ಯಳಂದೂರು: ತಾಲ್ಲೂಕಿನಲ್ಲಿ ತೆಂಗಿನ ಸಸಿಗಳಿಗೆ ಸುಳಿ (ಚಿಗುರು) ಕೊಳೆ ರೋಗ ಕಾಡಿದೆ. ತೆಂಗಿನ ಉತ್ಪನ್ನಗಳಿಗೆ ಬೆಲೆ ಕುಸಿದು ಕಂಗಾಲಾಗಿರುವ ಬೆಳೆಗಾರರು ಗಿಡ ಉಳಿಸಿಕೊಳ್ಳಲು ಪರದಾಡಬೇಕಿದೆ.
ತೋಟದಲ್ಲಿ ನೆಟ್ಟ ಸಸಿಗಳು ದಿನದಿಂದ ದಿನಕ್ಕೆ ಸೊರಗುತ್ತ ನಾಶವಾಗುತ್ತಿದ್ದು. ತೆಂಗು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಕಂಗು ಮತ್ತು ತೆಂಗು ಬೆಳೆಗಾರರು ಇದ್ದಾರೆ. 750 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ಸ್ಥಳೀಯ ಮತ್ತು ಫಾರ್ಮ್ ಸಸಿಗಳನ್ನು ರೈತರು ನಾಟಿ ಮಾಡಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಸುಳಿ ಕೊಳೆ ರೋಗ ಹಾಗೂ ರೈನೋಸರಸ್ ದುಂಬಿ, ಕಪ್ಪುತಲೆ ಹುಳ ಮತ್ತು ಕೆಂಪುಮೂತಿ ಹುಳ ತೆಂಗು ನಾಶಕ್ಕೆ ಕಾರಣವಾಗಿದೆ.
ಸುಳಿ ಕೊಳೆ ರೋಗ ಮಳೆಗಾಲದಲ್ಲಿ ಹೆಚ್ಚು ಕಾಡುತ್ತದೆ. ಗಿಡಗಳು ಈಗಾಗಲೇ ನಾಶವಾಗಿದ್ದು, ಉಳಿದ ಸಸಿಗಳಿಗೂ ರೋಗ ಹರಡುವ ಭೀತಿ ಇದೆ. ಇದರಿಂದ ಎರಡ್ಮೂರು ವರ್ಷದ ಬೆಳೆ ಸೊರಗುತ್ತಿದೆ. ಇಂತಹ ಸಸಿಗಳನ್ನು ಉಳಿಸುವ ಮಾರ್ಗ ತಿಳಿಯದಾಗಿದೆ ಎನ್ನುತ್ತಾರೆ ಬೆಳೆಗಾರರು.
ರೈತರ ಅಳಲು: ಮರದ ಸುಳಿ ಮಧ್ಯಾಹ್ನದ ಬಿಸಿಲಿಗೆ ಬಾಡುತ್ತದೆ. ನಂತರ ಹಳದಿ ವರ್ಣಕ್ಕೆ ತಿರುಗುತ್ತದೆ. ಸುಳಿ ಕೊಳೆತು ಜೋತು ಬೀಳುತ್ತದೆ. ನಂತರ ಗರಿಗಳು ಒಣಗಿ ಬೀಳುತ್ತವೆ. ಈ ಪ್ರಕ್ರಿಯೆ ಆರೇಳು ತಿಂಗಳಲ್ಲಿ ಕಂಡುಬಂದಿದ್ದು, ಕೀಟ ಭಾದೆ ಗುರುತಿಸುವುದೇ ಸವಾಲಾಗಿದೆ. 10 ಸಸಿಗಳು ಈಗಾಗಲೇ ಕೊಳೆಯುವ ಹಂತ ತಲುಪಿವೆ ಎನ್ನುತ್ತಾರೆ ಅಗ್ರಹಾರದ ರೈತ ರಂಗಸ್ವಾಮಿ.
ಹತೋಟಿಗೆ ಕ್ರಮ
ತೆಂಗಿನ ಸುಳಿ ಕೊಳೆ ರೋಗ ಮಳೆಗಾಲದಲ್ಲಿ ಸಸಿಗಳನ್ನು ಬಾಧಿಸುತ್ತದೆ. ಅಣಬೆ ರೋಗ (ಕಾಂಡ ಸೋರು ರೋಗ) ಹಾಗೂ ಬೇಸಿಗೆಯಲ್ಲಿ ಕಪ್ಪುತಲೆ ದುಂಬಿಯೂ ಗಿಡಗಳನ್ನು ಕೊಲ್ಲುತ್ತದೆ. ಹಾಗಾಗಿ ಸುಳಿಯು ರೋಗದಿಂದ ಒಣಗುವುದಕ್ಕೆ ಮೊದಲೆ ಅದನ್ನು ಪತ್ತೆ ಹಚ್ಚಿದರೆ ಗಿಡಗಳನ್ನು ಉಳಿಸಬಹುದು. ಸುಳಿಯ ಕೊಳೆತ ಭಾಗವನ್ನು ಸ್ವಚ್ಚಗೊಳಿಸಿ ಬೋರ್ಡೋ ಪೇಸ್ಟ್ ಲೇಪಿಸಬೇಕು. ಬೇರುಗಳಿಗೆ ಪಂಜಿಸೈಟ್ ಹಚ್ಚಬೇಕು ಇಲ್ಲವೆ ಎಕ್ಸಕೊನೊಜೋಲ್ ದ್ರಾವಣವನ್ನು ಸಿಂಪಡಿಸಬೇಕು. ಗಿಡಗಳ ಬೆಳವಣಿಗೆಗೆ ಅನುಗುಣವಾಗಿ ತೆಂಗು ಸಂರಕ್ಷಣೆ ಕೈಗೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಸರಳ ಪರಿಹಾರೋಪಾಯ
ತೆಂಗು ಬೆಳೆಯ ಕೀಟ ನಿಯಂತ್ರಣಕ್ಕೆ ಸರಳ ಪರಿಹಾರೋಪಾಯ ಅನುಸರಿಸಬೇಕು. ತೆಂಗು ಬೆಳೆ ಬೆಳೆಯಲು ಮತ್ತು ಕೀಟ ಬಾಧೆ ಕಂಡಾಗ ಗಿಡಗಳು ನಿಧಾನವಾಗಿ ಪ್ರತಿಕ್ರಿಯಿಸುತ್ತದೆ. ಹಾಗಾಗಿ ರೋಗದಿಂದ ಸತ್ತ ಮರಗಳನ್ನು ಕಡಿದು ಬುಡವನ್ನು ಸುಡಬೇಕು. ಮಳೆಗಾಲದಲ್ಲಿ ಗಿಡದ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. 1 ಲೀಟರ್ ನೀರಿಗೆ ಸಾಫ್ ಕೀಟ ನಾಶಕವನ್ನು 2 ಗ್ರಾಂ ಬೆರಸಿ ಸಿಂಪಡಿಸಬೇಕು ಎಂದು ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಕೀಟತಜ್ಞ ಶಿವರಾಯನಾವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.