ಚಾಮರಾಜನಗರ: ಜಿಲ್ಲಾಡಳಿತ ಭವನದ ಮುಂಭಾಗ ಮಹರ್ಷಿ ಭಗೀರಥ, ಮಹರ್ಷಿ ವಾಲ್ಮೀಕಿ ಹಾಗೂ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಾಮಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಸಂದರ್ಭ ಜಿಲ್ಲಾ ಉಪ್ಪಾರ ಯುವಕರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹರ್ಷಿಗಳಾದ ವಾಲ್ಮೀಕಿ, ಕನಕದಾಸ, ಭಗೀರಥರರು ನಾಡಿಗೆ ನೀಡಿರುವ ಕೊಡುಗೆ ಅಪಾರ ಎಂದರು.
ರಾಜ್ಯದಲ್ಲಿ ಮೊದಲ ಬಾರಿಗೆ ಭಗೀರಥರ ಪುತ್ಥಳಿ ನಿರ್ಮಾಣವಾಗುವುದು ಖುಷಿಯ ವಿಚಾರ. ಪುತ್ಥಳಿ ನಿರ್ಮಾಣ ಸಂಬಂಧ ವಾಲ್ಮೀಕಿ ಸಮುದಾಯದ ಶ್ರೀಗಳು, ಕನಕಪೀಠದ ಶ್ರೀಗಳ ಜೊತೆಗೆ ಚರ್ಚಿಸಿ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಿದರೆ ಮುಖ್ಯಮಂತ್ರಿಗಳೊಟ್ಟಿಗೆ ಮೂರು ಸಮುದಾಯಗಳ ಸ್ವಾಮೀಜಿಗಳು ಭಾಗವಹಿಸುತ್ತೇವೆ ಎಂದು ತಿಳಿಸಿದರು.
ಸಮುದಾಯಗಳ ಮಹನೀಯರ ಪುತ್ಥಳಿ ನಿರ್ಮಾಣ ಸಾಮಾಜಿಕ ನ್ಯಾಯವಾಗಿದ್ದು, ಸಾಮರಸ್ಯ ಮೂಡಿಸುತ್ತದೆ. ಎಲ್ಲ ಸಮುದಾಯಗಳು ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಉಪ್ಪಾರ ಯುವಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಜಯಕುಮಾರ್, ಯಳಂದೂರು ಉಪ್ಪಾರ ಸಮಾಜದ ಮುಖಂಡರಾದ ವೈ.ಕೆ.ರಾಜು, ಯರಿಯೂರು ದೊಡ್ಡರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.