ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರ ಬದಿಯಲ್ಲಿ ಗಣಿ ಮಾಲೀಕರು ಕ್ರಷರ್‌ನ ತ್ಯಾಜ್ಯಗಳನ್ನು (ಸ್ಲರಿ) ಸುರಿಯುತ್ತಿರುವುದರಿಂದ ಹೆದ್ದಾರಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ತಾಲ್ಲೂಕಿನ ಗರಗನಗಳ್ಳಿ, ಹೆಗ್ಗಡಹಳ್ಳಿ, ರಾಘವಾಪುರದಿಂದ ಬೇಗೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕ್ವಾರಿಯಿಂದ ಸ್ಲರಿಗಳನ್ನು ಸುರಿಯುತ್ತಿದ್ದಾರೆ.
ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತದೆ. ತಾಲ್ಲೂಕಿನ ಬೇಗೂರು, ಹಿರಿಕಾಟಿ ಭಾಗದಿಂದ ಶಾಲಾ ಮಕ್ಕಳನ್ನು ಬೈಕ್‌ನಲ್ಲಿ ಶಾಲೆಗೆ ಕರೆದುಕೊಂಡು ಬರುತ್ತಾರೆ. ರಸ್ತೆಯಲ್ಲಿ ಸುರಿದ ತ್ಯಾಜ್ಯಗಳು ಗಾಳಿಗೆ ದೂಳು ಏಳುತ್ತದೆ. ಇದರಿಂದಾಗಿ ವಾಹನ ಸವಾರರು ಸುರಕ್ಷಿತವಾಗಿ ಚಾಲನೆ ಮಾಡಲು ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಗರಗನಹಳ್ಳಿ ಗೇಟ್ ಬಳಿಯ ಕ್ರಷರ್‌ನಿಂದ ರಾತ್ರಿ ಸಮಯದಲ್ಲಿ ತ್ಯಾಜ್ಯ ತುಂಬಿಕೊಂಡು ಸುರಿದು ಹೋಗುತ್ತಿದ್ದಾರೆ. ತ್ಯಾಜ್ಯ ಒಣಗಿದಂತೆ ದೂಳಾಗಿ ಗಾಳಿ ಬೀಸಿದರೆ ಮತ್ತು ಭಾರಿ ವಾಹನಗಳು ವೇಗವಾಗಿ ಚಲಿಸಿದರೆ ದ್ವಿಚಕ್ರ ಸವಾರರಿಗೆ ಕಣ್ಣಿಗೆ ಬೀಳುತ್ತಿದೆ. ಮಕ್ಕಳ ಶಾಲೆಗೆ ಕರೆದುಕೊಂಡು ಹೋಗಿ ಬರಲು ತೊಂದರೆಯಾಗುತ್ತಿದೆ’ ಎಂದು ಬೇಗೂರಿನ ರಮೇಶ್ ತಿಳಿಸಿದರು.
‘ರಸ್ತೆಯ ಬದಿಯಲ್ಲಿ ಎಳನೀರು, ಹಣ್ಣು ಮುಂತಾದವುಗಳನ್ನು ವ್ಯಾಪಾರ ಮಾಡಲು ಹಳ್ಳಗಳಿಗೆ ಸ್ಲರಿಗಳನ್ನು ಸುರಿಸಿಕೊಳ್ಳುತ್ತಾರೆ ಎಂದು ಚಾಲಕರು ಹೇಳುತ್ತಾರೆ. ಆದರೆ ರಸ್ತೆಯ ಉದ್ದಕ್ಕೂ ತ್ಯಾಜ್ಯವನ್ನು ಸುರಿದಿರುವುದನ್ನು ನೋಡಿದರೆ ಕ್ರಷರ್‌ನಲ್ಲಿ ತ್ಯಾಜ್ಯಗಳನ್ನು ಸಂಗ್ರಹ ಮಾಡಲು ಜಾಗ ಇಲ್ಲದಿರುವುದು ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡದ್ದರಿಂದ ರಸ್ತೆಯಲ್ಲಿ ಸುರಿಯುತ್ತಿದ್ದಾರೆ. ಪಂಚಾಯತಿಯವರಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಾಗಲಿ, ಈ ಸಮಸ್ಯೆ ಬಗ್ಗೆ ಕ್ರಷರ್‌ನವರಿಗೆ ಎಚ್ಚರಿಕೆ ನೀಡದೆ ಅವರೊಂದಿಗೆ ಶಾಮೀಲಾಗಿದ್ದಾರೆ’ ಎಂದು ತಿಳಿಸಿದರು.
ರಸ್ತೆಯಲ್ಲಿ ಜಲ್ಲಿ, ಎಂ.ಸ್ಯಾಂಡ್: ಕ್ರಷರ್‌ನಿಂದ ಜಲ್ಲಿ ಎಂ.ಸ್ಯಾಂಡ್ ತುಂಬಿಕೊಂಡು ಸರಬರಾಜು ಮಾಡುವ ಟಿಪ್ಪರ್ ವಾಹನಗಳು ಮೇಲಿನ ಹೊದಿಕೆಯನ್ನು ಹಾಕದೆ ವೇಗವಾಗಿ ಚಲಿಸುವ ಇದರಿಂದ ಹಿಂಬದಿಯಲ್ಲಿ ಚಲಿಸುವ ದ್ವಿಚಕ್ರ ಮತ್ತು ಸಣ್ಣ ವಾಹನಗಳಿಗೆ ತೊಂದರೆಯಾಗುತ್ತದೆ.
‘ಜೆಲ್ಲಿ ಮತ್ತು ಎಂ.ಸ್ಯಾಂಡ್ ತುಂಬಿದ ವಾಹನಗಳು ವೇಗವಾಗಿ ಚಲಿಸುವುದರಿಂದ ಎಂ.ಸ್ಯಾಂಡ್‌ನಲ್ಲಿ ಸಣ್ಣ ಕಲ್ಲುಗಳು ಗಾಳಿಗೆ ಹಾರಿ ಕಾರಿನ ಗಾಜಿಗೆ ಬಿದ್ದು ಹಾನಿಯಾಗಿರುವ ನಿದರ್ಶನಗಳಿವೆ. ವಾಹನ ಚಾಲಕರು ಸ್ಥಳೀಯರಾಗಿದ್ದು ದರ್ಪದಿಂದ ವರ್ತಿಸುತ್ತಾರೆ ಎಂದು ಅನೇಕರು ಯಾವುದೇ ಮಾತು ಆಡದೆ ದೂರು ನೀಡದೆ ಹೋಗುತ್ತಿದ್ದಾರೆ. ಪಟ್ಟಣದ ಪೊಲೀಸರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಲಾರಿ ಚಾಲಕರು ನಿಯಮಗಳನ್ನು ಪಾಲಿಸದಿದ್ದರೆ ವಾಹನಗಳನ್ನು ವಶಕ್ಕೆ ಪಡೆಯಬೇಕು’ ಎಂದು ಪಟ್ಟಣದ ವೆಂಕಟೇಶ್ ತಿಳಿಸಿದರು.
‘ಪಟ್ಟಣದ ಅನೇಕ ಶಾಲಾ ಕಾಲೇಜುಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವುದರಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ನಡೆದು ಹೋಗುತ್ತಾರೆ. ವೇಗವಾಗಿ ಚಲಿಸುವ ಟಿಪ್ಪರ್‌ಗಳಿಂದ ದೂಳು ಗಾಳಿಗೆ ತೂರಿ ನಡೆದಾಡುವವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಕ್ರಷರ್‌ನ ವಸ್ತುಗಳನ್ನು ಸರಬರಾಜು ಮಾಡಬೇಕಾದರೆ ಮೇಲಿನ ಹೊದಿಕೆ ಹಾಕಿ ಚಾಲನೆ ಮಾಡುವಂತೆ ಪೊಲೀಸರು ತಿಳಿಸಬೇಕು’ ಎಂದು ಒತ್ತಾಯಿಸಿದರು.
ಸ್ಲರಿಗಳನ್ನು ರಸ್ತೆ ಬದಿಯಲ್ಲಿ ಸುರಿಯುವುದನ್ನು ತಡೆಯಲು ಕ್ರಮ ವಹಿಸುವಂತೆ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆಗೆ ತಿಳಿಸಲಾಗುವುದು.–ರಮೇಶ್ ಬಾಬು, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.