ADVERTISEMENT

ಚಾಮರಾಜನಗರ: ಜೈನ ಮುನಿ ಹತ್ಯೆಗೆ ಖಂಡನೆ; ಕಠಿಣ ಶಿಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 11:00 IST
Last Updated 10 ಜುಲೈ 2023, 11:00 IST
   

ಚಾಮರಾಜನಗರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹೀರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ, ನಗರದಲ್ಲಿ ಭಾನುವಾರ ರಾತ್ರಿ ವಿಶ್ವ ಹಿಂದೂ ಪರಿಷತ್ ಹಾಗೂ ಜೈನ ಸಮಾಜದಿಂದ ಮೌನ ಪ್ರತಿಭಟನಾ ಮೆರವಣಿಗೆ ಮತ್ತು ಶ್ರದ್ಧಾಂಜಲಿ ಸಭೆ ನಡೆಯಿತು. 

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು, ಮುನಿಗಳ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು.  ಚಾಮರಾಜೇಶ್ವರ ಸ್ವಾಮಿ ದೇವಸ್ತಾನದ ಸುತ್ತಲಿನ ರಸ್ತೆಗಳಲ್ಲಿ ಸಂಚರಿಸಿ, ಮುನಿಗಳ ಹಂತಕರಿಗೆ ಉಗ್ರ ಶಿಕ್ಷೆಯಾಗಬೇಕು. ಇಂಥ ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. 

ಬಳಿಕ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಮುನಿಗಳ ಭಾವಚಿತ್ರವಿಟ್ಟು ದೀಪ ಹಚ್ಚಿ, ಪುಷ್ಟ ನಮನ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.

ADVERTISEMENT

ಜೈನ ಸಮಾಜದ ಮುಖಂಡ ಸುರೇಂದ್ರನಾಥ್ ಹಾಗು ಪಾರ್ಶ್ವನಾಥ ಜೈನ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಪಿ.ನಿರ್ಮಲ ಕುಮಾರ್, ‘ಶಾಂತಿದೂತರಾದ, ಯಾರ ಮನಸ್ಸನ್ನು ನೋಯಿಸಿದ ಮುನಿಗಳ ಹತ್ಯೆ ಹಿಂದೆ ಷಡ್ಯಂತ್ರ ಅಡಗಿದೆ. ಈ ಪ್ರಕರಣದ ಉನ್ನತ ಮಟ್ಟದ ತನಿಖೆಯಾಗಬೇಕು. ಸಮಾಜದ ಬಂಧುಗಳಿಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್‌ನ ಮುಖಂಡ ಮಧುಕುಮಾರ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ದೇಶ ರಕ್ಷಣೆ ಮಾಡುವುದು ಕಷ್ಟವಾಗಿದೆ. ಈ ಹತ್ಯೆ ಹಿಂದೆ ಪಿತೂರಿ ಇದ್ದು, ಜೈನ ಸಮಾಜದ ಶಕ್ತಿಯನ್ನು ಕುಂದಿಸಬೇಕು ಎಂಬ ಉದ್ದೇಶ ಮತ್ತೊಂದು ಸಮಾಜಕ್ಕೆ ಇದೆ. ಇಂಥ ದುಷ್ಟ ಸಮಾಜಗಳ ವಿರುದ್ದ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ’ ಎಂದರು. 

‘ದೇಶದಲ್ಲಿ ವಾಸಿಸುತ್ತಿರುವ ನಾವೆಲ್ಲರು ಮೊದಲು ಭಾರತೀಯರು. ಹೀಗಾಗಿ ದೇಶ ಮತ್ತು ಧರ್ಮ ಬಗ್ಗೆ ಅಭಿಮಾನ ಬೆಳೆಸಿಕೊಂಡು ದುಷ್ಟ ಶಕ್ತಿಗಳಿಗೆ ತಕ್ಕ ಪಾಠ ಕಲಿಸೋಣ’ ಎಂದರು. 

ಮಹಿಳಾ ಜೈನ ಸಮಾಜದ ಅಧ್ಯಕ್ಷೆ ಪದ್ಮಶ್ರೀ ರಮೇಶ್, ಪಾರ್ಶ್ವನಾಥ ಜೈನ ಸಮಾಜದ ಉಪಾಧ್ಯಕ್ಷ ಸಿ.ವಿ.ನಾಗೇಂದ್ರಯ್ಯ, ಕಾರ್ಯದರ್ಶಿ ಸಿ.ಪಿ.ಮಹೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಸಿ.ಕೆ.ಸುಭಾಷ್‌, ಖಂಜಾಜಿ ನಾಗರತ್ನರಾಜು, ಶ್ವೇತಾಂಬರಿ ಜೈನ ಸಮಾಜ ಅಧ್ಯಕ್ಷ ಕನ್ನಯ್ಯ ಲಾಲ್, ಮುಖೇಶ್, ಗಣಪತಿಲಾಲ್ ಜೈನ್, ಪ್ರಕಾಶ್ ಜೈನ್ ಇತರರು ಇದ್ದರು.

ಸಿಬಿಐ ತನಿಖೆಗೆ ಆಗ್ರಹ

ಈ ಮಧ್ಯೆ, ಮುನಿಗಳ ಹತ್ಯೆ ಖಂಡಿಸಿ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಪಾರ್ಶ್ವನಾಥ ಜೈನ‌ ಸಮಾಜ, ಈ ಪ್ರಕರಣವನ್ನು ಸಿಬಿಐನಂತೆ ಉನ್ನತ ತನಿಖಾ ಸಂಸ್ಥೆಗೆ ವಹಿಸಬೇಕು. ಸರ್ಕಾರ ಜೈನ ಮುನಿಗಳಿಗೆ ಹಾಗೂ ಸಮಾಜಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. 

ಸಮಾಜದ ಅಧ್ಯಕ್ಷ ನಿರ್ಮಲ್‌ಕುಮಾರ್‌, ಕಾರ್ಯದರ್ಶಿ ಮಹೇಶ್‌ಕುಮಾರ್‌, ಸದಸ್ಯ ಡಿ.ಬಿ.ಉಲ್ಲಾಸ್‌ ಮಾತನಾಡಿ, ‘ಮುನಿ ಕಾಮಕುಮಾರ ನಂದಿ ಮಹಾರಾಜರ ಕಗ್ಗೊಲೆ ಇಡೀ ಜೈನಸಮುದಾಯವನ್ನು ಆತಂಕಕ್ಕೆ ಈಡು ಮಾಡಿದೆ. ಬದುಕಿನಲ್ಲಿ ಎಲ್ಲವನ್ನೂ ತ್ಯಾಗಮಾಡಿರುವ ಮುನಿಗಳನ್ನು ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆ ತಗ್ಗಿಸುವ ಸಂಗತಿ’ ಎಂದರು. 

‘ಇದುವರೆಗೆ ನಮ್ಮ ಮುನಿಗಳಿಗೆ, ಸ್ವಾಮೀಜಿಗಳಿಗೆ ಸಣ್ಣ ಪುಟ್ಟ ತೊಂದರೆಗಳನ್ನು ಕೊಟ್ಟಿದ್ದಾರೆ. ಆದರೆ, ಹತ್ಯೆ ಆಗಿಲ್ಲ. ಹಣಕಾಸಿನ ವಿಚಾರಕ್ಕೆ ಹತ್ಯೆ ನಡೆದಿದೆ ಎಂದು ವರದಿಯಾಗಿದೆ. ಆದರೆ, ಮುನಿಗಳ ಬಳಿ ಹಣ, ಅಂತಸ್ತು ಏನೂ ಇರುವುದಿಲ್ಲ. ಎಲ್ಲವನ್ನೂ ಟ್ರಸ್ಟ್‌ ನೋಡಿಕೊಳ್ಳುತ್ತದೆ. ಹಾಗಾಗಿ, ಹಣಕಾಸಿನ ವಿಚಾರಕ್ಕೆ ನಡೆದಿಲ್ಲ ಎಂಬುದು ನಮ್ಮ ಭಾವನೆ. ಸರ್ಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು. ಸಿಬಿಐನಂತಹ ಸಂಸ್ಥೆಯಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. 

‘ನಮ್ಮದು ಅಲ್ಪಸಂಖ್ಯಾತ ಸಮಾಜ. ರಾಜ್ಯ ಸರ್ಕಾರ ನಮ್ಮ ಮುನಿಗಳಿಗೆ ಹಾಗೂ ಇಡೀ ಸಮಾಜಕ್ಕೆ ರಕ್ಷಣೆ ನೀಡಬೇಕು’ ಎಂದು ಅವರು ಆಗ್ರಹಿಸಿದರು. 

ಸಮಾಜದ ಉಪಾಧ್ಯಕ್ಷ ಸಿ.ವಿ.ನಾಗೇಂದ್ರಯ್ಯ ಸದಸ್ಯರಾದ ಸುರೇಶ್‌ ಕುಮಾರ್‌, ಸತೀಶ್‌, ಕನ್ನಯ್ಯ ಲಾಲ್‌ ಜೈನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.