ಯಳಂದೂರು: ತಾಲ್ಲೂಕಿನಲ್ಲಿ ಮೊಟ್ಟೆ ಧಾರಣೆ ಕುಸಿತದತ್ತ ದಾಪುಗಾಲು ಇಟ್ಟಿದೆ. ಹಬ್ಬಗಳ ಸಾಲು ಮತ್ತು ಶ್ರಾವಣ ಮಾಸದಲ್ಲಿ ಮೊಟ್ಟೆ ಮತ್ತು ಮಾಂಸಕ್ಕೆ ಬೇಡಿಕೆ ಕಡಿಮೆಯಾಗುತ್ತಿದ್ದು, ಸಗಟು ಮೊಟ್ಟೆ ಧಾರಣೆ ಇಳಿಕೆಯಾಗಿದೆ.
ಜುಲೈ ಮೊದಲ ವಾರದಿಂದ ಸಗಟು ದರ ₹ 580 (ಪ್ರತಿ 100 ಮೊಟ್ಟೆಗಳಿಗೆ) ಇತ್ತು. ಈ ತಿಂಗಳ ಪ್ರಾರಂಭದಿಂದ ಧಾರಣೆ ₹ 485ಕ್ಕೆ ಕುಸಿದಿದೆ. ಒಟ್ಟಾರೆ 80 ಪೈಸೆಯಷ್ಟು ಇಳಿಕೆಯಾಗಿದೆ. ಆದರೆ, ಮೊಟ್ಟೆ ಬೆಲೆ ಇಳಿಕೆ ಕಂಡರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಮೊದಲಿನಂತೆ ಮುಂದುವರಿದಿದೆ.
ಒಂದೆಡೆ ಹಬ್ಬಗಳ ಸಾಲು ಆರಂಭವಾಗಿದೆ. ಶ್ರಾವಣ ಮಾಸದಲ್ಲಿ ಮೊಟ್ಟೆ, ಮಾಂಸ ಸೇವಿಸುವವರ ಸಂಖ್ಯೆ ಕಡಿಮೆ. ಫೌಲ್ಟ್ರಿ ಫಾರಂಗಳಲ್ಲಿ ಮೊಟ್ಟೆ ಉತ್ಪಾದನೆಯೂ ಏರಿಕೆ ಕಂಡಿದೆ. ಬೇಡಿಕೆಗಿಂತ ನೀಡಿಕೆ ಹೆಚ್ಚಾದ ಪರಿಣಾಮ ಧಾರಣೆ ಕಡಿಮೆಯಾಗಿದೆ ಎನ್ನುತ್ತಾರೆ ಪಟ್ಟಣದ ವ್ಯಾಪಾರಿ ರಾಜಶೇಖರ್.
ಬಿಸಿಯೂಟ ಯೋಜನೆಯಡಿ ಸರ್ಕಾರ ಶಾಲಾ ಮಕ್ಕಳಿಗೆ ವಾರದಲ್ಲಿ 2 ಬಾರಿ ಮೊಟ್ಟೆ ನೀಡುತ್ತಿದೆ. ಈ ನಡುವೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ 6 ದಿನ ಬೇಯಿಸಿದ ಮೊಟ್ಟೆ ಪೂರೈಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್ ಮುಂದಾಗಿದೆ. ಇದರಿಂದ ಸ್ಥಳೀಯ ಮೊಟ್ಟೆ ಉತ್ಪಾದಕರು ಬೆಲೆ ಇಳಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಕೋಳಿ ಸಾಕಣೆದಾರ ಮದ್ದೂರು ವಿಶ್ವನಾಥ್ ಹೇಳಿದರು.
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್ಇಸಿಸಿ) ಪ್ರತಿದಿನ ಮೊಟ್ಟೆ ಧಾರಣೆ ನಿರ್ಧರಿಸುತ್ತದೆ. ಆದರೆ, ಮಾರಾಟಗಾರರು ಬೆಲೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಅಂಗಡಿಗಳಲ್ಲಿ ಈಗಲೂ 1 ಮೊಟ್ಟೆ ಬೆಲೆ ₹ 7ರ ಆಸುಪಾಸಿನಲ್ಲಿ ಇದೆ. ಸಣ್ಣ ಮೊಟ್ಟೆ ₹6 ರೂಪಾಯಿಗೆ ಸಿಗುತ್ತಿದೆ ಎಂದು ಗ್ರಾಹಕ ಮಾಂಬಳ್ಳಿ ಮಹೇಶ್ ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.