ಚಾಮರಾಜನಗರ: 5ನೇ ಹಂತದ ಅನ್‌ಲಾಕ್ ಆರಂಭವಾದ ನಂತರ ನ್ಯಾಯಾಲಯಗಳು ಕೂಡ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಆದರೆ, ಕೋವಿಡ್–19 ಭೀತಿಯಿಂದಾಗಿ ವಕೀಲರು, ಕಕ್ಷಿದಾರರು, ಸಾಕ್ಷಿಗಳು ನ್ಯಾಯಾಲಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಬುಧವಾರ ನ್ಯಾಯಾಲಯಕ್ಕೆ ಬಂದಿದ್ದ ಇಬ್ಬರು ಸಾಕ್ಷಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಅವರ ಭಯವನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ, ಕೋರ್ಟ್‌ಗೆ ಬರುವ ಸಾರ್ವಜನಿಕರ ಸಂಖ್ಯೆ ದಿಢೀರ್ ಆಗಿ ಕುಸಿದಿದೆ. ವಕೀಲರು ಕೂಡ ಅನಿವಾರ್ಯವಿದ್ದರಷ್ಟೇ ಬರುತ್ತಾರೆ.
ನಗರದಲ್ಲಿರುವ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅಕ್ಟೋಬರ್ ಐದರಿಂದ ಕಲಾಪ ಆರಂಭವಾಗಿದೆ. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಸಾಕ್ಷಿಗಳು, ಆರೋಪಿಗಳು ಸೇರಿದಂತೆ ಎಲ್ಲರನ್ನೂ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಕೋವಿಡ್ ಹಾವಳಿ ಆರಂಭವಾಗಿ ಲಾಕ್‌ಡೌನ್ ಹೇರಿಕೆಯಾದ ನಂತರ ನ್ಯಾಯಾಲಯದ ಕಲಾಪಗಳು ಅಥವಾ ವಿಚಾರಣೆಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯುತ್ತಿತ್ತು. ಜಾಮೀನು ಅರ್ಜಿಗಳು ಹಾಗೂ ತುರ್ತು ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಹಾಗಾಗಿ, ಯಾರೂ ನ್ಯಾಯಾಲಯಕ್ಕೆ ಬರುತ್ತಿರಲಿಲ್ಲ.
ಅನ್‌ಲಾಕ್ 5ನೇ ಹಂತದಲ್ಲಿ ಎಲ್ಲ ನಿಯಮಗಳನ್ನು ಸಡಿಲಿಕೆ ಮಾಡಿರುವುದರಿಂದ ನ್ಯಾಯಾಲಯಗಳು ಮೊದಲಿನ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿವೆ. ಸುಪ್ರೀಂ ಕೋರ್ಟ್ ಕೋವಿಡ್–19 ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಕಾರ್ಯ ಕಲಾಪಗಳು ನಡೆಯುತ್ತಿವೆ.
ಜಿಲ್ಲೆಯಲ್ಲಿ ಅಕ್ಟೋಬರ್ 5ರಿಂದ ನ್ಯಾಯಾಲಯ ಕಾರ್ಯಾರಂಭ ಮಾಡಿದ್ದರೂ, ಬುಧವಾರದಿಂದ ಸಾಕ್ಷಿಗಳನ್ನು ಹಾಜರು ಪಡಿಸಲು ಅವಕಾಶ ನೀಡಲಾಗಿದೆ.
‘ನ್ಯಾಯಾಲಯದಲ್ಲಿ ವಿಚಾರಣೆಗಳು ನಡೆಯುತ್ತಿವೆ. ದಿನಕ್ಕೆ ಐದು ಸಾಕ್ಷಿಗಳಿಗೆ ಮಾತ್ರ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. ನಮ್ಮಲ್ಲಿ ಆರು ನ್ಯಾಯಾಲಯಗಳಿವೆ. ಹಾಗಾಗಿ, 30 ಮಂದಿ ವಿಚಾರಣೆಗೆ ಹಾಜರಾಗಬಹುದು. ನ್ಯಾಯಾಲಯಕ್ಕೆ ಬರುವವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ನಿಯೋಜನೆಗೊಂಡಿದ್ದಾರೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೋವಿಡ್ ಪರೀಕ್ಷೆ: ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯಕ್ಕೆ ಬರುವವರಿಗೆಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ರ‍್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಪರೀಕ್ಷೆ ನಡೆಸುತ್ತಿದ್ದಾರೆ (20 ನಿಮಿಷದಲ್ಲಿ ಫಲಿತಾಂಶ ಬರುತ್ತದೆ). ನೆಗೆಟಿವ್ ಬಂದರಷ್ಟೇ ಒಳಗಡೆ ಬಿಡಲಾಗುತ್ತದೆ.
ನ್ಯಾಯಾಲಯಕ್ಕೆ ಬರುತ್ತಿರುವವರಲ್ಲಿ ಹಲವರು ಪರೀಕ್ಷೆ ನಡೆಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ತಮಗೆಲ್ಲಿಯಾದರೂ ಸೋಂಕು ತಗುಲಿದ್ದರೆ ಎಂಬ ಭಯ ಅವರನ್ನು ಕಾಡುತ್ತಿದೆ. ಜೊತೆಗೆ, ಬುಧವಾರ ನಡೆಸಿದ ಪರೀಕ್ಷೆಯಲ್ಲಿ ಇಬ್ಬರು ಸಾಕ್ಷಿಗಳಿಗೆ ಸೋಂಕು ಇರುವುದು ದೃಢಪಟ್ಟಿರುವುದು ಕಕ್ಷಿದಾರರು, ಸಾಕ್ಷಿಗಳಿಗೆ ಮಾತ್ರವಲ್ಲದೇ ವಕೀಲರಲ್ಲೂ ಭಯ ಉಂಟು ಮಾಡಿದೆ.
‘ಏಳು ತಿಂಗಳಿಂದ ಕೋರ್ಟ್ ಚಟುವಟಿಕೆಗಳು ಬಂದ್ ಆಗಿದ್ದರಿಂದ ಮೊದಲ ಎರಡು ದಿನ ಭಾರಿ ಸಂಖ್ಯೆಯಲ್ಲಿ ಜನರು ನ್ಯಾಯಾಲಯಕ್ಕೆ ಬಂದಿದ್ದರು. ಬುಧವಾರ ಇಬ್ಬರಿಗೆ ಸೋಂಕು ತಗುಲಿರುವುದು ಗೊತ್ತಾಗುತ್ತಿದ್ದಂತೆ, ಜನರ ಸಂಖ್ಯೆ ದಿಢೀರ್ ಆಗಿ ಕುಸಿದಿದೆ’ ವಕೀಲ ಅರುಣ್ ಕುಮಾರ್ ಅವರು ತಿಳಿಸಿದರು.
‘ಎಲ್ಲರಿಗೂ ಕೋವಿಡ್ ಭಯ ಇದ್ದೇ ಇದೆ. ವಕೀಲರನ್ನೂ ಅದು ಬಿಟ್ಟಿಲ್ಲ. ಅನಿವಾರ್ಯ ಇದ್ದ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಕ್ಕೆ ಹೋಗುತ್ತೇವೆ’ ಎಂದು ಅವರು ಹೇಳಿದರು.
‘ಅಕ್ಟೋಬರ್ ಐದು ಮತ್ತು ಆರರಂದು ತುಂಬಾ ಜನರಿದ್ದರು. ಬುಧವಾರದಿಂದ ಕಡಿಮೆಯಾಗಿದ್ದಾರೆ’ ಎಂದು ಭದ್ರತಾ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವಿಚಾರಣೆ ಮುಂದಕ್ಕೆ ಹಾಕಲು ಒಲವು
ನ್ಯಾಯಾಲಯದಲ್ಲಿ ಕೋವಿಡ್–19 ಪರೀಕ್ಷೆಗೆ ಒಳಪಡಬೇಕಾಗುತ್ತದೆ ಎಂಬ ಭಯದಿಂದ ಕೆಲವು ಕಕ್ಷಿದಾರರು ಪ್ರಕರಣ ವಿಚಾರಣೆಯನ್ನು ಮುಂದಕ್ಕೆ ಹಾಕಿಸುವಂತೆ, ಇಲ್ಲವೇ ಇನ್ನಷ್ಟು ಹೆಚ್ಚು ಕಾಲಾವಕಾಶ ಪಡೆಯುವಂತೆ ವಕೀಲರಿಗೆ ದುಂಬಾಲು ಬೀಳುತ್ತಿದ್ದಾರೆ.
‘ಕೆಲವು ಕಕ್ಷಿದಾರರು ನ್ಯಾಯಾಲಯಕ್ಕೆ ಬರಲು ಒಪ್ಪುತ್ತಿಲ್ಲ. ಕೇಸ್ ಅನ್ನು ಮುಂದಕ್ಕೆ ಹಾಕಿಸಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ’ ಎಂದು ವಕೀಲರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.