಉದ್ದೇಶ.

‘ಈ ಬಾರಿ ಬರ ಹಾಗೂ ಮಳೆಯ ಕೊರತೆಯ ಕಾರಣ ವಿಶೇಷವಾಗಿ ಗೀತೆಗಳನ್ನು ರಚಿಸಿ ದೇವರಲ್ಲಿ ಪ್ರಾರ್ಥಿಸಲು ಯುವಕ ಯುವತಿಯರು ಮುಂದಾಗಿದ್ದಾರೆ. ಹಾರ್ಮೋನಿಯಂ, ಕಾಂಗೊ, ಝಾಲರಿ, ಕೀಬೋರ್ಡ್‌ಗಳು ಸೇರಿದಂತೆ ವಿವಿಧ ಸಂಗೀತ ಸಾಧನಗಳ ಸಹಾಯದಿಂದ ಸುಶ್ರಾವ್ಯವಾಗಿ ಹಾಡುವ ಗೀತೆಗಳು ಗಮನ ಸೆಳೆಯುತ್ತವೆ. ಕನ್ನಡ, ತೆಲುಗು, ತಮಿಳು ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಗೀತೆಗಳನ್ನು ಹಾಡಿ ಕುಣಿಯುತ್ತಾರೆ’ ಎಂದು ನಗರದ ಜಾನ್ ಅವರು ವಿವರಿಸಿದರು.  

ಭರ್ಜರಿ ವ್ಯಾಪಾರ: ಕೋವಿಡ್‌ ಸಮಯದಲ್ಲಿ ಹಬ್ಬದ ಸಂಭ್ರಮ ಕಡಿಮೆಯಾಗಿತ್ತು. ಕಳೆದ ವರ್ಷದಿಂದೀಚೆಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಅದ್ದೂರಿ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. 

ಜಿಲ್ಲೆಯಾದ್ಯಂತ ಹಬ್ಬದ ಖರೀದಿ ಜೋರಾಗಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು, ಹನೂರು ಪಟ್ಟಣಗಳ ಅಂಗಡಿಗಳಲ್ಲಿ ವಿವಿಧ ಗಾತ್ರದ ಕ್ರಿಸ್‌ಮಸ್‌ ಟ್ರೀ, ಬೇರೆ ಬೇರೆ ವಿನ್ಯಾಸದ ನಕ್ಷತ್ರ ದೀಪಗಳು, ಶುಭ ಸಂಕೇತದ ಗಂಟೆ, ರಿಬ್ಬನ್, ಬಣ್ಣದ ಕ್ಯಾಲೆಂಡರ್‌ಗಳು, ಅಲಂಕಾರಿಕ ದೀಪಗಳು ನಳನಳಿಸುತ್ತಿವೆ. 

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಉತ್ತಮವಾಗಿ ವ್ಯಾಪಾರ ನಡೆಯುತ್ತಿದೆ ಎಂದು ಹೇಳುತ್ತಾರೆ ಅಂಗಡಿ ಮಾಲೀಕರು. 

ಕೊಳ್ಳೇಗಾಲದ ಮನೆಯೊಂದರಲ್ಲಿ ಕ್ಯಾರೋಲ್‌ ಗೀತೆಗಳನ್ನು ಹಾಡುತ್ತಾ ಕುಣಿಯುತ್ತಿರುವ ಯುವ ಜನರು
ಈ ವರ್ಷ ಬರ ಪರಿಸ್ಥಿತಿ ಇದೆ. ಹಾಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡುವ ಮೂಲಕ ಕ್ರಿಸ್‌ಮಸ್‌ ಹಬ್ಬ ಆಚರಣೆ ಮಾಡಲಾಗುತ್ತಿದೆ
ಜೋಯೆಲ್  ನಾರಾಯಣ್ ಕಲ್ವಾರಿ ಎಜೆ ಚರ್ಚ್ ಫಾಸ್ಟರ್ 
ವೈವಿಧ್ಯಮಯ ಕೇಕ್‌ಗಳು 
ಕ್ರಿಸ್‌ಮಸ್‌ನಲ್ಲಿ ಕೇಕ್‌ಗೆ ಮಹತ್ವದ ಸ್ಥಾನವಿದೆ. ಕ್ರಿಶ್ಚಿಯನ್ನರು ಹಬ್ಬದ ಪ್ರಯುಕ್ತ ತಮ್ಮ ಸ್ನೇಹಿತರು ಕುಟುಂಬಸ್ತರಿಗೆ ಕೇಕ್‌ ಹಂಚುತ್ತಾರೆ. ಹಾಗಾಗಿ‌  ಕೇಕ್‌ಗೆ ಬೇಡಿಕೆ ಹೆಚ್ಚು. ಎಷ್ಟೇ ಬಡವರಾದರೂ ಕ್ರಿಶ್ಚಿಯನ್ನರು ಕ್ರಿಸ್‌ಮಸ್‌ ಆಚರಿಸುತ್ತಾರೆ. ಹೊಸ ಬಟ್ಟೆ ತೊಟ್ಟು ಕೇಕ್‌ ತಿಂದು ಸಂಭ್ರಮಿಸುತ್ತಾರೆ. ಆ ಕಾರಣಕ್ಕೆ ಕ್ರಿಸ್‌ಮಸ್‌ ಎಂದರೆ ಕೇಕ್‌ನ ಹಬ್ಬ.  ಬೇಕರಿಗಳಲ್ಲಿ ತರಹೇವಾರಿ ಕೇಕ್‌ಗಳ ತಯಾರಿ ಜೋರಾಗಿದೆ. ಮನೆಯಲ್ಲೇ ಕೇಕ್‌ ತಯಾರಿಸಿ ಮಾರಾಟ ಮಾಡುವವರಿಗೂ ಈಗ ಕೈತುಂಬಾ ಕೆಲಸ.  ‘ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲೂ ಕೇಕ್ ಮಿಕ್ಸಿಂಗ್ ಅದ್ಧೂರಿಯಾಗಿ ನಡೆಯುತ್ತದೆ. ದೊಡ್ಡ ಟ್ರೇಯಲ್ಲಿ ದ್ರಾಕ್ಷಿ ಬಾದಾಮಿ ಗೋಡಂಬಿ ಪಿಸ್ತಾ ಖರ್ಜೂರ ಚೆರ್ರಿ ಮತ್ತಿತರ ಒಣಹಣ್ಣುಗಳ ರಾಶಿಯ ಮೇಲೆ ವಿವಿಧ ಕೇಕ್‌ಗಳನ್ನು ತಯಾರಿಸಲಾಗುತ್ತದೆ. ಕ್ರಿಸ್‍ಮಸ್ ಕೇಕ್ ಪ್ಲಮ್‌ಕೇಕ್ ಫ್ರುಟ್‌ ಕೇಕ್ ಚಾಕೂ ಕೇಕ್ ಮಿಕ್ಸ್ ಕೇಕ್ ಸಲಾಡ್ ಕೇಕ್ ಸೇರಿದಂತೆ ಅನೇಕ ಕೇಕ್‍ಗಳನ್ನು ಹಬ್ಬಕ್ಕಾಗಿಯೇ ಸಿದ್ಧಪಡಿಸಲಾಗುತ್ತದೆ’ ಎಂದು ಕೊಳ್ಳೇಗಾಲದ ಮಾರ್ಗರೇಟ್ ವಿವರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.