ADVERTISEMENT

ಕೊಳ್ಳೇಗಾಲ| ಹೈಟೆಕ್‌ ಬಸ್‌ ನಿಲ್ದಾಣ: ಹೊರಗೆ ಥಳಕು, ಒಳಗೆ ಹುಳುಕು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 6:25 IST
Last Updated 6 ಆಗಸ್ಟ್ 2023, 6:25 IST
ಬಸ್‌ ನಿಲ್ದಾಣದ ಆವರದಲ್ಲಿ ಅಸ್ತವ್ಯಸ್ತವಾಗಿ ನಿಂತಿರುವ ದ್ವಿಚಕ್ರವಾಹನಗಳು
ಬಸ್‌ ನಿಲ್ದಾಣದ ಆವರದಲ್ಲಿ ಅಸ್ತವ್ಯಸ್ತವಾಗಿ ನಿಂತಿರುವ ದ್ವಿಚಕ್ರವಾಹನಗಳು   

ಅವಿನ್ ಪ್ರಕಾಶ್ ವಿ.

ಕೊಳ್ಳೇಗಾಲ: ಹೊರಗೆ ಥಳಕು, ಒಳಗೆ ಹುಳುಕು ಎಂಬ ಮಾತು ನಗರದ ಹೈಟೆಕ್‌ ಬಸ್‌ ನಿಲ್ದಾಣಕ್ಕೆ ಸರಿಯಾಗಿ ಹೊಂದುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತರಾತುರಿಯಲ್ಲಿ ಉದ್ಘಾಟನೆಗೊಂಡ ನಿಲ್ದಾಣ ಹೊರಗಿನಿಂದ ನೋಡಲು ಸುಂದರವಾಗಿಯೇ ಇದೆ. ಒಳಗಡೆ ಮಾತ್ರ ಅವ್ಯವಸ್ಥೆ ಮನೆ ಮಾಡಿದೆ.

ಮೂಲಸೌಕರ್ಯಗಳು, ಸ್ವಚ್ಛತೆ ಸಮರ್ಪಕವಾಗಿಲ್ಲದಿರುವುದರಿಂದ ಸಾವಿರಾರು ಜನರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಅನೈರ್ಮಲ್ಯದ ಕಾರಣಕ್ಕೆ ಜನರನ್ನು ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ಇದೆ. 

ADVERTISEMENT

₹22 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನಿಲ್ದಾಣ ನಾಲ್ಕು ತಿಂಗಳ ಹಿಂದೆ ಉದ್ಘಾಟನೆಯಾಗಿದೆ. ಆಗ ಎಲ್ಲ ಕಾಮಗಾರಿಗಳು ಮುಕ್ತಾಯವಾಗಿರಲಿಲ್ಲ. ಚುನಾವಣೆ ಹತ್ತಿರದಲ್ಲಿದ್ದ ಕಾರಣಕ್ಕೆ ಶಾಸಕರು ಮತ್ತು ಸರ್ಕಾರ ಸ್ವಲ್ಪ ಅವಸರದಲ್ಲಿಯೇ  ನಿಲ್ದಾಣವನ್ನು ಸಾರ್ವಜನಿಕರ ಬಳಕೆಗೆ ಮುಕ್ತಮಾಡಲಾಗಿತ್ತು. ಬಾಕಿ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಉದ್ಘಾಟನೆ ಸಂದರ್ಭದಲ್ಲಿ ನಿಲ್ದಾಣ ಹೇಗೆ ಇತ್ತೋ ಈಗಲೂ ಅದೇ ಸ್ಥಿತಿಯಲ್ಲಿದೆ. 

ನಿಲ್ದಾಣದಲ್ಲಿ ಹಳೆ ಶೌಚಾಲಯಗಳು ಮಾತ್ರ ಬಳಕೆಯಲ್ಲಿವೆ. ಹೊಸ ಶೌಚಾಲಯ ಇನ್ನೂ ತೆರೆದಿಲ್ಲ. ಅಂಗವಿಕಲರಿಗೆ ಶೌಚಾಲಯ ಇಲ್ಲದಿರುವುದರಿಂದ ಅಂಗವಿಕಲ ಪ್ರಯಾಣಿಕರು  ಮೂತ್ರ ವಿಸರ್ಜನೆ ಮಾಡಲು ಪರದಾಡಬೇಕಿದೆ.

ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ, ಮಾಯವಾಗಿದೆ. ಕಸದ ರಾಶಿಗಳು ಬಿದ್ದಿವೆ. ಸಂ‌ಗ್ರಹ, ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸ್ವಚ್ಛತೆ ಇಲ್ಲದಿರುವುದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಕುಡಿಯು ನೀರು ಸರಿಯಾಗಿ ಪೂರೈಕೆ ಆಗುವುದಿಲ್ಲ ಎಂದು ಕೆಎಸ್ಆರ್‌ಟಿಸಿ ಚಾಲಕರೇ ಹೇಳುತ್ತಾರೆ.

ತಿಂಗಳ ಹಿಂದೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಭೇಟಿ ನೀಡಿ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿ ಹೋಗಿದ್ದರು. ಅವರ ಸೂಚನೆ ಪಾಲನೆ ಆದಂತೆ ಕಾಣುತ್ತಿಲ್ಲ. 

ಅಡ್ಡಾದಿಡ್ಡಿ ಬಸ್ ನಿಲುಗಡೆ: ‘ಬಸ್‌ಗಳು ಫ್ಲ್ಯಾಟ್ ಫಾರ್ಮ್‌ನಲ್ಲಿ ನಿಲ್ಲದೆ ನಿಲ್ದಾಣದ ಆವರಣದಲ್ಲಿ ಅಡ್ಡಾದ್ದಿಡಿಯಾಗಿ ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರಿಗೆ ಗೊಂದಲದ ಸೃಷ್ಟಿಯಾಗುತ್ತಿದೆ. ಫ್ಲ್ಯಾಟ್ ಫಾರ್ಮ್‌ನಲ್ಲಿ ಊರುಗಳ ಹೆಸರನ್ನು ಬರೆಯಲಾಗಿದೆ. ಆದರೆ ಬಸ್‌ಗಳು ಇನ್ನೆಲ್ಲೋ ಇರುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಖಾಸಗಿ ಬಸ್‌ಗಳೂ ಸಹ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಇದನ್ನು ತಪ್ಪಿಸಬೇಕು’ ಎಂದು ಪ್ರಯಾಣಿಕ ರಾಜೇಶ್ ಹೇಳಿದರು. 

ಮದ್ಯ ವ್ಯಸನಿಗಳ ಕಾಟ: ಬಸ್ ನಿಲ್ದಾಣದಲ್ಲಿ ಮದ್ಯ ವ್ಯಸನಿಗಳ ಹಾವಳಿಯೂ ಮಿತಿಮೀರಿದೆ. ಪ್ರಯಾಣಿಕರಿಗೆ ನಿತ್ಯವೂ ತೊಂದರೆ ಕೊಡುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಬಂದು ಬಸ್ ನಿಲ್ದಾಣದ ಒಳಗೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಾರೆ. 

‘ಬಸ್ ನಿಲ್ದಾಣದ ಆವರಣದಲ್ಲಿ ಹರಟೆ ಹೊಡೆಯುತ್ತಾ ಕುಳಿತುಕೊಳ್ಳುತ್ತಾರೆ. ಇದರಿಂದ ಮಹಿಳೆಯರಿಗೆ ತುಂಬಾ ತೊಂದರೆ. ಇನ್ನು ಕೆಲವು ವ್ಯಸನಿಗಳು  ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳಲ್ಲಿ ಮಲಗುತ್ತಾರೆ. ಇದರ ಬಗ್ಗೆ ಪೊಲೀಸರು ಗಮನಹರಿಸಬೇಕು’ ಪ್ರಯಾಣಿಕರಾದ ಸರಸ್ವತಿ ‘ಪ್ರಜಾವಾಣಿ’ಗೆ ತಿಳಿಸಿದರು.  

ನಿಲ್ದಾಣದ ಒಳ ಆವರಣದಲ್ಲಿ ಕಂಡು ಬರುವ ಅನೈರ್ಮಲ್ಯ
ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಲ್ಲ. ಕೋಟ್ಯಂತರ ಹಣ ವ್ಯಯಿಸಿ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ನಿಲ್ದಾಣ ಕೊಳಕು ಕೊಳಕಾಗಿದೆ
ಶಂಕರೇಗೌಡ ಪ್ರಯಾಣಿಕ ಕನಕಪುರ
ನಿಲ್ದಾಣದ ಸ್ವಚ್ಛತೆಗೆ ಟೆಂಡರ್ ಕರೆಯಬೇಕಾಗಿದೆ. ಸ್ವಚ್ಛತೆಗೆ ನಗರಸಭೆಯವರೂ ಕೈಜೋಡಿಸಬೇಕು. ಪಾರ್ಕಿಂಗ್ ಟೆಂಡರ್ ಶೀಘ್ರ ಕರೆಯಲಾಗುವುದು
ಚಂದ್ರಶೇಖರ್ ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣ ಅಧಿಕಾರಿ

ಪಾರ್ಕಿಂಗ್‌ ಅವ್ಯವಸ್ಥೆ ಪುಂಡರ ಹಾವಳಿ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ಟೆಂಡರ್ ಆಗದ ಕಾರಣ ವಾಹನಗಳ ನಿಲುಗಡೆ ವ್ಯವಸ್ಥಿತವಾಗಿ ಆಗುತ್ತಿಲ್ಲ. ದ್ವಿಚಕ್ರವಾಹನಗಳಲ್ಲಿ ಬರುವ ಪ್ರಯಾಣಿಕರು ನಿಲ್ದಾಣದ ಆವರಣದಲ್ಲೇ ನಿಲ್ಲಿಸಿ ಬಸ್ ಏರುತ್ತಾರೆ. ಹಾಗಾಗಿ ಆವರಣದಲ್ಲಿ ದ್ವಿಚಕ್ರವಾಹನಗಳೇ ಹೆಚ್ಚಾಗಿ ಕಾಣುತ್ತವೆಯೇ ವಿನಾ ಬಸ್‌ಗಳು ಕಾಣುವುದಿಲ್ಲ. ‘ಕೆಲವು ಪುಂಡರು ಬಸ್ ನಿಲ್ದಾಣದ ಒಳಗೆ ಬೈಕ್‌ಗಳಲ್ಲಿ ಸಾಹಸ ಪ್ರದರ್ಶಿಸುತ್ತಿದ್ದಾರೆ. ಸಾವಿರಾರು ಪ್ರಯಾಣಿಕರು ಸೇರುವ ಜಾಗದಲ್ಲಿ ಬೈಕ್ ಸವಾರರ ಹಾವಳಿ ಮಿತಿ ಮೀರಿದೆ. ಇದರಿಂದ ಹೆಣ್ಣುಮಕ್ಕಳು ನಿಲ್ದಾಣಕ್ಕೆ ಬರುವುದಕ್ಕೆ ಮುಜುಗರ ಪಡುತ್ತಿದ್ದಾರೆ. ಪೊಲೀಸ್ ಇಲಾಖೆಯವರಂತೂ ಇದರ ಬಗ್ಗೆ ಗಮನವೇ ಹರಿಸಿಲ್ಲ ನಿಲ್ದಾಣದಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಆದರೆ ಒಬ್ಬ ಪೊಲೀಸ್‌ ಸಿಬ್ಬಂದಿಯೂ ಕರ್ತವ್ಯ ನಿರ್ವಹಿಸುತ್ತಿಲ್ಲ’ ಎಂದು ನಗರದ ನಿವಾಸಿ ನಾಗೇಶ್ ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.