ಚಾಮರಾಜನಗರ: ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು, ಶಾಲಾ ಕಾಲೇಜುಗಳಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಂವಿಧಾನ ಪೀಠಿಕೆಯನ್ನು ಓದಲಾಯಿತು.
ಕಾಂಗ್ರೆಸ್ ಕಚೇರಿ: ನಗರದ ಸತ್ತಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ನಂತರ ಮಾತನಾಡಿದ ಪುಟ್ಟರಂಗಶೆಟ್ಟಿ, ‘ಅಂಬೇಡ್ಕರ್ ಅವರು 1949ರ ನ. 26ರಂದು ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುವ ಮೂಲಕ ಸಮಗ್ರ ಅಭಿವೃದ್ದಿಗೆ ಕಾರಣೀಭೂತರಾದರು. ಈ ದಿನವನ್ನು ನಾವೆಲ್ಲರೂ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಜೊತೆಗೆ ಶೋಷಿತ ಸಮಾಜಗಳು, ತುಳಿತಕ್ಕೂಳದವರಿಗೆ ನ್ಯಾಯ ಕಲ್ಪಿಸಿ, ಅವರ ಆಶಯವನ್ನು ಈಡೇರಿಸಲು ಶ್ರಮಿಸೋಣ’ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್ ಮುನ್ನಾ, ಕಾರ್ಯದರ್ಶಿ ಶಿವಕುಮಾರ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸೋಮೇಶ್, ನಗರಸಭಾ ಸದಸ್ಯರಾದ ಚಿನ್ನಮ್ಮ ನೀಲಮ್ಮ, ಕಲಾವತಿ, ಗ್ರಾಮಾಂತರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಾಗಶ್ರೀ, ನಾಗರತ್ನ, ಭಾಗ್ಯಮ್ಮ, ಸುವರ್ಣಹನೂರು ಇತರರು ಇದ್ದರು.
ಸಂವಿಧಾನ ಗೌರವಿಸುವುದು ಕರ್ತವ್ಯ: ತಾಲೂಕಿನ ದೊಡ್ಡರಾಯಪೇಟೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಗೆ ಪುಷ್ಷಾರ್ಚನೆ ಮಾಡಿ, ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ವಕೀಲ ಆರ್.ಅರುಣ್‌ಕುಮಾರ್ ಮಾತನಾಡಿ, ‘ದೇಶದ ಸಾರ್ವಭೌಮತೆ, ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು ಮಾತನಾಡಿದರು. ಮುಖಂಡ ಜೋಸೆಫ್, ಸದಸ್ಯ ಮೂರ್ತಿ, ನಟರಾಜು, ನಾಗರಾಜು, ಮಹದೇವಸ್ವಾಮಿ, ಯ.ಮಹದೇವಯ್ಯ, ಮೋಹನ್, ಸದಾನಂದ, ಕುಮಾರ್, ಹರೀಶ್, ಅನಿಲ್, ಶಂಕರ್, ಮೋಹನ್, ಮುಕುಂದ, ಕೀರ್ತಿ, ಮಹೇಶ, ಪೊಲೀಸ್ ಇಲಾಖೆಯ ಮಹದೇವಸ್ವಾಮಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಇದ್ದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡಿದರು.
ನಗರದ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲೂ ಕಾರ್ಯಕ್ರಮ ನಡೆಯಿತು. ದಲಿತ ಸಂಘರ್ಷ ಸಮಿತಿಯು (ಡಿ.ಸಾಗರ್) ನಗರದದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಹೆಬ್ಬಾಗಿಲಿನಲ್ಲಿ ಸಂವಿಧಾನ ಸಮರ್ಪಣಾ ದಿನ ಹಮ್ಮಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.