ADVERTISEMENT

ಚಾಮರಾಜನಗರ | ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿ ಕಾಂಗ್ರೆಸ್‌ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 12:31 IST
Last Updated 12 ಜುಲೈ 2023, 12:31 IST
ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿ ಕಾಂಗ್ರೆಸ್‌ ಕಾಂಗ್ರೆಸ್‌ ಕಾರ್ಯಕರ್ತರಿಂದ ಚಾಮರಾಜನಗರದಲ್ಲಿ ಮೌನ ಪ್ರತಿಭಟನೆ
ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿ ಕಾಂಗ್ರೆಸ್‌ ಕಾಂಗ್ರೆಸ್‌ ಕಾರ್ಯಕರ್ತರಿಂದ ಚಾಮರಾಜನಗರದಲ್ಲಿ ಮೌನ ಪ್ರತಿಭಟನೆ   

ಚಾಮರಾಜನಗರ: ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಬುಧವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು. 

ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಕಾರರು ಬಾಯಿಗೆ ಕಪ್ಪುಪಟ್ಟಿ ಧರಿಸಿ ಧರಣಿ ಕುಳಿತರು. 

ಈ ಸಂದರ್ಭದಲ್ಲಿ ಪ್ರತಿಭಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖಂಡ ಆರ್‌.ನರೇಂದ್ರ, ‘ಕೇಂದ್ರದ ಬಿಜೆಪಿ ಸರ್ಕಾರ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದೆ. ಅವರು ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ರಾಜಕೀಯವಾಗಿ ಟೀಕಿಸಿರುವುದನ್ನು ಪ್ರಶ್ನಿಸಿ, ಬೇರೆಯವರಿಂದ ಪ್ರಕರಣ ದಾಖಲಿಸಿ, ಅವರ ಸದಸ್ಯತ್ವ ಅನರ್ಹಗೊಳ್ಳುವಂತೆ ಮಾಡಿದೆ’ ಎಂದು ದೂರಿದರು. 

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪಕ್ಷದವರಿಗೆ ಸರ್ಕಾರ ಹಾಗೂ ಅಧಿಕಾರದಲ್ಲಿರುವವನ್ನು ಟೀಕಿಸುವ ಹಕ್ಕು ಇದೆ. ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು, ಸರ್ಕಾರ ದ್ವೇಷ ಸಾಧಿಸುತ್ತಿದೆ. ಅಲ್ಲದೇ, ಪ್ರಧಾನಿ ಮೋದಿ, ಬಿಜೆಪಿ ಸರ್ಕಾರವನ್ನು ಟೀಕಿಸಿದರೆ ಏನಾಗುತ್ತದೆ? ಎಂಬ ಸಂದೇಶವನ್ನು ಈ ಮೂಲಕ ವಿರೋಧ ಪಕ್ಷದ ನಾಯಕರಿಗೆ ಬಿಜೆಪಿ ನೀಡುತ್ತಿದೆ. ಇದನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದರು. 

ಸಾವಿನ ರಾಜಕೀಯ

ರಾಜ್ಯ ಬಿಜೆಪಿ ಹಾಗೂ ಮುಖಂಡರ ವಿರುದ್ಧವೂ ವಾಗ್ದಾಳಿ ನಡೆಸಿದ ಆರ್‌.ನರೇಂದ್ರ, ‘ನಾಲ್ಕು ವರ್ಷಗಳ ಆಡಳಿತದ ಅವಧಿಯಲ್ಲಿ ಬಿಜೆಪಿ ಅಭಿವೃದ್ಧಿ ಮಾಡದಿರುವುದರಿಂದ ಈಗ ವಿರೋಧ ಪಕ್ಷದಲ್ಲಿ ಕುಳಿತಿದೆ. ಅಧಿಕಾರದಲ್ಲಿದ್ದಾಗಲೂ ಬಿಜೆಪಿಯವರು ಸಾವಿನ ರಾಜಕೀಯ ಮಾಡುತ್ತಾ ಬಂದಿದ್ದರು. ಅಧಿಕಾರ ಕಳೆದುಕೊಂಡು ಎರಡು ತಿಂಗಳು ಆಗಿಲ್ಲ. ಮತ್ತೆ ಸಾವಿನ ರಾಜಕೀಯ ಮಾಡಲು ಹೊರಟಿದ್ದಾರೆ’ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ರಾಹುಲ್‌ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಸರಿಯಲ್ಲ. ಬಿಜೆಪಿಯವರು ದ್ವೇಷ ರಾಜಕಾರಣ ಮಾಡುವುದನ್ನು ಬಿಡಬೇಕು‘ ಎಂದರು. 

ಮುಖಂಡರಾದ ಕಾಗಲವಾಡಿ ಎಂ.ಶಿವಣ್ಣ, ಎಸ್. ಜಯಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರಜತ್ತಿ, ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್, ಅರಕಲವಾಡಿ ಗುರುಸ್ವಾಮಿ, ತೋಟೇಶ್, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ಮುಖಂಡರಾದ ಯೋಗೇಶ್, ಸದಾಶಿವಮೂರ್ತಿ, ಶಕುಂತಲಾ, ಮಹೇಶ್ ಕುದೇರು, ಎಸ್ ಸಿ ವಿಭಾಗದ ಅಧ್ಯಕ್ಷ ನಲ್ಲೂರು ಸೋಮೇಶ್, ಎನ್ಎಸ್ ಯುಐ ಅಧ್ಯಕ್ಷ  ಮೋಹನ್, ನಗು, ಚೇತನ್ ದೊರೆರಾಜು, ನಾಗೇಂದ್ರ, ಯೋಗೇಂದ್ರ, ಅಫ್ಜಲ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.