ADVERTISEMENT

ಭಾರತವನ್ನು ಕಟ್ಟುವ ಶಕ್ತಿ ಸಂವಿಧಾನಕ್ಕಿದೆ: ಡಾ.ವಿ.ಷಣ್ಮುಗಂ

ಡಾ.ಬಿ.ಆರ್.ಅಂಬೇಡ್ಕರ್ ಅವರ 132 ಜನ್ಮ ದಿನಾಚರಣೆ ಮತ್ತು ಸಂವಿಧಾನ ದಿನದ ಅಂಗವಾಗಿ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 7:01 IST
Last Updated 27 ನವೆಂಬರ್ 2023, 7:01 IST
<div class="paragraphs"><p>ಡಾ.ಬಿ.ಆರ್.ಅಂಬೇಡ್ಕರ್ ಅವರ 132 ಜನ್ಮ ದಿನಾಚರಣೆ ಮತ್ತು ಸಂವಿಧಾನ ದಿನದ ಅಂಗವಾಗಿ ಭಾನುವಾರ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ನಗರದ ಪೇಟೆ ಪ್ರೈಮರಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ&nbsp;ನುಸಾಹ್ ಫಾತಿಮಾ ಖಾನ್‌ ಸಂವಿಧಾನ ಪೀಠಿಕೆ ವಾಚಿಸಿದಳು. </p></div>

ಡಾ.ಬಿ.ಆರ್.ಅಂಬೇಡ್ಕರ್ ಅವರ 132 ಜನ್ಮ ದಿನಾಚರಣೆ ಮತ್ತು ಸಂವಿಧಾನ ದಿನದ ಅಂಗವಾಗಿ ಭಾನುವಾರ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ನಗರದ ಪೇಟೆ ಪ್ರೈಮರಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ನುಸಾಹ್ ಫಾತಿಮಾ ಖಾನ್‌ ಸಂವಿಧಾನ ಪೀಠಿಕೆ ವಾಚಿಸಿದಳು.

   

ಚಾಮರಾಜನಗರ: ‘ದೇಶದ ಸಂವಿಧಾನವು ಸಾಮಾಜಿಕ ‌ಒಪ್ಪಂದದ ಮೇಲೆ ಸೃಷ್ಟಿಯಾಗಿರುವ ದಾಖಲೆ.  ಸಮೃದ್ಧ ಭಾರತವನ್ನು ಕಟ್ಟುವ ಶಕ್ತಿ ನಮ್ಮ ಸಂವಿಧಾನಕ್ಕೆ ಇದೆ’ ಎಂದು ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಮತ್ತು ಆಡಳಿತಾಧಿಕಾರಿ ಡಾ.ವಿ.ಷಣ್ಮುಗಂ ಭಾನುವಾರ ಪ್ರತಿಪಾದಿಸಿದರು. 

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132 ಜನ್ಮ ದಿನಾಚರಣೆ ಮತ್ತು ಸಂವಿಧಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 

ADVERTISEMENT

‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನ ದೇಶದ ಕಾನೂನಿನ ಮಹಾನ್ ಗ್ರಂಥವಾಗಿದ್ದು, ಎಲ್ಲ ಕಾನೂನುಗಳೂ ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಧಾರ್ಮಿಕ ಜೀವನ ಸಂವಿಧಾನದಡಿ ರೂಪುಗೊಂಡಿದೆ. ದೇಶದಲ್ಲಿ ಆರೋಗ್ಯಕರ ಸಾಮಾಜಿಕ, ಅರ್ಥಿಕ, ರಾಜಕೀಯ ರಚನೆಯಿಂದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರನಿಮಾಣ ಸಂವಿಧಾನದಿಂದ ಸಾಧ್ಯವಾಗಿದೆ. ಸಾಮಾಜಿಕ ಕಲ್ಯಾಣ ಹಾಗೂ ರಾಷ್ಟ್ರ ರಕ್ಷಣೆಯೊಂದಿಗೆ ವ್ಯಕ್ತಿಯ ವ್ಯಕ್ತಿತ್ವವನ್ನು ಅಭಿವೃದ್ಧಿಗೊಳಿಸುವುದೇ ಸಂವಿಧಾನದ ಪ್ರಮುಖ  ಉದ್ದೇಶ’ ಎಂದು ಅವರು ಹೇಳಿದರು. 

‘ಬುದ್ಧರ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಹಾಗೂ ಭ್ರಾತೃತ್ವ ಸಂದೇಶಗಳಿಂದ ಪ್ರಭಾವಿತರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಬ್ರಿಟಿಷರ ಆಳ್ವಿಕೆ ಹಾಗೂ ರಾಜಪ್ರಭುತ್ವದಿಂದ ಮುಕ್ತಗೊಂಡ ಭಾರತಕ್ಕೆ ಸಂವಿಧಾನ ರಚನೆ ಮೂಲಕ ದೇಶದ ಬದಲಾವಣೆಗೆ ಹೊಸ ರೂಪ ಕೊಟ್ಟರು. ಆಧುನಿಕ ಸಮಾಜ ನಿರ್ಮಾಣ ಅಲ್ಲಿಂದಲೇ ಆರಂಭವಾಗಿದೆ. ಅದರ ಫಲವಾಗಿಯೇ ಇಂದು ದೇಶದ ಎಲ್ಲ ಕ್ಷೇತ್ರಗಳಲ್ಲೂ ಪರಿವರ್ತನೆಯಾಗುತ್ತಿದೆ’ ಎಂದು ಷಣ್ಮುಗಂ ಹೇಳಿದರು. 

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಮಾತನಾಡಿ, ‘ಅಂಬೇಡ್ಕರ್ ಅವರು ತಾತ್ವಿಕ ನೆಲೆಗಟ್ಟಿನಲ್ಲಿ ರಚಿಸಿರುವ ಸಂವಿಧಾನದಿಂದ ಭಾರತವು ಸುಭದ್ರ ಹಾಗೂ ಸಾರ್ವಭೌಮ ರಾಷ್ಟ್ರವಾಗಿದೆ. ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿದ ಅಂಬೇಡ್ಕರ್ ಅವರ ಜೀವನ ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿವೆ’ ಎಂದರು. 

‘ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ವಿಶ್ವದಲ್ಲಿಯೇ ಭಾರತ ಮಾದರಿ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಶೋಷಣೆ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಿಕ ಪರಿಹಾರದ ಮೂಲಭೂತ ಹಕ್ಕುಗಳನ್ನು ನೀಡಿ ಆಧುನಿಕ ಭಾರತದ ನಿರ್ಮಾತೃರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಹೇಳಿದರು. 

ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಂವಿಧಾನ ಪೀಠಿಕೆ ಬೋಧಿಸಿದರು.

ತಿ.ನರಸೀಪುರದ ನಳಂದ ಬುದ್ದ ವಿಹಾರದ ಬೋಧಿರತ್ನ ಬಂತೇಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಂವಿಧಾನ ಓದು ಪುಸ್ತಕವನ್ನು ವಿತರಿಸಲಾಯಿತು. ನಗರದ ಪೇಟೆ ಪ್ರೈಮರಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ನುಸಾಹ್ ಫಾತಿಮಾ ಖಾನ್‌ ಸಂವಿಧಾನ ಪೀಠಿಕೆ ವಾಚಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲೆ ನಟರಾಜ್ ಹಾಗೂ ಜನಪದ ಮಹೇಶ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ, ಕೃಷಿ ಜಂಟಿ ನಿರ್ದೇಶಕ ಹಾಗೂ ವಿಚಾರ ಸಂಕಿರಣದ ಉಪಸಮಿತಿ ಅಧ್ಯಕ್ಷ ಆಬೀದ್‌, ನಗರಸಭೆ ಆಯುಕ್ತ ರಾಮದಾಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಇತರರು ಇದ್ದರು.

ನಿರರ್ಗಳವಾಗಿ ಸಂವಿಧಾನ ಪೀಠಿಕೆಯನ್ನು ವಾಚಿಸುವ ನುಸಾಹ್ ಫಾತಿಮಾ ಖಾನ್‌ಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರು ತಮ್ಮ ಮಡಿಲಿನಲ್ಲಿ ಕುಳಿಸಿಕೊಂಡರು. ಜಿ.ಪಂ ಉಪಕಾರ್ಯದರ್ಶಿ ಲಕ್ಷ್ಮಿ ಎಸ್‌ಪಿ ಪದ್ಮಿನಿ ಸಾಹು ಇದ್ದರು

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್‌ಪಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ಇತರರು ಮಾಲಾರ್ಪಣೆ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.