ಸಂತೇಮರಹಳ್ಳಿ: ಹೋಬಳಿಯ ಕುದೇರು ಗ್ರಾಮದಲ್ಲಿರುವ ಜೈನ ಬಸದಿಯು 800 ವರ್ಷಗಳ ಹಿಂದಿನ ಜೈನರ ಇತಿಹಾಸವನ್ನು ಸಾರುತ್ತಿದೆ.
12ನೇ ಶತಮಾನದಲ್ಲಿರುವ ನಿರ್ಮಾಣವಾಗಿರುವ ಈ ಬಸದಿ ಕೆಲವು ವರ್ಷಗಳವರೆಗೂ ಶಿಥಿಲಾವಸ್ಥೆಯಲ್ಲಿತ್ತು. ಆರು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಗತ ಚರಿತ್ರೆಯನ್ನು ಮತ್ತೆ ಜನರ ಮುಂದಿಡುತ್ತಿದೆ.
ಗಂಗರ ಕಾಲದಲ್ಲಿ ಈ ಜೈನ ದೇವಾಲಯ ನಿರ್ಮಾಣವಾಗಿದೆ. ತಮಿಳುನಾಡಿನ ದೀಪಂಗ್ ಗುಡಿಯಲ್ಲಿದ್ದ ಜೈನ ಮುನಿಗಳಿಂದಾಗಿ ಇಲ್ಲಿ ಬಸದಿ ತಲೆ ಎತ್ತಿದೆ ಎಂದು ಹೇಳುತ್ತಾರೆ ಹಿರಿಯರು.
ಆ ಸಮಯದಲ್ಲಿ ತಮಿಳುನಾಡಿನಲ್ಲಿ ತೀವ್ರ ಬರಗಾಲ ಉಂಟಾಯಿತು. ಅಲ್ಲಿಂದ ಹೊರಟ ಜೈನಮುನಿಗಳ ಯಾತ್ರೆ, ಕುದೇರು ಗ್ರಾಮದಲ್ಲಿ ತಲುಪುತ್ತದೆ. ಬ್ರಹ್ಮದೇವರ ವಿಗ್ರಹವನ್ನೂ ಜೊತೆಗೆ ತಂದಿದ್ದ ಮುನಿಗಳು ಇಲ್ಲೇ ನೆಲೆಸುತ್ತಾರೆ ಎಂದು ಹೇಳುತ್ತದೆ ಇತಿಹಾಸ.
ದಿನಗಳು ಕಳೆದಂತೆ ಜೈನ ಮುನಿಗಳು ಕುದೇರು, ಉಮ್ಮತ್ತೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೈನಧರ್ಮ ಪ್ರಚಾರ ನಡೆಸಿದ್ದರು. ಅದೇ ಸಮಯದಲ್ಲಿ ಗಂಗರು ಆಡಳಿತ ನಡೆಸುತ್ತಿದ್ದರು. ಅವರೇ ಜೈನ ಬಸದಿ ನಿರ್ಮಿಸಿ ವೃಷಭನಾಥ ತೀರ್ಥಂಕರರ (ಆದಿನಾಥ) ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
ಚಿಕ್ಕ ದೇವಸ್ಥಾನವಾಗಿದ್ದ ಈ ಬಸದಿಯನ್ನು 15ನೇ ಶತಮಾನದಲ್ಲಿ ಮೇಲ್ದರ್ಜೆಗೆ ಏರಿಸಲಾಯಿತು. ಆ ಸಮಯದಲ್ಲಿ ಕೃಷ್ಣದೇವರಾಯನ ಆಡಳಿತ ಜಾರಿಯಲ್ಲಿತ್ತು. ಬಸದಿಯನ್ನು ಮತ್ತಷ್ಟು ವಿಸ್ತರಿಸಿ ಈ ಭಾಗದಲ್ಲಿ ಜೈನಧರ್ಮ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲು ಕೃಷ್ಣದೇವರಾಯನ ಸಹಕಾರ ಇದೆ ಎಂದು ಹೇಳುತ್ತಾರೆ ಇತಿಹಾಸಕಾರರು.
ಕಲ್ಲಿನ ಮಂದಿರ: ಬಸದಿಯು ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ವೃಷಭನಾಥ ತೀರ್ಥಂಕರ ಮೂರ್ತಿಯ ಇದೆ. ಹಜಾರದಲ್ಲಿ, ಮೂರ್ತಿಯ ಬಲ ಭಾಗದಲ್ಲಿ ಬ್ರಹ್ಮಯಕ್ಷ ಹಾಗೂ ಎಡ ಭಾಗದಲ್ಲಿ ಚಕ್ರೇಶ್ವರಿ ಮೂರ್ತಿಯ ಸುಂದರ ವಿಗ್ರಹಗಳಿವೆ.
ಬಸದಿಯ ಮೇಲಿನ ಎರಡೂ ಭಾಗಗಳಲ್ಲಿ ಸಿಂಹದ ಪ್ರತಿಕೃತಿ ಕೆತ್ತಲಾಗಿದೆ. ಇದು ಅಂದಿನ ರಾಜ ಲಾಂಛನವಾಗಿರಬಹುದು ಎಂದು ಊಹಿಸಲಾಗಿದೆ. ಮಧ್ಯದಲ್ಲಿ ತೀರ್ಥಂಕರ ವಿಗ್ರಹವೊಂದು ಕೈ ಮುಗಿಯುವ ಶೈಲಿಯಲ್ಲಿದೆ. ಮುಖ್ಯ ದ್ವಾರದ ಹೆಬ್ಬಾಗಿಲಿನಲ್ಲಿ ವೃಷಭನಾಥ ಧ್ಯಾನಸ್ಥನಾಗಿರುವ ಮೂರ್ತಿ ಇದೆ.
ಬಸದಿಯು ಶಿಥಿಲಾವಸ್ಥೆ ತಲುಪಿದ್ದ ವಿಚಾರ ಆರು ವರ್ಷಗಳ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಗಮನಕ್ಕೆ ಬಂತು. ಜೀರ್ಣೋದ್ಧಾರಕ್ಕೆ ಅವರು ಧನಸಹಾಯ ನೀಡಲು ಮುಂದಾದರು. ಜೊತೆಗೆ ಸರ್ಕಾರವೂ ನೆರವಾಯಿತು.
ಇಂದು ಬಸದಿಯ ಹೆಸರಿನಲ್ಲಿ ಟ್ರಸ್ಟ್ ರಚಿತವಾಗಿದೆ. ಆಡಳಿತ ನಿರ್ವಹಣೆಯನ್ನು ಟ್ರಸ್ಟ್ ನೋಡಿಕೊಳ್ಳುತ್ತಿದೆ. ಪ್ರತಿದಿನ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಪ್ರತಿ ಅಮಾವಾಸ್ಯೆಯಂದು ಪಂಚಕಜ್ಜಾಯ ವಿಶೇಷ ಪೂಜೆ ನಡೆಸಲಾಗುತ್ತದೆ. ಪ್ರತಿ ವರ್ಷದ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ವಾರ್ಷಿಕ ಮಹಾಪೂಜೆ ನಡೆಸಲಾಗುತ್ತದೆ. ಈ ಸಮಯದಲ್ಲಿ ನೆರೆಯ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಜತೆಗೆ ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಜಿಲ್ಲೆಗಳಿಂದ ಪ್ರತಿ ದಿನ ಭಕ್ತರು ಬರುತ್ತಾರೆ.
ದಿಗಂಬರ ಜೈನ ಮುನಿಗಳು ಪಾದಯಾತ್ರೆ ಮೂಲಕ ತಮ್ಮ ಅನುಯಾಯಿಗಳೊಡನೆ ಇಲ್ಲಿಗೆ ಬಂದು ತಂಗಿದ್ದು, ಪ್ರವಚನ ನಡೆಸಿ ಮುಂದಿನ ಜೈನ ದೇವಾಲಯಗಳಿಗೆ ಪ್ರಯಾಣ ಬೆಳೆಸುತ್ತಾರೆ.
‘ಪ್ರವಾಸಿ ತಾಣವನ್ನಾಗಿ ಮಾಡಿ’
‘ಗ್ರಾಮದಲ್ಲಿರುವ ಜೈನ ಬಸದಿ ಸುವ್ಯವಸ್ಥಿತವಾಗಿದೆ. ಹೆಚ್ಚು ಹೆಚ್ಚು ಭಕ್ತರು ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ, ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು’ ಎಂದು ಗ್ರಾಮದ ಪಣಿರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ವಂಶಪಾರಂಪರ್ಯವಾಗಿ ಪೂರ್ವಜರಿಂದ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಭಕ್ತರ ಹೊತ್ತುಕೊಂಡಿರುವ ಹರಕೆಗಳನ್ನು ತೀರ್ಥಂಕರರು ಈಡೇರಿಸುತ್ತಿದ್ದಾರೆ. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ’ ಎಂದು ಬಸದಿಯನ್ನು ನಿರ್ವಹಿಸುತ್ತಿರುವ ವಸುಪಾಲ್ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.