ADVERTISEMENT

ಹನೂರು: ತಲೆ ಎತ್ತಲಿದೆ ಬುದ್ದನ ಬೃಹತ್ ಪ್ರತಿಮೆ

ಒಡೆಯರಪಾಳ್ಯ: ಟಿಬೆಟಿಯನ್ನರ ನಿರಾಶ್ರಿತರ ಶಿಬಿರದಲ್ಲಿ ಪ್ರತಿಷ್ಠಾಪನೆ; 113 ಅಡಿ ಎತ್ತರದ ಅತಿ ದೊಡ್ಡ ಪ್ರತಿಮೆ

ಬಿ.ಬಸವರಾಜು
Published 1 ನವೆಂಬರ್ 2024, 6:37 IST
Last Updated 1 ನವೆಂಬರ್ 2024, 6:37 IST
ಹನೂರು ತಾಲೂಕಿನ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಧ್ಯಾನಸ್ಥ ಬುದ್ಧನ ಪ್ರತಿಮೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ
ಹನೂರು ತಾಲೂಕಿನ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಧ್ಯಾನಸ್ಥ ಬುದ್ಧನ ಪ್ರತಿಮೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ   

ಹನೂರು: ತಾಲ್ಲೂಕಿನ ಒಡೆಯರಪಾಳ್ಯ ಸಮೀಪವಿರುವ ಟಿಬೆಟಿಯನ್ನರ ನಿರಾಶ್ರಿತರ ಶಿಬಿರದಲ್ಲಿ 113 ಅಡಿ ಎತ್ತರದ ಧ್ಯಾನಸ್ಥ ಬುದ್ಧನ ಪ್ರತಿಮೆ ತಲೆ ಎತ್ತುತ್ತಿದ್ದು, ಪ್ರತಿಮೆಯ ಅಡಿಪಾಯದ ಕೆಲಸ ಭರದಿಂದ ಸಾಗಿದೆ.

ಟಿಬೆಟಿಯನ್ ಸಮುದಾಯ ಪ್ರತಿಮೆಯ ನಿರ್ಮಾಣ ಮಾಡುತ್ತಿದ್ದು, ಪ್ರತಿಮೆ ಪ್ರತಿಷ್ಠಾಪಿಸುವ ಸಲುವಾಗಿ ಕಮಲದ ಹೂವಿನ ಆಕಾರದ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಾಥಮಿಕ ಹಂತದ ಕಾಮಗಾರಿ ಮುಗಿಯುತ್ತಿದ್ದಂತೆ ಭೂತಾನ್‌ನಲ್ಲಿ ತಯಾರಿಸಲಾಗಿರುವ ಧ್ಯಾನಸ್ಥ ಬುದ್ಧನ ಪ್ರತಿಮೆಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎನ್ನುತ್ತಾರೆ ಟಿಬೆಟಿಯನ್‌ ಸಮುದಾಯದ ತೆಂಜಿನ್‌.

ಬುದ್ಧನ ಬೃಹತ್ ಮೂರ್ತಿಯ ಪ್ರತಿಷ್ಠಾಪನೆಗೆ ವರ್ಷದ ಹಿಂದೆಯೇ ಭೂಮಿಪೂಜೆ ನೆರವೇರಿಸಲಾಗಿದ್ದು ಅಂದಿನಿಂದ ಕಾಮಗಾರಿ ಭರದಿಂದ ಸಾಗಿದೆ. ಬೂತಾನ್‌ನಿಂದ ಪ್ರತಿಮೆಯನ್ನು ಇಲ್ಲಿಗೆ ತರಿಸಿಕೊಳ್ಳುವ ಕುರಿತು ಸಿದ್ಧತೆಗಳು ನಡೆದಿವೆ. ಎರಡು ವರ್ಷದೊಳಗೆ ಪ್ರತಿಷ್ಠಾಪನಾ ಕಾರ್ಯ ಸಂಪೂರ್ಣವಾಗಿ ಮುಗಿಯಲಿದೆ ಎನ್ನುತ್ತಾರೆ ಶಿಬಿರದಲ್ಲಿ ವಾಸವಿರುವವರು.

ADVERTISEMENT

ಐದು ದಶಕಗಳ ಹಿಂದೆ ಟಿಬೇಟ್‌ನಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದವರಿಗೆ ರಾಜ್ಯದ ಮುಂಡಗೋಡು, ಬೈಲುಗುಪ್ಪೆ ಹಾಗೂ ಒಡೆಯರಪಾಳ್ಯ ಬಳಿ ಸ್ಥಳ ನೀಡಿ ಶಿಬಿರ ನಿರ್ಮಿಸಿಕೊಡಲಾಯಿತು. ಅಂದಿನಿಂದ ಟಿಬೆಟಿಯನ್ ಸಂಸ್ಕೃತಿಯ ಜತೆಗೆ ಆಯಾ ಜಿಲ್ಲೆಗಳ ಆಚಾರ ವಿಚಾರಗಳಲ್ಲೂ ಭಾಗಿಯಾಗುವ ಮೂಲಕ ಟಿಬೆಟನ್ನರು ಸ್ಥಳೀಯರೊಂದಿಗೆ ಸೌರ್ಹಾರ್ದಯುವಾಗಿ ಬದುಕು ಸಾಗಿಸುತ್ತಿದ್ದಾರೆ.

₹ 6 ಕೋಟಿ ವೆಚ್ಚ:

ಶಿಬಿರದಲ್ಲಿರುವ ಬುದ್ಧ ಮಂದಿರದ ಬಳಿ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 'ತಾಮ್ರದಿಂದ ಪ್ರತಿಮೆಯನ್ನು ತಯಾರಿಸಿ ಬಳಿಕ ಚಿನ್ನದ ಬಣ್ಣದ ಲೇಪನ ಮಾಡಲಾಗುತ್ತದೆ. ಪ್ರತಿಮೆಯ ಭಾಗಗಳನ್ನು ಬಿಡಿಬಿಡಿಯಾಗಿ ತಯಾರಿಸಿ, ಇಲ್ಲಿಗೆ ತಂದು ಜೋಡಿಸಲಾಗುತ್ತದೆ. ಪ್ರತಿಮೆ ನಿರ್ಮಾನಕ್ಕೆ ಅಂದಾಜು ₹ 6 ಕೋಟಿ ವೆಚ್ಚವಾಗಲಿದೆ' ಎಂದು ಹೇಳುತ್ತಾರೆ ಶಿಬಿರದ ಅಧಿಕಾರಿಗಳು.

ಪ್ರವಾಸಿ ತಾಣ: ಒಡೆಯರಪಾಳ್ಯ ಬಳಿ ಇರುವ ನಿರಾಶ್ರಿತರ ಶಿಬಿರವು ಬೈಲುಗುಪ್ಪೆ, ಮುಂಡಗೋಡು ಮಾದರಿಯಲ್ಲಿ ಪ್ರವಾಸಿಸ್ಥಳವಾಗಿ  ರೂಪುಗೊಂಡಿದೆ. ಬಿಳಿಗಿರಿರಂಗನಾಥ ಸ್ವಾಮಿ ಹುಲಿರಕ್ಷಿತಾಣ್ಯಕ್ಕೆ ಹೊಂದಿಕೊಂಡಿರುವ ಶಿಬಿರವು ಸುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಸುಂದರ ಪರಿಸರದ ನಡುವೆ ಕಂಗೊಳಿಸುತ್ತಿದೆ.

ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಜನರನ್ನೂ ಇದು ಆಕರ್ಷಿಸುತ್ತಿದೆ. ಇಲ್ಲಿರುವ ಬುದ್ಧ ಮಂದಿರಗಳಲ್ಲಿ ಬಾಲ ಬೌದ್ಧ ಬಿಕ್ಕುಗಳು ಗಮನ ಸೆಳೆಯುತ್ತಾರೆ. ಒಡೆಯರ ಪಾಳ್ಯದಲ್ಲಿ ಐದು ಬೌದ್ಧ ದೇವಾಲಯಗಳಿದ್ದು ಪ್ರತಿ ಮಂದಿರದಲ್ಲೂ ಬುದ್ಧನ ಮೂರ್ತಿಗಳಿವೆ. ಇಲ್ಲಿಗೆ ಬರುವ ಪ್ರವಾಸಿಗರು ಬುದ್ಧನ ಮೂರ್ತಿಗಳ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ.

ವಾರಾಂತ್ಯದಲ್ಲಿ ಕುಟುಂಬ ಸಮೇತ ಭೇಟಿ ನೀಡುವ ಪ್ರವಾಸಿಗರು ದಿನವಿಡಿ ಶಿಬಿರದಲ್ಲಿರುವ ಬುದ್ಧ ಮಂದಿರಗಳಿಗೆ ಭೇಟಿ ನೀಡುತ್ತಾರೆ. ಒಂದು ದಿನದ ಪ್ರವಾಸಕ್ಕೆ ಇದು ಯೋಗ್ಯವಾದ ಸ್ಥಳ ಎನಿಸಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುತ್ತಿರುವವರ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.    ಈಗಾಗಲೇ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿರುವ ಈ ಶಿಬಿರದಲ್ಲಿ ಬುದ್ಧನ ಮೂರ್ತಿ ಪ್ರತಿಷ್ಠಾಪನೆಯಾದರೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ರಾಜ್ಯದಲ್ಲೇ ಅತಿ ಎತ್ತರದ ಬುದ್ಧನ ಪ್ರತಿಮೆ ಹೊಂದಿರುವ ಸ್ಥಳ ಎಂಬ ಹೆಗ್ಗಳಿಕೆಗೂ ಒಡೆಯರಪಾಳ್ಯದ ಶಿಬಿರ ಪಾತ್ರವಾಗಲಿದೆ.

6 ಕೋಟಿ ವೆಚ್ಚದಲ್ಲಿ ಬುದ್ಧನ ಪ್ರತಿಮೆ ನಿರ್ಮಾಣ ಭೂತಾನ್‌ನಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಮೆ ಪ್ರತಿಮೆ ಕೂರಿಸುವ ಮೊದಲ ಹಂತದ ಕಾಮಗಾರಿ ಪ್ರಗತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.