ADVERTISEMENT

ಗುಂಡ್ಲುಪೇಟೆ | ಸಂವಿಧಾನ ಜಾಗೃತಿ: ಸೈಕಲ್ ರ‍್ಯಾಲಿ, ಆರೋಗ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 16:29 IST
Last Updated 13 ಫೆಬ್ರುವರಿ 2024, 16:29 IST
ಗುಂಡ್ಲುಪೇಟೆಯ ನಿಟ್ರೆ ಗ್ರಾಮದಲ್ಲಿ ಮಂಗಳವಾರ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಶಾಲಾ ಮಕ್ಕಳು ಸೈಕಲ್‌ ರ‍್ಯಾಲಿಯಲ್ಲಿ ಪಾಲ್ಗೊಂಡರು
ಗುಂಡ್ಲುಪೇಟೆಯ ನಿಟ್ರೆ ಗ್ರಾಮದಲ್ಲಿ ಮಂಗಳವಾರ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಶಾಲಾ ಮಕ್ಕಳು ಸೈಕಲ್‌ ರ‍್ಯಾಲಿಯಲ್ಲಿ ಪಾಲ್ಗೊಂಡರು   

ಗುಂಡ್ಲುಪೇಟೆ: ತಾಲ್ಲೂಕಿನ ನಿಟ್ರೆ, ಬೊಮ್ಮನಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂವಿಧಾನ ಜಾಗೃತಿ ಜಾಥಾ ನಡೆಯಿತು. 

ನಿಟ್ರೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಮಹೇಶ್, ಉಪಾಧ್ಯಕ್ಷ ಎಸ್.ಸ್ವಾಮಿ, ಸದಸ್ಯರು ಗ್ರಾಮದ ಯಜಮಾನರು, ವಿವಿಧ ಸಂಘಟನೆಗಳ ಮುಖಂಡರು, ಶಾಲಾ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಜಾಥಾವನ್ನು ಬರಮಾಡಿಕೊಂಡರು.

ಸತ್ತಿಗೆ, ಸೂರಪಾನಿಯೊಂದಿಗೆ ಗಾರುಡಿ ಬೊಂಬೆ, ಮರಗಾಲು ಕುಣಿತ, ಕಂಸಾಳೆ, ನಾದಸ್ವರ, ಡೊಳ್ಳು ಸೇರಿದಂತೆ ಇನ್ನಿತರ ಹಲವಾರು ಕಲಾತಂಡಗಳೊಂದಿಗೆ ಗ್ರಾಮದಲ್ಲಿ ಜಾಗೃತಿ ಜಾಥಾ ಸಂಚರಿಸಿತು. ವಿದ್ಯಾರ್ಥಿಗಳು, ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡರು. ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 

ADVERTISEMENT

ಡಾ.ಬಿ.ಆರ್.ಅಂಬೇಡ್ಕರ್, ಇನ್ನಿತರ ರಾಷ್ಟ್ರ ನಾಯಕರ ವೇಷಭೂಷಣ ಧರಿಸಿದ ಮಕ್ಕಳು ವಾಹನದಲ್ಲಿ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸೈಕಲ್ ರ‍್ಯಾಲಿಯೂ ನಡೆಯಿತು.

ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ‘ಸಂವಿಧಾನ ಸಂಸತ್ತು’ ನಾಟಕ ಪ್ರದರ್ಶನ ನಡೆಯಿತು. ಸಂವಿಧಾನ ಕುರಿತು ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಬೊಮ್ಮನಹಳ್ಳಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು. ಕಳಶ ಹಿಡಿದ ಮಹಿಳೆಯರು, ನಗಾರಿ, ಇನ್ನಿತರ ಕಲಾತಂಡಗಳು ಅದ್ದೂರಿಯಾಗಿ ಜಾಥಾವನ್ನು ಬರಮಾಡಿಕೊಂಡರು.

ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಮಹದೇವಯ್ಯ ಸಂವಿಧಾನ ಆಶಯಗಳು ಹಾಗೂ ಪ್ರಾಮುಖ್ಯ ಕುರಿತು ಉಪನ್ಯಾಸ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದರಾಜಶೆಟ್ಟಿ, ಉಪಾಧ್ಯಕ್ಷೆ ರತ್ನಮ್ಮ, ನೋಡೆಲ್ ಅಧಿಕಾರಿ ಡಾ. ಕೃಷ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ರವಿಚಂದ್ರ, ಇನ್ನಿತರ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.