ಚಾಮರಾಜನಗರ: ಶಾಲೆ ಆರಂಭವಾಗಿ ಎರಡೂವರೆ ತಿಂಗಳ ನಂತರ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಎರಡು ವಾರಗಳ ಹಿಂದೆ ಸೈಕಲ್‌ನ ಬಿಡಿ ಭಾಗಗಳು ಬಂದಿದ್ದು, ಜೋಡಣೆ ಕಾರ್ಯ ಭರದಿಂದ ನಡೆಯುತ್ತಿದೆ. ಚಾಮರಾಜನಗರ ತಾಲ್ಲೂಕಿನ ಅಮಚವಾಡಿಯ ಪ್ರೌಢಶಾಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಕ್ಕಳಿಗೆ ಸೈಕಲ್ ವಿತರಿಸಿದ್ದಾರೆ.
ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್‌ಗಳನ್ನು ವಿತರಿಸಲಾಗುತ್ತಿದ್ದು, 2019–20ನೇ ಶೈಕ್ಷಣಿಕ ವರ್ಷದಲ್ಲಿ8,527 ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೈಕಲ್‌ಗಳನ್ನು ವಿತರಿಸಲಿದೆ.
ದೂರದಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ಹೋಗುವ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ 2008ರಲ್ಲಿ ಎಂಟನೇ ತರಗತಿಯ ಮಕ್ಕಳಿಗೆ ಸೈಕಲ್ ವಿತರಿಸುವ ಯೋಜನೆ ಜಾರಿಗೆ ತಂದಿತ್ತು.
ಕಳಪೆ ಗುಣಮಟ್ಟದ ಸೈಕಲ್ ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಕಳೆದ ವರ್ಷದ ನವೆಂಬರ್‌ನಲ್ಲಿ ಅಂದಿನ ಎಚ್.ಡಿ.ಕುಮಾರಸ್ವಾಮಿ ಅವರು ಸೈಕಲ್ ವಿತರಣೆಯನ್ನು ತಡೆ ಹಿಡಿದಿದ್ದರು. ಬಳಿಕ 2019ರ ಫೆಬ್ರುವರಿಯಲ್ಲಿ ಸಚಿವ ಸಂಪುಟವು ಸೈಕಲ್ ವಿತರಿಸಲು ಒಪ್ಪಿಗೆ ಸೂಚಿಸಿತ್ತು.
ಆದರೆ, ಈ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸೈಕಲ್‌ಗಳು ಶಾಲೆಗಳಿಗೆ ಬಂದಿರಲಿಲ್ಲ. ಜುಲೈ ತಿಂಗಳ ಕೊನೆಯ ವಾರದಲ್ಲಿ ಬಿಡಿ ಭಾಗಗಳು ಬಂದಿದ್ದವು.
‘ಜಿಲ್ಲೆಯ ಐದು ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಬಿಡಿ ಭಾಗಗಳು ತಲುಪಿವೆ. ಈಗಾಗಲೇ ಜೋಡಣೆ ಕಾರ್ಯ ಆರಂಭವಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ (ಡಿಡಿಪಿಐ) ಪಿ.ಎಸ್.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು: ಐದು ತಾಲ್ಲೂಕುಗಳ ಪೈಕಿ ಚಾಮರಾಜನಗರದಲ್ಲಿ ಅತಿ ಹೆಚ್ಚು ಮಕ್ಕಳು (3,109) ಸೈಕಲ್ ಪಡೆಯಲಿದ್ದಾರೆ. ಚಿಕ್ಕ ತಾಲ್ಲೂಕಾಗಿರುವ ಯಳಂದೂರಿನಲ್ಲಿ 775 ಮಕ್ಕಳಿಗೆ ಇಲಾಖೆ ಸೈಕಲ್ ವಿತರಣೆಯಾಗಲಿದೆ.
ಜೋಡಣೆ ಕಾರ್ಯ: ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಯಲ್ಲಿ ಬಿಡಿ ಭಾಗಗಳನ್ನು ಸಂಗ್ರಹಿಸಲಾಗಿದ್ದು, ಗುತ್ತಿಗೆ ಪಡೆದಿರುವ ಸಂಸ್ಥೆ ನೌಕರರನ್ನು ಇರಿಸಿ ಅಲ್ಲೇ ಜೋಡಣೆ ಮಾಡಲಿದೆ. ಜಿಲ್ಲಾ ಕೇಂದ್ರದಲ್ಲಿರುವ ಬಿಇಒ ಕಚೇರಿಯಲ್ಲಿ ಎರಡು ವಾರಗಳಿಂದ ಜೋಡಣೆ ನಡೆಯುತ್ತಿದೆ. ಉಳಿದ ಕಡೆಗಳಲ್ಲೂ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.