ಯಳಂದೂರು: ‘ಬೆಳೆ ಸಮೀಕ್ಷೆ ಯೋಜನೆಯೂ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಯದಲ್ಲಿ ಹಿಡುವಳಿದಾರರಿಗೆ ಪರಿಹಾರ ನೀಡಲು ಸಹಾಯವಾಗಲಿದೆ’ ಎಂದು ತಹಶೀಲ್ದಾರ್ ಆರ್.ಜಯಪ್ರಕಾಶ್ ಹೇಳಿದರು.
ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ವಿವಿಧ ಗ್ರಾಮಗಳ ಕೃಷಿ ತಾಕುಗಳಲ್ಲಿ ಬೆಳೆದ ಬೆಳೆ ಮಾದರಿಗಳನ್ನು ಬೆಳೆ ದರ್ಶಕ ಆ್ಯಪ್‌ನಲ್ಲಿ ನಮೂದಿಸಿ ಅವರು ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ಸಾಗುವಳಿದಾರರು ತಮ್ಮ ಹೊಲ, ಗದ್ದೆಗಳಲ್ಲಿ ಬೆಳೆದ ಬೆಳೆಗಳನ್ನು ಮೊಬೈಲ್ ಆ್ಯಪ್ ಬಳಸಿ ಛಾಯಾ ಚಿತ್ರಗಳನ್ನು ತಾವೇ ಅಪ್ಲೋಡ್ ಮಾಡಬಹುದು. ಇಲ್ಲವೇ ಕೃಷಿ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಛಾಯಾಚಿತ್ರ ತೆಗೆದು ಸಂಬಂಧಪಟ್ಟವರಿಗೆ ಕಳುಹಿಸಬಹುದು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಅಮೃತೇಶ್ವರ, ‘ರೈತರು ಸಮೀಕ್ಷೆ ನಡೆಸಲು ಬರುವವರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಋತುಮಾನ ಬೆಳೆ ವೈವಿಧ್ಯತೆ, ಬೆಳೆಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಆ್ಯಪ್‌ನಲ್ಲಿ ದಾಖಲಿಸುವ, ಧ್ವನಿಮುದ್ರಣ ಮಾಡುವ ಅವಕಾಶ ಇದೆ. ಈ ಮಾಹಿತಿಯನ್ನು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಬೆಳೆ ಹಾನಿ ವರದಿ ತಯಾರಿಸಲು, ತಾಕುವಾರು ಬೆಳೆ ಪರೀಕ್ಷಿಸಲು, ಕನಿಷ್ಠ ಬೆಂಬಲ ಬೆಲೆ ಅನುಷ್ಠಾನ, ಆರ್‌ಟಿಸಿಯಲ್ಲಿ ಬೆಳೆ ಮಾಹಿತಿ ನಮೂದಿಸಲು ಅನುಕೂಲ ಆಗಲಿದೆ. ಕೃಷಿ, ರೇಷ್ಮೆ, ತೋಟಗಾರಿಕೆ ಬೆಳೆ ವಿಸ್ತೀರ್ಣ ಎಣಿಕೆ ಕಾರ್ಯದಲ್ಲಿಯೂ ಬಳಸಬಹುದು’ ಎಂದರು.
ಗ್ರಾಮ ಆಡಳಿತಾಧಿಕಾರಿಗಳಾದ ದೇವೇಂದ್ರ ನಾಯಕ್, ರಮೇಶ್, ಚೈತ್ರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.