ADVERTISEMENT

ಪತ್ರಕರ್ತರ ಸಂಘದ ಕಟ್ಟಡ ಕಾಮಗಾರಿ ಕಳಪೆ: ಶಾಸಕ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 17:11 IST
Last Updated 11 ಜುಲೈ 2024, 17:11 IST
ಕೊಳ್ಳೇಗಾಲದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಭವನ
ಕೊಳ್ಳೇಗಾಲದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಭವನ   

ಕೊಳ್ಳೇಗಾಲ: ‘ನಗರದಲ್ಲಿ ನಿರ್ಮಾಣವಾಗುತ್ತಿರುವ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ ಅಡಿಪಾಯದ ಕಾಮಗಾರಿ ಕಳಪೆಯಾಗಿದೆ’ ಎಂದು ಶಾಸಕ ಎ.ಆರ್ ಕೃಷ್ಣಮೂರ್ತಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪತ್ರಕರ್ತರ ಸಂಘದ ಕಟ್ಟಡ ಕಾಮಗಾರಿ ಬಹಳ ಕಳಪೆಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅಲ್ಲದೇ ನಾನು ಇಂದು ಕಾಮಗಾರಿಯನ್ನು ವೀಕ್ಷಣೆ ಮಾಡಿ ಬಂದಿದ್ದೇನೆ. ಕಾಮಗಾರಿ ಬಹಳ ಕಳಪೆಯಿಂದ ಕೂಡಿದೆ ನಿರ್ಮಿತಿ ಕೇಂದ್ರದ ಎಂಜಿನಿಯರ್ ಪ್ರತಾಪ್ ಕಾಮಗಾರಿಗಳನ್ನು ಕಳಪೆ ಮಾಡಿಸುತ್ತಿದ್ದಾರೆ ಎಂಬ ಆರೋಪಗಳು ಈಗಾಗಲೇ ಕೇಳಿ ಬರುತ್ತಿದೆ. ಪತ್ರಕರ್ತರ ಕಟ್ಟಡ ಕಾಮಗಾರಿಯನ್ನೇ ಕಳಪೆ ಮಾಡುತ್ತಿದ್ದಾರೆ ಅಂದರೆ ಏನು ಅರ್ಥ’ ಎಂದು ಪ್ರಶ್ನಿಸಿದರು.

‘ನೀವು ನಗರದಲ್ಲಿ ನಡೆಯುವ ಎಲ್ಲಾ ಕಟ್ಟಡ ಕಾಮಗಾರಿಗಳ ಕಳಪೆಯ ಬಗ್ಗೆ ನಿಮ್ಮ ಪತ್ರಿಕೆಯಲ್ಲಿ ಬರೆದು ಆರೋಪ ಮಾಡುತ್ತೀರಿ. ಆದರೆ ನಿಮ್ಮ ಸಂಘದ ಕಟ್ಟಡದ ಕಾಮಗಾರಿಯೇ ಬಹಳ ಕಳಪೆಯಿಂದ ಕೂಡಿದೆ. ಇದರ ಬಗ್ಗೆ ಏಕೆ ಮೌನ ವಹಿಸಿದ್ದೀರಾ’ ಎಂದರು.

ADVERTISEMENT

‘ಇದಕ್ಕೆ ಪತ್ರಕರ್ತರು ಮೌನವಾದರೂ, ನಾವು ಮೊದಲು ಕಟ್ಟಡ ಕಾಮಗಾರಿಗಳನ್ನು ಪರಿಶೀಲಿಸಬೇಕು. ಇಲ್ಲವಾದರೆ ಕಾಮಗಾರಿಗಳು ಸಂಪೂರ್ಣ ಕಳಪೆಯಿಂದ ನಡೆಯುತ್ತದೆ ಮುಂದೆ ನಡೆಯುವ ಕಾಮಗಾರಿಯ ಬಗ್ಗೆ ಪತ್ರಕರ್ತರು ಹದ್ದಿನ ಕಣ್ಣನ್ನು ಇಟ್ಟು ಕಾಮಗಾರಿ ಎಲ್ಲಿ ಉತ್ತಮವಾಗಿದೆ, ಇಲ್ಲೇ ಕಳಪೆಯಾಗಿದೆ ಎಂದು ನೋಡಿಕೊಳ್ಳಬೇಕು’ ಎಂದರು.

₹ 10 ಲಕ್ಷ ಅನುದಾನದ ಕಟ್ಟಡ: ಮಾಜಿ ಶಾಸಕ ಎನ್.ಮಹೇಶ್ ಹಾಗೂ ಮಾಜಿ ಸಂಸದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಇಬ್ಬರು ಜೊತೆಗೂಡಿ ₹ 50 ಲಕ್ಷದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಅದರಲ್ಲಿ ಶಾಸಕರ ನಿಧಿಯಿಂದ ₹ 5 ಲಕ್ಷ ಹಾಗೂ ಸಂಸದ ನಿಧಿಯಿಂದ ₹ 5 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರು. ಒಟ್ಟು ₹ 10 ಲಕ್ಷ ಅನುದಾನದಲ್ಲಿ ಈಗ ಮಾತ್ರ ಕಟ್ಟಡವನ್ನು ನಿರ್ಮಿಸಿದ್ದಾರೆ. ಕಟ್ಟಡ ಕಾಮಗಾರಿಯು ಸಹ ಸಂಪೂರ್ಣ ಕಳಪೆಯಾಗಿದೆ. ಕಬ್ಬಿಣ ಎಂ ಸ್ಯಾಂಡ್ ಕಲ್ಲು ಸೇರಿದಂತೆ ಕಟ್ಟಡದಅನೇಕ  ಸಾಮಗ್ರಿಗಳು ಬಹಳ ಕಳಪೆಯಾಗಿದೆ. ನಗರದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಕಳಪೆಯಾಗುತ್ತಿದ್ದು ಇದೀಗ ಸಾರ್ವಜನಿಕ ವಲಯದಲ್ಲೂ ಸಹ ಭಾರಿ ಚರ್ಚೆಯಾಗುತ್ತಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಉಪವಿಭಾಗಾಧಿಕಾರಿ ಮಹೇಶ್, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಸೇರಿದಂತೆ ಅನೇಕ ಪತ್ರಕರ್ತರು ಹಾಗೂ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.