ADVERTISEMENT

ಚಾಮರಾಜನಗರ | ಸುನಿಲ್‌ ಬೋಸ್‌ ಗೆಲುವು ನಿಶ್ಚಿತ: ನವೀನ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 14:19 IST
Last Updated 28 ಏಪ್ರಿಲ್ 2024, 14:19 IST
ಕೆರೆಹಳ್ಳಿ ನವೀನ್‌
ಕೆರೆಹಳ್ಳಿ ನವೀನ್‌   

ಚಾಮರಾಜನಗರ: ಈ ಬಾರಿಯ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸುನಿಲ್‌ ಬೋಸ್‌ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮಾಧ್ಯಮ ಸಂಯೋಜಕ ಕೆರೆಹಳ್ಳಿ ನವೀನ್‌ ಭಾನುವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಮತದಾನವಾಗಿದೆ. ದಾಖಲೆ ಪ್ರಮಾಣದಲ್ಲಿ ಮತದಾರರು ಹಕ್ಕು ಚಲಾಯಿಸಿರುವುದು ನಮಗೆ ಅನುಕೂಲವಾಗಲಿದೆ. ಎಲ್ಲ ಕ್ಷೇತ್ರಗಳಲ್ಲೂ ಸುನಿಲ್‌ ಬೋಸ್‌ ಮುನ್ನಡೆಗಳಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿವೆ. ರಾಷ್ಟ್ರೀಯ ಮಟ್ಟದಲ್ಲಿ ಘೋಷಿಸಿರುವ ಪಂಚ ನ್ಯಾಯಗಳನ್ನೂ ಜನರು ಬೆಂಬಲಿಸಿದ್ದಾರೆ’ ಎಂಬ ವಿಶ್ವಾಸವಿದೆ.

‘ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಚಾಮರಾಜನಗರ ಸೇರಿದಂತೆ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಾವು ಜಯಗಳಿಸಲಿದ್ದೇವೆ’ ಎಂದರು.  

ADVERTISEMENT

ಪೂರ್ಣ ಬರ ಪರಿಹಾರಕ್ಕೆ ಆಗ್ರಹ: ‘ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಇದ್ದರೂ, ಕೇಂದ್ರ ಸರ್ಕಾರ ಬರ ಪರಿಹಾರ ನೀಡಲಿಲ್ಲ. ಕೊನೆಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಮೇಲೆ ನೀಡಿದೆ. ಸರ್ಕಾರ 18,171 ಕೋಟಿ ಕೇಳಿದ್ದರೆ, ಕೇಂದ್ರ ₹3,454 ಕೋಟಿಯಷ್ಟೇ ನೀಡಿದೆ’ ಎಂದು ನವೀನ್‌ ದೂರಿದರು.

‘ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಹಾಗಿದ್ದರೂ ಕೇಂದ್ರ ಸ್ಪಂದಿಸಿರಲಿಲ್ಲ’ ಎಂದು ದೂರಿದರು.  

‘ಪೂರ್ಣ ಬರ ಪ‍ರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಕೆಪಿಸಿಸಿ ಸೂಚಿಸಿದ್ದು, ಜಿಲ್ಲೆಯಲ್ಲೂ ನಡೆಸಲಾಗುವುದು’ ಎಂದು ನವೀನ್‌ ಹೇಳಿದರು.

ಸೋಲಿನ ಭಯದಿಂದ ಕಾಂಗ್ರೆಸ್‌ ಪಕ್ಷವು ಕ್ಷೇತ್ರದಲ್ಲಿ ಹಣ, ಹೆಂಡದ ಹೊಳೆ ಹರಿಸಿದೆ ಎಂಬ ಬಿಎಸ್‌ಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಚುನಾವಣಾ ಆಯೋಗವು ಅತ್ಯಂತ ಪಾರದರ್ಶಕವಾಗಿ ಚುನಾವಣೆ ನಡೆಸಿದೆ. ಹಣ, ಹೆಂಡದ ಹೊಳೆ ಹರಿಸಿರುವ ಆರೋಪ ಸುಳ್ಳು’ ಎಂದರು. 

ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಪದ್ಮ ಪುರುಷೋತ್ತಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಮುಖಂಡರಾದ ಕರಿನಂಜನಪುರ ಸ್ವಾಮಿ, ಶ್ರಿಕಾಂತ್, ಸೈಯದ್ ತೌಸಿಫ್‌ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.