ADVERTISEMENT

ಸಮುದಾಯ ಕೃಷಿ: ಕಾಡೊಳಗೆ ಬೆಳೆ ವೈವಿಧ್ಯ-ತುಳಸಿಕೆರೆ ಗ್ರಾಮದಲ್ಲಿ ಪ್ರಯೋಗ

ಚಾಮರಾಜನಗರ: ಮಹದೇಶ್ವರ ಬೆಟ್ಟ ವನ್ಯಧಾಮದ ತುಳಸಿಕೆರೆ ಗ್ರಾಮದಲ್ಲಿ ಪ್ರಯೋಗ

ಬಿ.ಬಸವರಾಜು
Published 16 ಸೆಪ್ಟೆಂಬರ್ 2021, 21:15 IST
Last Updated 16 ಸೆಪ್ಟೆಂಬರ್ 2021, 21:15 IST
ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ ಸಮುದಾಯ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಬಾಳೆ, ಈರುಳ್ಳಿ
ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ ಸಮುದಾಯ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಬಾಳೆ, ಈರುಳ್ಳಿ   

ಹನೂರು: ಮಾನವ–ವನ್ಯಜೀವಿ ಸಂಘರ್ಷ ತಡೆ, ಪರಿಸರ ಸಂರಕ್ಷಣೆ ಹಾಗೂ ಅರಣ್ಯದಲ್ಲಿ ವಾಸಿಸುವ ಜನರ ಕಾಡಿನ ಉತ್ಪನ್ನಗಳ ಮೇಲಿನ ಅವಲಂಬನೆ ತಗ್ಗಿಸುವ ಉದ್ದೇಶದಿಂದ ಮಲೆ ಮಹದೇಶ್ವರ ವನ್ಯಧಾಮದ ಗ್ರಾಮವೊಂದರಲ್ಲಿ ಜಾರಿಗೆ ಬಂದಿರುವ ಸಮುದಾಯ ಕೃಷಿ ಪ್ರಯೋಗ ಯಶಸ್ಸಿನತ್ತ ಸಾಗಿದೆ.

ವನ್ಯಧಾಮದ ಒಳಗಿರುವ ತುಳಸಿಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ, ಅಮೃತಭೂಮಿ, ರೈತ ಸಂಘ ಹಾಗೂ ರಾಜ್ಯ ರೈತ ಮಹಿಳಾ ಒಕ್ಕೂಟಗಳ ಸಹಭಾಗಿತ್ವದಲ್ಲಿ ಕಳೆದ ವರ್ಷ ಸಮುದಾಯ ಸಾವಯವ ಕೃಷಿ ಪ್ರಯೋಗ ಆರಂಭಿಸಲಾಗಿತ್ತು.

ವರ್ಷಕ್ಕೆ ಎರಡು ಕ್ವಿಂಟಲ್ ರಾಗಿ, ಅವರೆ ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದ ಭೂಮಿಯಲ್ಲಿ ಈಗ ವೈವಿಧ್ಯಮಯ ಬೆಳೆ ಬೆಳೆಸಲಾಗುತ್ತಿದೆ. ಹನಿ ನೀರಾವರಿ ಆಶ್ರಯದಲ್ಲಿ ಬೆಳೆಯುತ್ತಿರುವ ವಿವಿಧ ಫಸಲು ಸ್ಥಳೀಯ ರೈತರಲ್ಲಿ ಆಶಾಭಾವನೆ ಮೂಡಿಸಿವೆ.

ADVERTISEMENT

ಸಮುದಾಯದ ಕೃಷಿಗಾಗಿ ಸ್ಥಳೀಯ ರೈತರಿಂದ 10 ಎಕರೆ ಜಮೀನು ಗುತ್ತಿಗೆಗೆ ಪಡೆಯಲಾಗಿತ್ತು. ನೀರಿನ ಕೊರತೆ ಇದ್ದ ಕಾರಣ, ಸದ್ಯ ಐದು ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. 10 ರೈತ ಕುಟುಂಬಗಳು ಬೇಸಾಯದಲ್ಲಿ ತೊಡಗಿವೆ. ಈರುಳ್ಳಿ, ಮೆಣಸಿನಕಾಯಿ, ಬಾಳೆ, ಅರಿಸಿನ, ವಿವಿಧ ಸೊಪ್ಪು ಸೇರಿ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಗ್ರಾಮದಲ್ಲಿ ಹರಿಯುತ್ತಿದ್ದ ತೊರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಚೆಕ್‌ಡ್ಯಾಂ ನಿರ್ಮಿಸಿ, ನೀರನ್ನು ಸಂಗ್ರಹಿಸಲಾಗುತ್ತಿದೆ. ಸೋಲಾರ್‌ ಪಂಪ್‌ ವ್ಯವಸ್ಥೆ ಮಾಡಲಾಗಿದೆ.

‘ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡಲಾಗುತ್ತಿದೆ. ಬೆಳೆಗಳು ಚೆನ್ನಾಗಿ ಬಂದಿವೆ’ ಎಂದು ಗ್ರಾಮದ ರೈತ ನಾಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಲ್ಲುಗಾವಲು: ‘10 ಎಕರೆ ಪೈಕಿ 1 ಎಕರೆಯಲ್ಲಿ ಹುಲ್ಲುಗಾವಲು ಮಾಡಲಾಗುತ್ತಿದೆ. ಅರಣ್ಯ ಇಲಾಖೆಯು ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಜಾನುವಾರುಗಳು ಕಾಡಿಗೆ ಹೋಗುವುದನ್ನು ತಡೆಗಟ್ಟುವುದಕ್ಕೆ ಈ ಯೋಜನೆ. ಹಸುಗಳ ಸಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತಿದೆ. ನೀರಿನ ಕೊರತೆ ಇದ್ದರೂ ಅಲ್ಪ ನೀರಿನಲ್ಲೇ ಕೃಷಿ ಮಾಡಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಇದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದರು.

‘ಪರಿಸರ ಸಂರಕ್ಷಣೆ, ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಜನರು ಕಾಡಿನಲ್ಲಿ ಜಾನುವಾರು ಮೇಯಿಸುವುದನ್ನು ತಡೆಯಲು ಹುಲ್ಲು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ರೈತರಿಗೆ ಬೇಕಾದ ಎಲ್ಲ ಸಹಕಾರವನ್ನೂ ನೀಡುತ್ತಿದ್ದೇವೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು ತಿಳಿಸಿದರು.

---

ರೈತರು ಹಲವು ಬೆಳೆ ಬೆಳೆಯುತ್ತಿದ್ದಾರೆ. ಕೃಷಿಗೆ ನೀರನ್ನು ಪೂರೈಸುವುದಕ್ಕಾಗಿ ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ₹ 7 ಲಕ್ಷ ವೆಚ್ಚದಲ್ಲಿ ಸೋಲಾರ್ ಪಂಪ್ ವ್ಯವಸ್ಥೆ ಕಲ್ಪಿಸಲಾಗಿದೆ
ವಿ.ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

----

ತುಳಸಿಕೆರೆ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದೇವೆ. 10 ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಮಾರಾಟ ಮಾಡುವ ಯೋಚನೆ ಇದೆ
ಹೊನ್ನೂರು ಪ್ರಕಾಶ್, ಜಿಲ್ಲಾ ಘಟಕದ ಅಧ್ಯಕ್ಷ, ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.