ಚಾಮರಾಜನಗರ: ಮೈಸೂರಿನ ಇನ್ಫೊಸಿಸ್, ರೋಟರಿ ಪಂಚಶೀಲ ಸಹಯೋಗದೊಂದಿಗೆ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಅನುಕೂಲವಾಗುವಂತೆ 10 ಕಂಪ್ಯೂಟರ್ ಮತ್ತು ಪ್ರಿಂಟರ್ ಸೌಲಭ್ಯಗಳನ್ನೊಳಗೊಂಡ ತರಬೇತಿ ಕೇಂದ್ರಕ್ಕೆ ಬುಧವಾರ ಚಾಲನೆ ಸಿಕ್ಕಿದೆ.
ಕೈದಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲು ಕಾರಾಗೃಹದಲ್ಲೇ ಕೇಂದ್ರ ಆರಂಭಿಸಿರುವುದು ರಾಜ್ಯದಲ್ಲೇ ಇದೇ ಮೊದಲು.
ಕಾರಾಗೃಹ ಕಟ್ಟಡದಲ್ಲಿಯೇ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲು ಇನ್ಫೊಸಿಸ್ ಸಹಕಾರದೊಂದಿಗೆ ತರಬೇತಿ ಸಿಬ್ಬಂದಿ ನಿಯೋಜಿಸಲಾಗಿದೆ. ತರಬೇತಿ ಕೊಠಡಿಯಲ್ಲಿ ಕಲಿಕಾರ್ಥಿಗಳಿಗೆ ಸುಲಭವಾಗಿ ಕಂಪ್ಯೂಟರ್ ಅರ್ಥೈಸುವ ಕನ್ನಡ ಕಿರುಪುಸ್ತಕಗಳನ್ನೂ ಇಡಲಾಗಿದೆ.
ಸುಸಜ್ಜಿತ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಶಾಸಕರಾದ ಎಂ.ಆರ್.ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಎಸ್‌ಪಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ ಕಾರಾಗೃಹ ಕಟ್ಟಡದಲ್ಲಿ ಚಾಲನೆ ನೀಡಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ‘ಬದುಕಿನಲ್ಲಿ ಬದಲಾವಣೆಯಾಗಲು ಅಪೂರ್ವ ಅವಕಾಶವನ್ನು ಜಿಲ್ಲಾಧಿಕಾರಿಗಳು ಹಾಗೂ ಇನ್ಫೊಸಿಸ್ ಸಂಸ್ಥೆ ಮಾಡಿಕೊಟ್ಟಿದೆ. ಪರಿಶ್ರಮ, ಗುರಿ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಕೈದಿಗಳು ಇಲ್ಲಿಂದ ಹೊರಹೋದ ಮೇಲೆ ಕಲಿತುಕೊಂಡ ಕಂಪ್ಯೂಟರ್ ಶಿಕ್ಷಣ ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ’ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ‘ಕೆಲ ದಿನಗಳ ಹಿಂದೆ ಸಾಕ್ಷರತಾ ಕಾರ್ಯಕ್ರಮಕ್ಕಾಗಿ ಕಾರಾಗೃಹಕ್ಕೆ ಬಂದ ವೇಳೆ ಕಾರಾಗೃಹದಲ್ಲಿರುವ ಕೈದಿಗಳಿಗೂ ಕಂಪ್ಯೂಟರ್ ಶಿಕ್ಷಣ ನೀಡಬೇಕು ಎಂಬ ಆಲೋಚನೆ ಬಂತು. ಅಂದೇ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದೆ. ಈ ಆಶಯ ಸಾಕಾರಗೊಳಿಸುವ ದಿನ ಇಂದು ಬಂದಿದೆ. ಇನ್ಫೊಸಿಸ್ ಸೇರಿದಂತೆ ಇತರೆ ಸಂಸ್ಥೆಗಳು ನಮ್ಮ ಮನವಿಗೆ ಒಗೊಟ್ಟು ಅತ್ಯಾಧುನಿಕ 10 ಕಂಪ್ಯೂಟರ್, ಪ್ರಿಂಟರ್‌ಗಳನ್ನು ನೀಡಿ ತರಬೇತಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿವೆ. ಕಾರಾಗೃಹ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ’ ಎಂದರು.
ಇನ್ಫೊಸಿಸ್‍ನ ಕೆ.ಎಸ್.ಸುಂದರ್ ಮಾತನಾಡಿ, ‘ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು. ಮನಸ್ಸನ್ನು ಮೆಟ್ಟಿ ನಿಲ್ಲಿ ಸಾಧನೆ ಪರಿವರ್ತನೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಕಂಪ್ಯೂಟರ್ ತರಬೇತಿಗೆ ಮುಂದಾಗಿದ್ದೇವೆ. ಬದುಕಿನಲ್ಲಿ ಜ್ಞಾನ ಹೆಚ್ಚಿಸಿಕೊಂಡು ಮುಂದೆ ಸ್ವತಂತ್ರ ಜೀವನ ನಡೆಸಬಹುದು. ಇದಕ್ಕಾಗಿ ನಿಮ್ಮ ಜೊತೆಯಲ್ಲಿ ನಾವಿರುತ್ತೇವೆ’ ಎಂದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಎನ್.ಎಸ್. ಶಿವಕುಮಾರ್ ಮಾತನಾಡಿ, ‘ಕಾರಾಗೃಹದಲ್ಲಿ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ಹೊಸ ಕಾರ್ಯಕ್ಕೆ ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆ ಮೊದಲು ಎನಿಸಿದೆ. ಈ ಅವಕಾಶ ಕಲ್ಪಿಸಿದ ಜಿಲ್ಲಾಧಿಕಾರಿ, ಇನ್ಫೊಸಿಸ್ ಹಾಗೂ ಇತರೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ಇನ್ಫೊಸಿಸ್‌ನ ಬಿಳಿಗಿರಿರಂಗ, ಸತೀಶ್ ವಿ.ಎನ್., ಮೀನಾಕ್ಷಿ, ಪುಟ್ಟಸ್ವಾಮಿ, ನಿವೃತ್ತ ಡಿಐಜಿ ರಾಜೇಂದ್ರಪ್ರಸಾದ್, ಕಿರಣ್, ಇನ್ನಿತರರು ಇದ್ದರು.
Highlights - ಕಲಿಕಾರ್ಥಿಗಳಿಗೆ ಕಂಪ್ಯೂಟರ್ ಅರ್ಥೈಸುವ ಕನ್ನಡ ಕಿರುಪುಸ್ತಕ ಉತ್ತಮ ಬದುಕು ಕಟ್ಟಿಕೊಳ್ಳಲು ಕಂಪ್ಯೂಟರ್ ಶಿಕ್ಷಣ ನೆರವು ಕೈದಿಗಳು ಜ್ಞಾನ ಹೆಚ್ಚಿಸಿಕೊಂಡು ಸ್ವತಂತ್ರ ಜೀವನ ನಡೆಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.