ADVERTISEMENT

ನಟರಾಜ್‌ಗೆ ಟಿಕೆಟ್‌ ನೀಡಲು ಅಭಿಮಾನಿಗಳ ಒತ್ತಾಯ

ಚಾಮರಾಜನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿ ಮೆರವಣಿಗೆ, ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 5:53 IST
Last Updated 7 ಮಾರ್ಚ್ 2024, 5:53 IST
ಡಿ.ಎನ್‌.ನಟರಾಜು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ, ಅವರ ಬೆಂಬಲಿಗರು ಬುಧವಾರ ಚಾಮರಾಜನಗರದಲ್ಲಿ ಮೆರವಣಿಗೆ ನಡೆಸಿದರು
ಡಿ.ಎನ್‌.ನಟರಾಜು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ, ಅವರ ಬೆಂಬಲಿಗರು ಬುಧವಾರ ಚಾಮರಾಜನಗರದಲ್ಲಿ ಮೆರವಣಿಗೆ ನಡೆಸಿದರು   

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಡಿ.ಎನ್‌.ನಟರಾಜು ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ ಅವರ ಅಭಿಮಾನಿಗಳು ಬುಧವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಮನವಿ ಮಾಡಿದ್ದಾರೆ. 

ನೂರಾರು ಅಭಿಮಾನಿಗಳು ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿವರೆಗೂ ಮೆರವಣಿಗೆ ನಡೆಸಿ, ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ದೇಶವಳ್ಳಿ ಹಾಗೂ ಹೆಗ್ಗವಾಡಿಪುರ ಗ್ರಾಮಗಳಿಂದ ಬಂದಿದ್ದ ಅಭಿಮಾನಿಗಳು ಮತ್ತು ಮುಖಂಡರು ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶ ಗೊಂಡರು.  ನಟರಾಜು ಪರ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದ ಗ್ರಾಮಸ್ಥರು ಮೆರವಣಿಗೆಯಲ್ಲಿ ಸಾಗಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಗೆ ತಲುಪಿದರು.  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವ್ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಅಭಿಮಾನಿ ಬಳಗದ ಆನಂದ್ ಮಾತನಾಡಿ, ‘ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿರುವ  ನಟರಾಜು ಅವರು ಉನ್ನತ ವ್ಯಾಸಂಗ ಮಾಡಿ, ಸರ್ಕಾರಿ ಕೆಲಸಕ್ಕೆ ಹೋಗದೆ  ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಹಳ್ಳಿಯಿಂದ ರಾಜ್ಯಮಟ್ಟದವರೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದರು.

ದಿವಂಗತ ಧ್ರುವನಾರಾಯಣ ಅವರ ರೀತಿಯಲ್ಲೇ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ದುಡಿದು,  ಅವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿಗೆ ತಮ್ಮದೇ ಆದ ನೀಲನಕ್ಷೆಯನ್ನು ಸಿದ್ಧಪಡಿಸಿಕೊಂಡು ತಳಮಟ್ಟದ  ಕಾರ್ಯಕರ್ತರ ನೋವು, ನಲಿವಿಗೆ ಸ್ಪಂದಿಸುತ್ತಿದ್ದಾರೆ. ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದ, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು  ನಿಟ್ಟಿನಲ್ಲಿ  ಕೆಲಸ ಮಾಡುತ್ತಿದ್ದಾರೆ’ ಎಂದರು. 

‘ಚಾಮರಾಜನಗರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ.  ಧ್ರುವನಾರಾಯಣ ಅವರ ನಿಧನದ ಬಳಿಕ ಕ್ಷೇತ್ರದಲ್ಲಿ ಡಿ.ಎನ್.ನಟರಾಜು ಸಮರ್ಥರಾಗಿದ್ದಾರೆ. ಇವರಿಗೆ ಕಾಂಗ್ರೆಸ್ ವರಿಷ್ಠರು  ಒಂದು ಅವಕಾಶ ಮಾಡಿಕೊಟ್ಟರೆ, ಕ್ಷೇತ್ರದ ಅಭಿವೃದ್ಧಿ ಜೊತೆಗೆ ಯುವ ಪೀಳಿಗೆಗೆ ಹೆಚ್ಚಿನ ಅವಕಾಶ ಕಲ್ಪಿಸಿದಂತಾಗುತ್ತದೆ’ ಎಂದು ಮನವಿ ಮಾಡಿದರು. 

ನಟರಾಜು ಅಭಿಮಾನಿ ಬಳಗದ, ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದರ್ಶನ್, ಮುಖಂಡರಾದ ವೈ.ಕೆ.ಮೋಳೆ ನಾಗರಾಜು, ಸಂತೇಮರಹಳ್ಳಿ ಶಿವಮ್ಮ,  ಜಗದೀಶ್,  ಯ. ಮಹದೇವಯ್ಯ, ರವಿಕುಮಾರ್ , ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.