ಚಾಮರಾಜನಗರ: ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗುಡಿ, ಚರ್ಚ್, ಮಸೀದಿ, ಮಠಗಳಿಂದ ರಕ್ಷಿಸಲು ಸಾಧ್ಯವಿಲ್ಲ. ಮತದಾರರಿಗೆ ಮಾತ್ರ ಆ ಶಕ್ತಿ ಇದೆ’ ಎಂದು ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಸೋಮವಾರ ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿಯು (ಅಂಬೇಡ್ಕರ್ ವಾದ) ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ನಮ್ಮ ಸಂವಿಧಾನವನ್ನು ಕಾಪಾಡಿಕೊಳ್ಳುವುದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮತದಾನದ ಹಕ್ಕು ಕೊಟ್ಟಿದ್ದಾರೆ. ಮತ ಎಂಬುದು ನಮ್ಮ ಸ್ವಂತ ಮಗಳಿದ್ದಂತೆ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಮತವನ್ನು ಯಾರೂ ಮಾರಿಕೊಳ್ಳಬಾರದು. ಪ್ರಾಮಾಣಿಕವಾಗಿ ಮತ ಚಲಾಯಿಸುವ ಮೂಲಕ ಸಂವಿಧಾನಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಆಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯವಾಗುತ್ತದೆ’ ಎಂದರು.
‘ನಮ್ಮ ಸಮಸ್ಯೆಗಳನ್ನು ಯಾವ ಸರ್ಕಾರಗಳೂ ಬಗೆಹರಿಸುವುದಿಲ್ಲ. ಸರ್ಕಾರಗಳು ನಮ್ಮನ್ನು ಉದ್ಧಾರವೂ ಮಾಡುವುದಿಲ್ಲ. ಅಂಬೇಡ್ಕರ್‌ರವರು ತಮ್ಮ ಇಡೀ ಕುಟುಂಬವನ್ನು ತ್ಯಾಗ ಮಾಡಿ ದೇಶಕ್ಕೆ ಸಂವಿಧಾನ ಕೊಟ್ಟಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಸಂವಿಧಾನ ಕೊಟ್ಟಿದ್ದಾರೆ’ ಎಂದರು.
ಮೋದಿ ಸರ್ಕಾರವನ್ನು ಟೀಕಿಸಿದ ಸ್ವಾಮೀಜಿ, ‘ಮೋದಿಯವರ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂದು ಅದ್ದೂರಿ ಭಾಷಣ ಮಾಡಿ, ಹೊಸ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನೇ ಕರೆದಿಲ್ಲ. ಹಳೆಯ ಸಂಸತ್ ಭವನದ ಮುಂದಿರುವ ಅಂಬೇಡ್ಕರ್ ಅವರ ಪ್ರತಿಮೆ ಮೂಲೆಗುಂಪಾಗಿದೆ. ಹೊಸ ಸಂಸತ್ ಭವನವನ್ನು ತಾವರೆ ಹೂನ ರೀತಿಯಲ್ಲಿ ಕಟ್ಟಿಸಿಕೊಂಡಿದ್ದಾರೆ. ಅಲ್ಲಿ ಅಂಬೇಡ್ಕರ್ ಇಲ್ಲ, ಯಾರೂ ಇಲ್ಲ’ ಎಂದು ಕಿಡಿಕಾರಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ‘ಅಂಬೇಡ್ಕರ್ ಅವರು ಏಳು ದಶಕಗಳ ಹಿಂದೆಯೇ ವಿಶ್ವಕ್ಕೆ ಮಾದರಿಯಾದಂತಹ ಸಂವಿಧಾನ ರೂಪಿಸಿಕೊಟ್ಟಿದ್ದಾರೆ. ದೇಶ, ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳು ಸಂವಿಧಾನವನ್ನು ಸಭೆ, ಸಮಾರಂಭಗಳಿಗೆ ಸೀಮಿತಗೊಳಿಸಿವೆ. ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ನಾವು ಎಚ್ಚರಗೊಳ್ಳಬೇಕಿದೆ’ ಎಂದರು.
ಮೌಲಾನ ಮಹಮ್ಮದ್ ಇಸ್ಮಾಯಿಲ್ ರಶೀದ್ ಮಾತನಾಡಿ, ‘ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಸಂವಿಧಾನ ಹಾಳು ಮಾಡಿದರೆ ದೇಶವೂ ಹಾಳಾಗುತ್ತದೆ. ಹಾಗಾಗಿ ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳಿಗೆ ತಕ್ಕಪಾಠ ಕಲಿಸುವ ಕೆಲಸ ಆಗಬೇಕು’ ಎಂದರು.
ಎಂಡಿಇಎಸ್ ಸುಳ್ವಾಡಿ ಧರ್ಮಕೇಂದ್ರದ ವ್ಯವಸ್ಥಾಪಕ ಟನ್ನಿ ಕುರಿಯನ್ ಫಾದರ್, ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿದರು.
ಚನ್ನಲಿಂಗನಹಳ್ಳಿಯ ಮನೋರಕ್ಕಿತ ಬಂತೇಜಿ ಸಾನಿಧ್ಯ ವಹಿಸಿದ್ದರು. ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಸಿದ್ದರಾಜು ದೊಡ್ಡಿಂದುವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಿತಿ ಪ್ರಧಾನ ಸಂಚಾಲಕಿ ನಿರ್ಮಲ, ಬಂಗಾರಸ್ವಾಮಿ, ಎಂ.ಎಸ್.ಮಾದಯ್ಯ, ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಎನ್.ರಾಜಣ್ಣ, ಎಂ.ಶಿವಮೂರ್ತಿ, ರಾಮಲಿಂಗು, ನಾಗಣ್ಣ ಬಡಿಗೇರ್, ರಮೇಶ್, ಭಾಗ್ಯಮ್ಮ, ಮಣಿ, ವೀರಣ್ಣ, ಓಲೆ ಮಹದೇವು, ಕಾಳನಹುಂಡಿ ಮಹೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.