ADVERTISEMENT

ಮಾದಪ್ಪನ ಹುಂಡಿಯಲ್ಲಿ ₹2 ಕೋಟಿ ಸಂಗ್ರಹ

ಎರಡು ವಿದೇಶಿ ನೋಟು, ಅಮಾನ್ಯಗೊಂಡ ₹2 ಸಾವಿರ ಮುಖಬೆಲೆಯ 22 ನೋಟು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:18 IST
Last Updated 24 ಅಕ್ಟೋಬರ್ 2024, 16:18 IST
ಮಲೆ ಮಹದೇಶ್ವರಬೆಟ್ಟದ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಿದ ದೇವಾಲಯದ ಸಿಬ್ಬಂದಿ
ಮಲೆ ಮಹದೇಶ್ವರಬೆಟ್ಟದ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಿದ ದೇವಾಲಯದ ಸಿಬ್ಬಂದಿ   

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರಬೆಟ್ಟದ ದೇವಸ್ಥಾನದ ಹುಂಡಿ ಹಣ ಎಣಿಕೆ ನಡೆದಿದ್ದು ₹ 2 ಕೋಟಿಗೂ ಹೆಚ್ಚು ಮೊತ್ತ ಸಂಗ್ರಹವಾಗಿದೆ. ಇ-ಹುಂಡಿಯಿಂದ 2,74,204 ನಗದು ಹಾಗೂ ಹುಂಡಿಯಲ್ಲಿ ವಿದೇಶಿ ನೋಟುಗಳೂ ದೊರೆತಿವೆ.

ಗುರುವಾರ ಬೆಳಿಗ್ಗೆ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ‌28 ದಿನಗಳಲ್ಲಿ ಸಂಗ್ರಹವಾದ ಹುಂಡಿ ಹಣ ಎಣಿಕೆ ಕಾರ್ಯ ಆರಂಭವಾಯಿತು. ಮಹದೇಶ್ವರಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿದ್ದರು. ಸಂಜೆಯವರೆಗೂ ನಡೆದ ಎಣಿಕೆ ಕಾರ್ಯದಲ್ಲಿ ₹ 22 ಕೋಟಿ 80 ಸಾವಿರದ 844 ನಗದು ದೊರೆಯಿತು.

ಇದಲ್ಲದೆ ಮೂವತ್ತು ಗ್ರಾಂ ಚಿನ್ನ, 1ಕೆಜಿ 865 ಗ್ರಾಂ ಬೆಳ್ಳಿ, 2 ಸಾವಿರ ಮುಖಬೆಲೆಯ 22 ನೋಟು, ಎರಡು ವಿದೇಶಿ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ.

ADVERTISEMENT

ಮಲೆ ಮಹದೇಶ್ವರ ದೇವಸ್ಥಾನಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ವಿಶೇಷ ದಿನಗಳು, ಹಬ್ಬ ಹರಿದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಮಾದಪ್ಪನ ಕ್ಷೇತ್ರದಲ್ಲಿ ಚಿನ್ನದ ತೇರಿನ ಉತ್ಸವ, ಬೆಳ್ಳಿ ಹಾಗೂ ಹುಲಿ ವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳು ಪ್ರತಿವರ್ಷ ನಡೆಯುತ್ತಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ತೀರಿಸಿ ಕಾಣಿಕೆ ರೂಪದಲ್ಲಿ ನಗದು, ಚಿನ್ನಾಭರಣ ಅರ್ಪಿಸುತ್ತಾರೆ.

ಹುಂಡಿ ಎಣಿಕೆ ಸಂದರ್ಭ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು.ಎ.ಈ, ಉಪ ಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್, ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ನಾಗೇಶ್, ಜಿಲ್ಲಾಡಳಿತ ಕಚೇರಿಯ ಶ್ವೇತಾ, ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬ್ಯಾಂಕ್ ಆಫ್‌ ಬರೋಡ ವ್ಯವಸ್ಥಾಪಕರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.