ಚಾಮರಾಜನಗರ: ಕರ್ನಾಟಕ ರಾಜ್ಯ ಸಂವಿಧಾನ ಬಳಗವು ಬುಧವಾರ (ನ.29) ನಗರದಲ್ಲಿ ಸಂವಿಧಾನ ದಿನಾಚರಣೆ ಮತ್ತು ‘ಮಹಾನಾಯಕ’ ಧಾರಾವಾಹಿ ಕಲಾವಿದರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯ ಸಂಪಾದಕ ರಾಘವೇಂದ್ರ ಹುಣಸೂರು ಅವರನ್ನೂ ಸನ್ಮಾನಿಸಲಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಮತ್ತು ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು), ‘ಡಾ. ಬಿ.ಆರ್. ಅಂಬೇಡ್ಕರ್ ಅವರು ಉತ್ಕೃಷ್ಟವಾದ ಸಂವಿಧಾನ ನೀಡುವ ಮೂಲಕ ದೇಶದ ಅಭಿವೃದ್ದಿ ಮತ್ತು ರಕ್ಷಣೆಗೆ ಆದ್ಯತೆ ನೀಡಿದ್ದರು. ಅವರು ಸಂವಿಧಾನವನ್ನು ದೇಶಕ್ಕೆ ನೀಡಿದ ದಿನವನ್ನು ಎಲ್ಲ ಭಾರತೀಯರೂ ಹಬ್ಬದ ಮಾದರಿಯಲ್ಲಿ ಸಂಭ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನ ಬಳಗವು ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ’ ಎಂದರು.
ನಗರದ ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಾ.ಅಂಬೇಡ್ಕರ್ ಅವರ ಜೀವನದ ಕುರಿತಾದ ‘ಮಹಾನಾಯಕ’ ಧಾರಾವಾಹಿಯ ಕಲಾವಿದರಾದ ಜಗನ್ನಾಥ್ ನಿವಗುಣೆ (ರಾಮ್‌ಜೀ ಸತ್ಪಾಲ್ ಪಾತ್ರಧಾರಿ), ಅಥರ್ವ ಕರ್ವೆ (ಅಂಬೇಡ್ಕರ್ ಪಾತ್ರಧಾರಿ), ನಾರಾಯಣಿ ವರ್ಣೆ (ರಮಾಬಾಯಿ ಪಾತ್ರಧಾರಿ) ಅವರನ್ನು ಸನ್ಮಾನಿಸಲಾಗುವುದು. ಈ ಧಾರಾವಾಹಿಗೆ ಪ್ರೋತ್ಸಾಹ ನೀಡುತ್ತಿರುವ ಜೀ ಕನ್ನಡ ಸಂಪಾದಕ ರಾಘವೇಂದ್ರ ಹುಣಸೂರು ಅವರನ್ನೂ ಸನ್ಮಾನಿಸಲಾಗುವುದು’ ಎಂದರು.
‘ವಾಟಾಳು ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತಿ. ನರಸೀಪುರದ ಶ್ರೀ ಭೋಧಿ ರತ್ನ ಬಂತೇಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಮಾರಂಭ ಉದ್ಘಾಟಿಸಲಿದ್ದಾರೆ. ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಅಧ್ಯಕ್ಷತೆ ವಹಿಸುವವರರು. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಅವರು ಸಂವಿಧಾನದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಪ್ರಾಸ್ತಾವಿಕವಾಗಿ ನಾನು ಮಾತನಾಡಲಿದ್ದೇನೆ’ ಎಂದರು.
‘ಸಂವಿಧಾನ ಬಳಗದ ಅಧ್ಯಕ್ಷ ಎಸ್.ಜಯಕಾಂತ್ ಚಾಲುಕ್ಯ, ಭಾರತೀಯ ಬೌದ್ಧ ಮಹಾಸಭಾದ ಉಪಾಧ್ಯಕ್ಷ ಮಹೇಂದ್ರ ಮಾಂಕಾಳೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ’ ಎಂದು ವೆಂಕಟರಮಣಸ್ವಾಮಿ ಹೇಳಿದರು.
ಸಂವಿಧಾನ ಬಳಗದ ಸಿದ್ದರಾಜು, ಶಿವಕುಮಾರ್, ಶಿವಣ್ಣ, ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.