ADVERTISEMENT

ಪೊಲೀಸ್ ಮನೆಯಲ್ಲೇ ಕಳವು: ಚಿನ್ನಾಭರಣ, ನಗದು ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 18:06 IST
Last Updated 16 ಅಕ್ಟೋಬರ್ 2024, 18:06 IST

ಚಾಮರಾಜನಗರ: ಕಳ್ಳರನ್ನು ಹಿಡಿಯುವ ಪೊಲೀಸರ ಮನೆಯಲ್ಲಿಯೇ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.

ನಗರದ ಸೇವಾಭಾರತಿ ಶಾಲೆಯ ಮುಂಭಾಗದಲ್ಲಿ ವಾಸವಿರುವ ಪಟ್ಟಣ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಮನುಕುಮಾರ್ ಎಂಬುವರ ಮನೆಯಲ್ಲಿ 93 ಗ್ರಾಂ ಚಿನ್ನಾಭರಣ, 1 ಕೆ.ಜಿ 300 ಗ್ರಾಂ ಬೆಳ್ಳಿ ಹಾಗೂ ₹ 40,000 ನಗದು ಕಳವು ಮಾಡಿದ್ದಾರೆ. ಬಾಗಿಲು ನುಗ್ಗಿ ಒಳ ನುಗ್ಗಿರುವ ಕಳ್ಳರು ಮನೆಯ ಬೀರುವಿನಲ್ಲಿ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.

ಮನುಕುಮಾರ್‌ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಳವು ಮಾಡಲಾಗಿದೆ. ಪೊಲೀಸರ ಮನೆಯಲ್ಲಿಯೇ ಕಳವು ನಡೆದಿರುವುದು ಸಾರ್ವಜನಿಕರಲ್ಲಿ ಭೀತಿ ಹೆಚ್ಚಿಸಿದೆ.

ADVERTISEMENT

ಕಳವು ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಇನ್‌ಸ್ಪೆಕ್ಟರ್ ರಾಜೇಶ್ ಭೇಟಿನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌ಪಿ ಮಾಹಿತಿ: ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ 9 ಹಾಗೂ ಅಕ್ಟೋಬರ್‌ನಲ್ಲಿ 9 ಕಳವು ಪ್ರಕರಣಗಳು ದಾಖಲಾಗಿದ್ದು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಳವು ನಡೆದ ಸ್ಥಳಗಳಲ್ಲಿ ಲಭ್ಯ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದ್ದು ಮಹತ್ವದ ಸುಳಿವು ಲಭ್ಯವಾಗಿದ್ದು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು. ಹಳೆಯ ಕಳವು ಪ್ರಕರಣಗಳ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊಳ್ಳೇಗಾಲ ಹಾಗೂ ಚಾಮರಾಜನಗರದಲ್ಲಿ ನಡೆದಿರುವ ಕಳವು ಪ್ರಕರಣಗಳಲ್ಲಿ ಸಾಮ್ಯತೆ ಇದ್ದು ಒಬ್ಬನೇ ಮಾಡಿರುವ ಬಗ್ಗೆ ಅನುಮಾನವಿದೆ ಎಂದು ಎಸ್‌ಪಿ ಕವಿತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.