ADVERTISEMENT

ಚಾಮರಾಜನಗರ: ರೇಷ್ಮೆ ಕೃಷಿಯಲ್ಲಿ ಜಯಿಸಿದ ಮಹದೇವಮ್ಮ

ಗುಂಡ್ಲುಪೇಟೆಯ ಬೇಗೂರಿನ ರೈತ ಮಹಿಳೆಗೆ ಪತಿಯ ಸಹಕಾರ

ಮಲ್ಲೇಶ ಎಂ.
Published 14 ಏಪ್ರಿಲ್ 2022, 19:30 IST
Last Updated 14 ಏಪ್ರಿಲ್ 2022, 19:30 IST
ಹಿ‌ಪ್ಪು ನೇರಳೆ ಗಿಡದ ಪೋಷಣೆಯಲ್ಲಿ ತೊಡಗಿರುವವ ಮಹದೇವಮ್ಮ ಕುಟುಂಬ
ಹಿ‌ಪ್ಪು ನೇರಳೆ ಗಿಡದ ಪೋಷಣೆಯಲ್ಲಿ ತೊಡಗಿರುವವ ಮಹದೇವಮ್ಮ ಕುಟುಂಬ   

ಗುಂಡ್ಲುಪೇಟೆ: ಬೆಳೆದ ಬೆಳೆಗಳೆಲ್ಲ ಬೆಲೆ ಇಲ್ಲದೆ ಕೈ ಸುಡುತ್ತಿದ್ದ ಸಂದರ್ಭದಲ್ಲಿ ಆ ಬೆಳೆಗಳಿಗೆ ವಿರಾಮವಿಟ್ಟ ಮಹಿಳೆಗೆ ರೇಷ್ಮೆ ಕೃಷಿ ಕೈ ಹಿಡಿದಿದೆ. ತಕ್ಕ ಆದಾಯದ ಜೊತೆಗೆ ಪ್ರಗತಿಪರ ರೈತ ಮಹಿಳೆ ಎಂಬ ಹೆಸರನ್ನು ತಂದುಕೊಟ್ಟಿದೆ.

ತಾಲ್ಲೂಕಿನ ಬೇಗೂರು ಹೋಬಳಿಯ ಹಕ್ಕಲಪುರ ಗ್ರಾಮದ ಮಹದೇವಮ್ಮ ಅವರು ಪತಿ ಹಾಗೂ ಇಬ್ಬರು ಮಕ್ಕಳ ಪುಟ್ಟ ಕುಟುಂಬದೊಂದಿಗೆ ರೇಷ್ಮೆ ಕೃಷಿ ಮಾಡಿ ಆದಾಯ ಕಾಣುತ್ತಿದ್ದಾರೆ.

‘ರೇಷ್ಮೆ ಕೃಷಿಯಲ್ಲಿ ಪ್ರತಿ ವರ್ಷವೂ ಐದರಿಂದ ಆರು ಬೆಳೆ ತೆಗೆಯಬಹುದು. ಹತ್ತಿರವಿರುವ ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಬಳಿ ರೇಷ್ಮೆ ಮೊಟ್ಟೆಗಳನ್ನು ತಂದು ಬೆಳೆಸುತ್ತಾರೆ. ರೇಷ್ಮೆ ಇಲಾಖೆಯ ಅನುದಾನ ಬಳಸಿಕೊಂಡು ಬೆಳೆಯಲಾಗುತ್ತದೆ. ಹಿಪ್ಪುನೆರಳೆ ಸೊಪ್ಪು ಬೆಳೆದು ಹುಳುಗಳು ಸಾಕಾಣಿಕೆ ಮಾಡಿ ಗೂಡು ಉತ್ಪದಿಸಿ ಮಾರುಕಟ್ಟೆಗೆ ತರುವವರೆಗೆ ಶ್ರಮ ಬೇಕಾಗುತ್ತದೆ. ಉತ್ತಮ ಗುಣಮಟ್ಟದ ಸೊಪ್ಪುಗಳು ದೊರೆತರೆ ಗೂಡಿನ ಗುಣಮಟ್ಟ ಹೆಚ್ಚು. ಲಾಭವೂ ಜಾಸ್ತಿ ಸಿಗುತ್ತದೆ’ ಎಂಬುದು ಮಹದೇವಮ್ಮ ಮತ್ತು ಅವರ ಪತಿ ಸ್ವಾಮಿ ಅವರ ಅನಿಸಿಕೆ.

ADVERTISEMENT

ಕೃಷಿಯಲ್ಲಿ ಹೆಚ್ಚು ಪುರುಷರು ಯಶಸ್ವಿಯಾಗುತ್ತಿರುವ ಕಾಲದಲ್ಲಿ, ಮಹದೇವಮ್ಮ ಅವರು ರೇಷ್ಮೆ ಬೆಳೆಯುವ ಮುನ್ನ ಸಮಗ್ರ ಬೇಸಾಯ ಮಾಡಿ ಪ್ರಗತಿಪರ ಮಹಿಳೆ ಎಂದು ತಾಲ್ಲೂಕಿನಲ್ಲಿ ಗುರುತಿಸಿಕೊಂಡಿದ್ದಾರೆ. ರೇಷ್ಮೆ ಜೊತೆಯಲ್ಲಿ ಹೈನುಗಾರಿಕೆ, ಆಡು ಸಾಕಾಣಿಕೆ ಮಾಡುತ್ತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.

‘ತರಕಾರಿ ಬೆಳೆಗಳು ಲಾಟರಿ ಹೊಡೆದಂತೆ. ಬೆಲೆಗಳು ಸರಿಯಾಗಿ ಸಿಗದ ಕಾರಣ, ಈರುಳ್ಳಿ, ಟೊಮೆಟೊ ಬೆಳೆಗಳನ್ನು ಕಟಾವು ಮಾಡುವ ಬದಲು ಉಳುಮೆ ಮಾಡಿ ಸಾಲವಂತರಾಗಿದ್ದೇವೆ. ಹಾಗಾಗಿ ಎರಡು ವರ್ಷಗಳಿಂದ ಅವಶ್ಯಕತೆ ತಕ್ಕಂತೆ ತರಕಾರಿ ಬೆಳೆದು ಉಳಿದಂತೆ ರೇಷ್ಮೆ ಬೇಸಾಯ ಮಾಡುತ್ತಿದ್ದೇವೆ’ ಎಂದು ಮಹದೇವಮ್ಮ ಹೇಳಿದರು.

‘ರೇಷ್ಮೆ ಬೆಳೆದು ರಾಮನಗರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ನಷ್ಟ ಕಂಡು ಬಂದಿಲ್ಲ. ಪತಿ ಹಾಗೂ ಮಕ್ಕಳು ಸಹಾಯ ಮಾಡುತ್ತಾರೆ’ ಎನ್ನುವ ಮಹದೇವಮ್ಮ ಅವರಿಗೆ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಕು ಎಂಬ ಹಂಬಲವಿದೆ.

‘ತಾಲ್ಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲ ಮಳೆ ಹಾಗೂ ಕೊಳವೆ ಬಾವಿಗಳನ್ನು ಆಶ್ರಿಯಿಸಿ ಬೆಳೆಗಳನ್ನು ಬೆಳೆಯಬೇಕು. ಮಳೆ ಕೈ ಕೊಟ್ಟರೆ ಕೊಳವೆಬಾವಿಗಳಲ್ಲಿ ನೀರು ಕಡಿಮೆ ಆಗುತ್ತದೆ. ಹಾಗಾಗಿ ಕಡಿಮೆ ನೀರಿನಲ್ಲಿ ಬೇಸಾಯ ಮಾಡುವುದನ್ನ ರೂಡಿಸಿಕೊಳ್ಳಬೇಕು‘ ಎಂಬುದು ಇವರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.