ADVERTISEMENT

ಚಾಮರಾಜನಗರ: ಸೋಬಾನೆ ಹಾಡಿನ ಮೋಡಿಗಾರ್ತಿ

40 ವರ್ಷಗಳಿಂದ ಹಾಡುತ್ತಿರುವ ಗೌರಮ್ಮ

ರವಿ ಎನ್‌
Published 24 ಮಾರ್ಚ್ 2020, 19:30 IST
Last Updated 24 ಮಾರ್ಚ್ 2020, 19:30 IST
ಗೌರಮ್ಮ
ಗೌರಮ್ಮ   

ಚಾಮರಾಜನಗರ: ಆಧುನಿಕತೆಯ ಭರಾಟೆಯಲ್ಲಿ ಜಾನಪದ ಸಾಹಿತ್ಯದಲ್ಲಿ ಬರುವ ಸೋಬಾನೆ, ಜೋಗುಳ ಪದ, ದೇವರ ಹಾಡುಗಳ ಪ್ರಮಾಣ ಕ್ಷೀಣಿಸುತ್ತಿರುವ ನಡುವೆಯೇ ತಾಲ್ಲೂಕಿನ ಜಾಲನಹಳ್ಳಿ ಹುಂಡಿಯ ನಿವಾಸಿ 64 ವರ್ಷದ ಗೌರಮ್ಮ ಅವರು ತಮ್ಮ ಕಂಚಿನ ಕಂಠದಿಂದ ಸೋಬಾನೆ ಪದ ಕಟ್ಟಿ ಮೋಡಿ ಮಾಡುತ್ತಾರೆ.

ಇಳಿ ವಯಸ್ಸಿನಲ್ಲೂ ನಿರರ್ಗಳವಾಗಿ ಶುಭ ಸಮಾರಂಭಗಳು, ವಿವಿಧ ಕಾರ್ಯಕ್ರಮಗಳಲ್ಲಿ ಸೋಬಾನೆ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಮನಸೆಳೆದಿದ್ದಾರೆ.

ನಾಲ್ಕು ದಶಕಗಳ ಗಾಯನ

ADVERTISEMENT

ತಮ್ಮ ತಾಯಿ ಪುಟ್ಟಮಾದಮ್ಮ ಅವರಿಂದ ಸೋಬಾನೆ ಹಾಡುವುದನ್ನು ಕಲಿತಿರುವ ಗೌರಮ್ಮ ಅವರು, 40 ವರ್ಷಗಳಿಂದ ಸೋಬಾನೆ ಪದಗಳಿಗೆ ಧ್ವನಿಯಾಗುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಮಾತ್ರವಲ್ಲದೇ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ತಮ್ಮ‌ಲ್ಲಿರುವ ಕಲೆ ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೈಸೂರು ಆಕಾಶವಾಣಿಗೂ ಇವರು ಹಾಡಿದ್ದಾರೆ. ಸ್ಥಳೀಯವಾಗಿ ನಡೆಯುವ ಹಬ್ಬ ಹರಿದಿನಗಳು, ಗೃಹಪ್ರವೇಶ, ಮದುವೆ, ನಾಮಕರಣ ಸೇರಿದಂತೆ ಶುಭ ಸಮಾರಂಭಗಳಲ್ಲೂ ಕಲಾ ಪ್ರೌಢಿಮೆ ಮೆರೆದಿದ್ದಾರೆ.

ಆಕಾಶವಾಣಿಯಲ್ಲಿ ದನಿ

‘ನನ್ನ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಾ ಸೋಬಾನೆ ಹಾಡುವುದನ್ನು ಕಲಿತೆ. 30 ವರ್ಷಗಳ ಹಿಂದೆಯೇ ಮೈಸೂರು ಆಕಾಶವಾಣಿಯಲ್ಲಿ ಹಾಡಿದ್ದೆ. ಅಂದಿನಿಂದ ಪ್ರತಿ ಐದು ವರ್ಷಕ್ಕೊಮ್ಮೆ ಧ್ವನಿ ಪರೀಕ್ಷೆ ನಡೆಸಿ ಹಾಡು ಹಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ನನಗೆನಿರ್ದಿಷ್ಟ ಸಂಭಾವನೆಕೊಡುತ್ತಿದ್ದರು. 10 ವರ್ಷಗಳಿಂದ ಅರ್ಜಿ ಹಾಕಿಲ್ಲ’ ಎಂದು ಗೌರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಘ ಸ್ಥಾಪನೆ

ಸಮಾನ ಮನಸ್ಕರ ಜೊತೆ ಸೇರಿಕೊಂಡು ಗೌರಮ್ಮ ಅವರು ಒಂದು ಸಂಘವನ್ನೂ ಕಟ್ಟಿಕೊಂಡಿದ್ದಾರೆ.

‘24 ಮಂದಿಯ ನೋಂದಾಯಿತ ಸದಸ್ಯರ ‘ಓಂ ಶಕ್ತಿ ಸೋಬಾನೆ ಕಲಾ ಸಂಘ’ ಕಟ್ಟಿಕೊಂಡಿದ್ದೇವೆ. ವಾರಕ್ಕೆ ಎರಡು ಸಲ ಸೋಬಾನೆ ಪದ ಹೇಳಿಕೊಡುತ್ತೇನೆ. ಸಂಘದ ಸದಸ್ಯರು ಕೂಡ ಕಲಿಕೆಗೆ ಆಸಕ್ತಿ ತೋರುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳಿಗೆ ದುಂಡಮ್ಮ, ದೇವಮ್ಮ ಹಾಗೂ ಲಕ್ಷ್ಮಮ್ಮಜೊತೆಗೂಡಿ ಹೋಗುತ್ತಿದ್ದೆವು. ಇತ್ತೀಚೆಗೆ ಲಕ್ಷ್ಮಮ್ಮ ತೀರಿಕೊಂಡಳು. ಅವಳ ಬದಲು ಮತ್ತೊಬ್ಬರನ್ನು ಕರೆದುಕೊಂಡು ಹೋಗುತ್ತೇನೆ. ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಹೆಚ್ಚು ಮಂದಿ ಹೋಗುತ್ತೇವೆ’ ಎಂದರು.

‘ಖಾಸಗಿ ಕಾರ್ಯಕ್ರಮಗಳಿಗೆ ಇಂತಿಷ್ಟೇ ಸಂಭಾವನೆ ಕೊಡಬೇಕು ಎಂದು ಕೇಳುವುದಿಲ್ಲ. ಅವರ ಕೊಟ್ಟಷ್ಟು ಪಡೆದು ಕೊಳ್ಳುತ್ತೇನೆ. ಹಿರಿಯರು ಹೇಳಿಕೊಟ್ಟ ಸಂಸ್ಕೃತಿಯನ್ನು ಕಿರಿಯರಿಗೂ ಹೇಳಿಕೊಡಬೇಕು. ಕಲೆ ಮುಂದುವರಿಯಬೇಕು’ ಎನ್ನುವ ಹಂಬಲ ಅವರದ್ದು.

ಅರಸಿ ಬಂದ ಜಾನಪದ ಅಕಾಡೆಮಿ ಪ್ರಶಸ್ತಿ

ಗೌರಮ್ಮ ಅವರು ಈ ವರ್ಷ2019–20ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಓಂ ಶಕ್ತಿ ಸೋಬಾನೆ ಕಲಾ ಸಂಘದಲ್ಲಿರುವ ಸದಸ್ಯರಿಗೆ ಸೋಬಾನೆ ಹೇಳಿಕೊಡುತ್ತಿದ್ದೇನೆ. ಕಲಿಯುವ ಆಸಕ್ತಿಯಿಂದ ಬೇರೆ ಯಾರೇ ಬಂದರೂ ಅವರಿಗೂ ಹೇಳಿಕೊಡುತ್ತೇನೆ. ಹಣ ಪಡೆಯುವುದಿಲ್ಲ. ಒಂದೆಡೆ ಒಗ್ಗೂಡಿ ಹಾಡುವ ನಮ್ಮ ಸಂಸ್ಕೃತಿಯ ಸೋಬಾನೆ ಕಲೆಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮದಾಗಿದೆ’ ಎನ್ನುತ್ತಾರೆ ಗೌರಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.