ADVERTISEMENT

ಬಿಜೆಪಿಯಿಂದ ರಾಮರಾಜ್ಯ ಅಲ್ಲ; ಗೂಂಡಾ ರಾಜ್ಯ: ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 13:59 IST
Last Updated 23 ಜನವರಿ 2024, 13:59 IST
ಅಸ್ಸಾಂನಲ್ಲಿ ರಾಹುಲ್‌ ಗಾಂಧಿ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮಂಗಳವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ಅಸ್ಸಾಂನಲ್ಲಿ ರಾಹುಲ್‌ ಗಾಂಧಿ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮಂಗಳವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ‘ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ್‌ ಜೋಡೊ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದಾಗ ರಾಹುಲ್‌ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು  ಆಗ್ರಹಿಸಿ ಕಾಂಗ್ರೆಸ್‌ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. 

ನಗರದ ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದ ‍ಪ್ರತಿಭಟನಕಾರರು, ಅಸ್ಸಾಂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಭುವನೇಶ್ವರಿ ವೃತ್ತದಲ್ಲಿ ವಾಹನ ಸಂಚಾರ ತಡೆದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಅಸ್ಸಾಂನಲ್ಲಿ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್‌ ಗಾಂಧಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಇದು ಖಂಡನೀಯ. ಅಸ್ಸಾಂ ಸರ್ಕಾರವು ಹಲ್ಲೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.  

‘ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಗೂಂಡಾ ಪ್ರವೃತ್ತಿ ಮೆರೆದಿದ್ದಾರೆ. ಬಿಜೆಪಿಯವರು ಭಾರತದಲ್ಲಿ ರಾಮ ರಾಜ್ಯ ಮಾಡುತ್ತಿಲ್ಲ; ಗೂಂಡಾ ರಾಜ್ಯ ನಿರ್ಮಿಸಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಕಾಂಗ್ರೆಸ್‌ ಜಿಲ್ಲಾ ಸಮಿತಿ ಸದಸ್ಯ ಪಿ.ಮರಿಸ್ವಾಮಿ ಮಾತನಾಡಿ, ‘ರಾಹುಲ್‌ ಗಾಂಧಿಯವರ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿರುವುದನ್ನು ಸಹಿಸದೆ ಬಿಜೆಪಿಯವರು ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ದೂರಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ, ಅರಕಲವಾಡಿ ಗುರುಸ್ವಾಮಿ, ಎಚ್.ವಿ.ಚಂದ್ರು, ತೋಟೋಶ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಲತಾರಾಜಶೇಖರ ಜತ್ತಿ, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಮಹದೇವಶೆಟ್ಟಿ,  ಮಾಜಿ ಸದಸ್ಯರಾದ ಸದಾಶಿವಮೂರ್ತಿ, ರಮೇಶ್, ಕೊಪ್ಪಾಳಿ ಮಹದೇವನಾಯಕ, ಮುಖಂಡರಾದ ಡಿ.ಎನ್.ನಟರಾಜ್, ಸೋಮಣ್ಣ, ನಗರಸಭಾ ಸದಸ್ಯರಾದ ಚಿನ್ನಮ್ಮ, ಆರ್.ಪಿ.ನಂಜುಂಡಸ್ವಾಮಿ, ಕೆಪಿಸಿಸಿ ಸದಸ್ಯ ಸೈಯದ್ ರಫೀ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.